ಹೊಸದಿಲ್ಲಿ: 2022ರ ಎಎಫ್‌ಸಿ ವನಿತಾ ಏಶ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಆತಿಥ್ಯ ಭಾರತದ ಪಾಲಾಗಿದೆ ಎಂದು ಏಶ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (ಎಎಫ್‌ಸಿ) ಶುಕ್ರವಾರ ಇದನ್ನು ಪ್ರಕಟಿಸಿತು.
ಇದರೊಂದಿಗೆ ಬರೋಬ್ಬರಿ 4 ದಶಕಗಳ ಬಳಿಕ ಭಾರತದಲ್ಲಿ ಈ ಪಂದ್ಯಾವಳಿ ನಡೆಯಲಿದೆ. 1979ರಲ್ಲಿ ಮೊದಲ ಸಲ ನಡೆದಾಗ ಭಾರತ ರನ್ನರ್ ಅಪ್ ಆಗಿತ್ತು.
ಕಳೆದ ಫೆಬ್ರವರಿಯಲ್ಲಿ ಎಎಫ್‌ಸಿ ವನಿತಾ ಫುಟ್ಬಾಲ್ ಸಮಿತಿ ಭಾರತದ ಹೆಸರನ್ನು ಸೂಚಿಸಿತ್ತು. ಇದು ಎಎಫ್‌ಸಿ ಸಭೆಯಲ್ಲಿ ಅಂತಿಮಗೊಂಡಿತು.
‘2022ರ ಎಎಫ್‌ಸಿ ವನಿತಾ ಏಶ್ಯನ್ ಕಪ್ ಫುಟ್ಬಾಲ್ ಫೈನಲ್ಸ್ ಕೂಟದ ಆತಿಥ್ಯವನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ಗೆ (ಎಐಎಫ್‌ಎಫ್) ನೀಡಲಾಗಿದೆ’ ಎಂದು ಎಎಫ್‌ಸಿ ಮಹಾ ಕಾರ್ಯದರ್ಶಿ ಡಾಟೊ ವಿಂಡ್ಸರ್ ಜಾನ್ ಎಐಎಫ್‌ಎಫ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ಲ ಪಟೇಲ್ ಎಎಫ್‌ಸಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತದಲ್ಲಿ ವನಿತಾ ಫುಟ್ಬಾಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಈ ಪಂದ್ಯಾವಳಿ ನೆರವಾಗಲಿದೆ ಎಂಬುದು ಎಐಎಫ್‌ಎಫ್ ಮಹಾ ಕಾರ್ಯದರ್ಶಿ ಕುಶಲ್ ದಾಸ್ ಪ್ರತಿಕ್ರಿಯೆ.
ಅರ್ಹತಾ ಸುತ್ತಿನ ಕೂಟ
ಇದು 2023ರ ಫಿಫಾ ವನಿತಾ ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಅಂತಿಮ ಕೂಟವಾಗಿದ್ದು, 2022ರ ದ್ವಿತೀಯಾರ್ಧದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗೆಯೇ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಫಿಫಾ ಅಂಡರ್-17 ವನಿತಾ ವಿಶ್ವಕಪ್ ಪಂದ್ಯಾವಳಿಗೆ ಹೊಸ ಸ್ಫೂರ್ತಿ ತುಂಬಲಿದೆ.
ಭಾರತ ಇದಕ್ಕೂ ಮೊದಲು 2016ರಲ್ಲಿ ಎಎಫ್‌ಸಿ ಅಂಡರ್-16 ಚಾಂಪಿಯನ್‌ಶಿಪ್ ಮತ್ತು 2017ರಲ್ಲಿ ಫಿಫಾ ಅಂಡರ್-17 ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿತ್ತು.