ನವದೆಹಲಿ:ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಪ್ರತಿಭಟನೆ ಜತೆ ಕಾಣಿಸಿಕೊಳ್ಳುತ್ತಿರುವ ಜನರಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮಲ್ಲಿ ಈ ಮೊದಲು ಬುದ್ಧಿಜೀವಿಗಳಿದ್ದರು, ಆದರೆ ಈಗ ಹೊಸ ರೀತಿಯ ಜನರು ಬಂದಿದ್ದು ಅವರನ್ನು “ಆಂದೋಲನ್ ಜೀವಿ” ಎಂದು ಕರೆಯಬಹುದಾಗಿದೆ. ಪ್ರತಿಯೊಬ್ಬರು ಇಂತಹ ಜನರ ಮುಖವಾಡ ಕಳಚಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ವಾಷಿಂಗ್ಟನ್ ಸುಂದರ್ ಹೋರಾಟದ ನಡೆವೆಯೂ 241 ರನ್ ಹಿನ್ನಡೆ ಅನುಭವಿಸಿದ ಟೀಂ ಇಂಡಿಯಾ!
ಪ್ರಧಾನಿ ಮೋದಿ ಅವರು ಸೋಮವಾರ (ಫೆ.08, 2021) ರಾಜ್ಯಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿ ಮಾತನಾಡಿದರು.
ಅಷ್ಟೇ ಅಲ್ಲ ಈ ದೇಶದ ಜನರು “ವಿದೇಶಿ ವಿನಾಶಕಾರಿ ವಿಚಾರಧಾರೆ”(ಎಫ್ ಡಿಐ) ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳುವ ಮೂಲಕ ರೈತರ ಪ್ರತಿಭಟನೆಗೆ ವಿದೇಶಿಗರ ಬೆಂಬಲವನ್ನು ಪರೋಕ್ಷವಾಗಿ ಟೀಕಿಸಿದರು.
Related Articles
ಕೇಂದ್ರ ಕೃಷಿ ನೀತಿ ಬಗ್ಗೆ ದೇಶದ ಹಾಗೂ ರೈತರ ದಿಕ್ಕು ತಪ್ಪಿಸಿ, ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ. ನಾನು ಈ ಸದನದ ಮೂಲಕ ಮತ್ತೊಮ್ಮೆ ಭರವಸೆ ನೀಡುತ್ತಿದ್ದೇನೆ, ಎಂಎಸ್ ಪಿ(ಕನಿಷ್ಠ ಬೆಂಬಲ ಬೆಲೆ) ಇರಲಿದೆ, ಮುಂದೆಯೂ ಇರಲಿದೆ ಎಂದು ಹೇಳಿದರು.
ಸುಮಾರು 13 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ 50 ಸಂಸದರು ತಮ್ಮ ಅಮೂಲ್ಯ ಸಲಹೆಯನ್ನು ನೀಡಿದ್ದಾರೆ. ಇದಕ್ಕಾಗಿ ನಾನು ಎಲ್ಲಾ ಸಂಸದರಿಗೆ ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕೋವಿಡ್ ಕಾಲಘಟ್ಟದ ಹಿನ್ನೆಲೆಯಲ್ಲಿ ಇಡೀ ಜಗತ್ತಿನ ಕಣ್ಣು ಭಾರತದ ಮೇಲಿದೆ. ಭಾರತದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ದೇಶದ ಅಭಿವೃದ್ದಿಗೆ ಭಾರತ ನೀಡುವ ಕೊಡುಗೆ ಬಗ್ಗೆ ನಾವು ವಿಶ್ವಾಸ ಇರಿಸಬೇಕಾಗಿದೆ ಎಂದರು.