ಇಸ್ಲಾಮಾಬಾದ್ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನ – ಪಾಕಿಸ್ಥಾನ ಇಕಾನಮಿಕ್ ಕಾರಿಡಾರ್ (ಸಿಪಿಇಸಿ) ಕಾಮಗಾರಿಗಳನ್ನು ಧ್ವಂಸ ಮಾಡುವ ಉದ್ದೇಶದಿಂದ ಭಾರತ ದಾಳಿ ಮಾಡಬಹುದು ಎಂಬ ಭೀತಿ ಪಾಕ್ ಸರಕಾರವನ್ನು ಈಗ ಕಾಡುತ್ತಿದೆ. ಅಂತೆಯೇ ಇಂತಹ ಯಾವುದೇ ಸಂಭಾವ್ಯ ದಾಳಿಗಳನ್ನು ವಿಫಲಗೊಳಿಸುವ ಶತ ಪ್ರಯತ್ನದಲ್ಲಿ ತೊಡಗಿರುವ ಪಾಕಿಸ್ಥಾನ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದೆ ಎಂದು ಪಾಕಿಸ್ಥಾನದ “ಡಾನ್’ ದೈನಿಕ ವರದಿ ಮಾಡಿದೆ.
ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿರುವ ಗಿಲ್‌ಗಿಟ್ – ಬಾಲ್ಟಿಸ್ಥಾನ್ ಸರಕಾರದ ಗೃಹ ಇಲಾಖೆಗೆ ಸಿಪಿಇಸಿ ಕಾಮಗಾರಿಗಳ ಮೇಲೆ ಭಾರತದಿಂದ ದಾಳಿ ನಡೆಯಬಹುದೆಂಬ ಬಗ್ಗೆ ಎಚ್ಚರದಿಂದಿರಲು ಸೂಚಿಸಿ ಪತ್ರ ಬರೆದಿರುವುದಾಗಿ ಡಾನ್ ವರದಿ ಮಾಡಿದೆ.
ಪಾಕ್ ಒಳಾಡಳಿತ ಸಚಿವಾಲಯ ಬರೆದಿರುವ ಪತ್ರದಲ್ಲಿ “ಭಾರತ ಸುಮಾರು 400 ಮುಸ್ಲಿಂ ಯುವಕರನ್ನು ಅಫ್ಘಾನಿಸ್ಥಾನಕ್ಕೆ ಮಿಲಿಟರಿ ತರಬೇತಿಗಾಗಿ ಕಳುಹಿಸಿದ್ದು ಅವರನ್ನು ಬಳಸಿಕೊಂಡು ಸಿಪಿಇಸಿ ಕಾಮಗಾರಿಗಳ ಮೇಲೆ ಭಾರತ ದಾಳಿ ನಡೆಸಬಹುದು’ ಎಂಬ ಎಚ್ಚರಿಕೆಯನ್ನು ನೀಡಿದೆ ಎಂದು ಡಾನ್ ಹೇಳಿದೆ.
ಭಾರತ ದಾಳಿಗೆ ಕಾರಕೋರಂ ಹೆದ್ದಾರಿಯಲ್ಲಿನ ಸೇತುವೆಗಳು ಗುರಿಯಾಗಲಿವೆ ಎಂಬ ಎಚ್ಚರಿಕೆಯನ್ನು ಕೂಡ ಪಾಕ್ ಸರಕಾರ ಈ ಪತ್ರದಲ್ಲಿ ಕೊಟ್ಟಿದೆ ಎಂದು ಡಾನ್ ವರದಿ ತಿಳಿಸಿದೆ.
ಪಾಕ್ ಅಕ್ರಮಿತ ಕಾಶ್ಮೀರವು ವಿವಾದಿತ ಪ್ರದೇಶವಾಗಿದ್ದು ಅಲ್ಲಿ ಚೀನ – ಪಾಕ್ ಜತೆಗೂಡಿ ನಡೆಸುವ ಯಾವುದೇ ಕಾಮಗಾರಿಯು ಭಾರತದ ಸಾರ್ವಭೌಮತ್ವಕ್ಕೆ ವಿರುದ್ಧವಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಭಾರತ ಬಹಳ ಹಿಂದೆಯೇ ಪಾಕಿಗೆ ನೀಡಿದೆ; ಮಾತ್ರವಲ್ಲದೆ ತನ್ನ ಈ ಎಚ್ಚರಿಕೆಯನ್ನು ಪದೇ ಪದೇ ಪುನರುಚ್ಚರಿಸುತ್ತಲೇ ಬಂದಿದೆ.