ನವದೆಹಲಿ:ಮಹಿಳೆಯರ ಪಾಲಿಗೆ ಭಾರತ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಥಾಮ್ಸನ್ ರಾಯಟರ್ಸ್ ಫೌಂಡೇಶನ್ ಇತ್ತೀಚೆಗೆ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ತಿಳಿಸಿದೆ.
ಅಫ್ಘಾನಿಸ್ತಾನ 2ನೇ ಸ್ಥಾನ ಪಡೆದಿದ್ದರೆ, ಸಿರಿಯಾ ಮೂರನೇ ಸ್ಥಾನ ಹಾಗೂ ಸೋಮಾಲಿಯಾ, ಸೌದಿ ಅರೇಬಿಯಾ ನಂತರದ ಸ್ಥಾನ ಪಡೆದಿರುವುದಾಗಿ ಸಮೀಕ್ಷೆ ವಿವರಿಸಿದೆ.
ಅಮೆರಿಕ ಅಚ್ಚರಿ ಎಂಬಂತೆ ಸಮೀಕ್ಷೆಯಲ್ಲಿ ಸ್ಥಾನ ಪಡೆದಿದೆ. ಲೈಂಗಿಕ ಹಿಂಸೆ, ಲೈಂಗಿಕ ಕಿರುಕುಳ ಮತ್ತು ಬಲಾತ್ಕಾರದ ಸೆಕ್ಸ್ ವಿಚಾರದಲ್ಲಿ ಮಹಿಳೆಯರಿಗೆ ಈ ದೇಶಗಳು ತುಂಬಾ ಅಪಾಯಕಾರಿಯಾಗಿದೆ ಎಂದು ಹೇಳಿದೆ.
ಸಮೀಕ್ಷೆಯ ಪ್ರಕಾರ, ಮಹಿಳೆಯರನ್ನು ಬಲವಂತದಿಂದ ಗುಲಾಮಗಿರಿಗೆ ತಳ್ಳುವ ಹಾಗೂ ಲೈಂಗಿಕ ಹಿಂಸೆಯ ವಿಚಾರದಲ್ಲಿ ಭಾರತ ಮಹಿಳೆಯರಿಗೆ ತುಂಬಾ ಅಪಾಯಕಾರಿ ದೇಶವಾಗಿದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲ ಮಹಿಳೆಯರ ಕಳ್ಳಸಾಗಣೆ, ಲೈಂಗಿಕ ಗುಲಾಮಗಿರಿ, ಬಲವಂತದ ಮದುವೆ, ಮನೆಯಲ್ಲಿ ಕೂಡಿಹಾಕಿಕೊಳ್ಳುವುದು ಕೂಡಾ ಹೆಚ್ಚಳವಾಗಿದೆ ಎಂದು ಸಮೀಕ್ಷೆ ವಿವರಿಸಿದೆ.
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಪ್ರಕರಣದ ನಂತರವೂ ಕೂಡಾ ಭಾರತದಲ್ಲಿ ನಡೆಯುತ್ತಿರುವ ಬಲವಂತದ ಘಟನೆಗಳನ್ನು ತಡೆಯುವ ಪ್ರಬಲ ಕಾನೂನು ಬಂದಿಲ್ಲ ಎಂದು ತಿಳಿಸಿದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಮನೇಕಾ ಗಾಂಧಿ ನಿರಾಕರಿಸಿದ್ದಾರೆ.