Advertisement

ಭಾರತಕ್ಕಿದೆ ಕ್ರಾಂತಿಕಾರಿ ಯುವಕರ ಅವಶ್ಯಕತೆ

12:27 PM Jan 28, 2022 | Team Udayavani |

ವಾಡಿ: ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರನ್ನು ನಡುಗಿಸಿದ್ದ ಕೆಚ್ಚೆದೆಯ ನೇತಾಜಿ ಸುಭಾಶ್ಚಂದ್ರ ಬೋಸ್‌, ಶಹೀದ್‌ ಭಗತ್‌ಸಿಂಗ್‌, ಚಂದ್ರಶೇಖರ ಆಜಾದ್‌, ಖುದಿರಾಮ ಬೋಸ್‌ ಅವರಂತ ಕ್ರಾಂತಿಕಾರಿ ಯುವಕರ ಅವಶ್ಯಕತೆ ಸ್ವಾತಂತ್ರ್ಯೋತ್ತರದ ಶೋಷಿತ ಭಾರತಕ್ಕಿದೆ ಎಂದು ಗುಲಬರ್ಗಾ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ| ರಮೇಶ ಲಂಡನಕರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಎಐಡಿಎಸ್‌ಒ, ಎಐಡಿವೈಒ, ಆರ್‌ಕೆಎಸ್‌ ಸಂಘಟನೆಗಳ ವತಿಯಿಂದ ಗುರುವಾರ ಪಟ್ಟಣದ ಅಂಬೇಡ್ಕರ್‌ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಬಡತನ, ನಿರುದ್ಯೋಗ, ಶೋಷಣೆ, ಜಾತಿವಾದ, ಕೋಮುವಾದ, ಭ್ರಷ್ಟಾಚಾರದಿಂದ ಕೂಡಿರುವ ದೇಶದಲ್ಲಿ ಯುವಜನರು ಕೆಟ್ಟ ರಾಜಕಾರಣಕ್ಕೆ ದುರ್ಬಳಕೆಯಾಗುತ್ತಿದ್ದಾರೆ. ಅತ್ಯಂತ ಸರಳವಾಗಿ ಮಾದಕ ವಸ್ತುಗಳು ಯುವಜನರ ಕೈಗೆ ಸಿಗುವಂತಹ ಕೆಟ್ಟ ವ್ಯವಸ್ಥೆ ಬದಲಿಸಲು ಯುವಶಕ್ತಿ ವೈಚಾರಿಕವಾಗಿ ಜಾಗೃತರಾಗಬೇಕಿದೆ. ಇದಕ್ಕಾಗಿ ಅನ್ಯಾಯದ ವಿರುದ್ಧ ಸಿಡಿದೇಳುವ ಮತ್ತು ಹೋರಾಟದ ಮನೋಭಾವ ಮೂಡಿಸುವ ವೈಚಾರಿಕ ಪಠ್ಯ ಶಿಕ್ಷಣ ಜಾರಿಗೆ ಬರಬೇಕು ಎಂದರು.

ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಎಂ.ಜಿ ಮಾತನಾಡಿ, 1947ರಲ್ಲಿ ಆಗಿದ್ದು ಕೇವಲ ರಾಜಕೀಯ ಹಸ್ತಾಂತರ. ಭಿಕ್ಷೆ ರೂಪದಲ್ಲಿ ಶ್ರೀಮಂತರ ಕೈಗೆ ಸ್ವಾತಂತ್ರ್ಯ ನೀಡಿ ತೊಲಗಿದ ಬ್ರಿಟಿಷರು, ಭಾರತದಲ್ಲಿ ಶೋಷಣೆ ಶಾಶ್ವತವಾಗಿರಲು ಕಾರಣರಾದರು. ಕ್ರಾಂತಿಕಾರಿಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ಬಂದಿದ್ದರೆ ದೇಶದ ಸ್ಥಿತಿ ಹೀಗಿರುತ್ತಿರಲಿಲ್ಲ ಎಂದರು.

ಶಿಕ್ಷಣಪ್ರೇಮಿ ಪ್ರಕಾಶ ಚಂದನಕೇರಿ ಮುಖ್ಯ ಅತಿಥಿಯಾಗಿದ್ದರು. ಆರ್‌ಕೆಎಸ್‌ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಮುಖಂಡರಾದ ವೀರಭದ್ರಪ್ಪ ಆರ್‌.ಕೆ, ಶರಣು ಹೇರೂರ, ಮಲ್ಲಿನಾಥ ಹುಂಡೇಕಲ್‌, ಗೌತಮ ಪರತೂರಕರ, ಮಲ್ಲಿಕಾರ್ಜುನ ಗಂದಿ, ವಿಠ್ಠಲ ರಾಠೊಡ, ರಾಜು ಒಡೆಯರಾಜ, ಯೇಸಪ್ಪ ಕೇದಾರ ಮತ್ತಿತರರು ಪಾಲ್ಗೊಂಡಿದ್ದರು. ಗೋವಿಂದ ಯಳವಾರ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next