ಮಸ್ಕತ್: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕೂಟದಿಂದ ಇಂಡಿಯಾ ಮಹಾರಾಜಾಸ್ ತಂಡ ಹೊರಬಿದ್ದಿದೆ. ಗುರುವಾರ ರಾತ್ರಿ ನಡೆದ ವರ್ಲ್ಡ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಐದು ರನ್ ಅಂತರದಿಂದ ಸೋಲನುಭವಿಸಿದ ಮಹಾರಾಜಾಸ್ ತಂಡ ಫೈನಲ್ ರೇಸ್ ನಿಂದ ಹೊರಗುಳಿದಿದೆ.
ಒಮಾನ್ ನ ಅಲ್ ಎಮಿರತ್ ಮೈದಾನದಲ್ಲಿ ನಡೆದ ಪಂದ್ಯ ಬೌಂಡರಿ ಸಿಕ್ಸರ್ ಗಳ ಮಳೆಗೆ ಸಾಕ್ಷಿಯಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ವರ್ಲ್ಡ್ ಜೈಂಟ್ಸ್ ಐದು ವಿಕೆಟ್ ಗೆ 228 ರನ್ ಗಳಿಸಿದರೆ, ಇಂಡಿಯಾ ಮಹಾರಾಜಾಸ್ ತಂಡ 223 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಹರ್ಷಲ್ ಗಿಬ್ಸ್, ಮುಸ್ಟಾರ್ಡ್ ಮತ್ತು ಒಬ್ರಿಯಾನ್ ಬ್ಯಾಟಿಂಗ್ ನೆರವಿನಿಂದ ವರ್ಲ್ಡ್ ಜೈಂಟ್ಸ್ ಕೂಟದ ಅತೀ ದೊಡ್ಡ ಮೊತ್ತ ಕಲೆಹಾಕಿತು. ಗಿಬ್ಸ್ 89 ರನ್ ಗಳಿಸಿದರೆ, ಮುಸ್ಟಾರ್ಡ್ 57 ರನ್ ಗಳಿಸಿದರು. ಕೆವಿನ್ ಒಬ್ರಿಯಾನ್ 34 ರನ್ ಮತ್ತು ಕೊನೆಯಲ್ಲಿ ಜಾಂಟಿ ರೋಡ್ಸ್ 20 ರನ್ ಬಾರಿಸಿದರು. ವರ್ಲ್ಡ್ ಜೈಂಟ್ಸ್ ಇನ್ನಿಂಗ್ಸ್ ನಲ್ಲಿ 19 ಸಿಕ್ಸರ್ ಗಳು ದಾಖಲಾದವು.
ಇದನ್ನೂ ಓದಿ:ಪ್ರಯಾಣಿಕರು ಇನ್ನು ಅತಿಥಿಗಳು: ಏರ್ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ
ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ನಮನ್ ಒಝಾ ಆಸೆಯಾದರು. ಕೇವಲ 51 ಎಸೆತಗಳಲ್ಲಿ 95 ರನ್ ಗಳಿಸಿದ ನಮನ್ ಮತ್ತೊಂದು ಶತಕದಿಂದ ವಂಚಿತರಾದರು. ನಾಯಕ ಯೂಸುಫ್ ಫಠಾಣ್ 22 ಎಸೆತಗಳಲ್ಲಿ 45 ರನ್ ಬಾರಿಸಿದರೆ, ಸಹೋದರ ಇರ್ಫಾನ್ ಪಠಾಣ್ ಕೇವಲ 21 ಎಸೆದಲ್ಲಿ ಆರು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ರನ್ ಗಳಿಸಿದರೂ ಸತತ ವಿಕೆಟ್ ಕಳೆದುಕೊಂಡಿದ್ದು ತಂಡಕ್ಕೆ ಮುಳುವಾಯಿತು.
ಕೊನೆಯ ಓವರ್ ನಲ್ಲಿ ತಂಡಕ್ಕೆ ಗೆಲುವಿಗೆ ಎಂಟು ರನ್ ಅಗತ್ಯವಿತ್ತು. ಬ್ರೆಟ್ ಲೀ ತನ್ನ ಯಾರ್ಕರ್ ಎಸೆತಗಳಿಂದ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಗಳಿಸಲು ಸಾಧ್ಯವಾಗಿದ್ದು ಕೇವಲ ಎರಡು ರನ್ ಮಾತ್ರ. ಈ ಮೂಲಕ ವರ್ಲ್ಡ್ ಜೈಂಟ್ಸ್ ತಂಡ ಗೆಲುವು ಸಾಧಿಸಿತು. ಸೋತ ಇಂಡಿಯಾ ಮಹಾರಾಜಾಸ್ ಕೂಟದಿಂದ ಹೊರಬಿತ್ತು. ಫೈನಲ್ ಪಂದ್ಯ ವರ್ಲ್ಡ್ ಜೈಂಟ್ಸ್ ಮತ್ತು ಏಷ್ಯನ್ ಲಯನ್ಸ್ ನಡುವೆ ನಡೆಯಲಿದೆ.