ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತ ಹೀನಾಯವಾಗಿ ಸೋಲನುಭವಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ ದ್ವಿತೀಯ ಇನ್ನಿಂಗ್ಸ್ ನಲ್ಲಿ ಹೀನಾಯ ಬ್ಯಾಟಿಂಗ್ ಕುಸಿತ ಕಂಡಿತು. ಭಾರತ ನೀಡಿದ ಸುಲಭ ಗುರಿ ಬೆನ್ನತ್ತಿದ ಆಸೀಸ್ ಎಂಟು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಕೇವಲ ಮೂರನೇ ದಿನದಲ್ಲೇ ಪಂದ್ಯ ಅಂತ್ಯವಾಯಿತು. ಸರಣಿಯಲ್ಲಿ ಆಸೀಸ್ 1-0 ಮುನ್ನಡೆ ಸಾಧಿಸಿತು. ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸೀಸ್ ತನ್ನ ಅಜೇಯ ಓಟ ಮುಂದುವರಿಸಿತು.
ಮೊದಲ ಇನ್ನಿಂಗ್ಸ್ ನಲ್ಲಿ 244 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದ್ದ ಭಾರತ, ಬೌಲಿಂಗ್ ನಲ್ಲಿ ಆಸೀಸ್ ಆಟಗಾರರನ್ನು ಕಟ್ಟಿಹಾಕುವಲ್ಲಿ ಯಶಸ್ವಿ ಆಗಿತ್ತು. 191 ರನ್ ಗೆ ಆಸೀಸ್ ಆಲೌಟ್ ಆಗುವ ಮೂಲಕ ತಮ್ಮ ನೆಲದಲ್ಲೇ ಬ್ಯಾಟಿಂಗ್ ಹಿನ್ನೆಡೆಯನ್ನು ಅನುಭವಿಸಿ ಒತ್ತಡಕ್ಕೆ ಸಿಲಕಿತ್ತು. ಎರಡನೇ ದಿನದ ಅಂತ್ಯಕ್ಕೆ ಭಾರತ 53 ರನ್ ಗಳ ಉತ್ತಮ ಮುನ್ನಡೆಯನ್ನು ಕಾಯ್ದುಕೊಂಡಿತ್ತು.
ಮೂರನೇ ದಿನದ ಪ್ರಾರಂಭದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತೀಯ ಆಟಗಾರರು, ಸತತ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಪೆರೇಡ್ ಮಾಡಿತು. ಅನುಭವಿ ಆಟಗಾರ ಚೇತೇಶ್ವರ ಪೂಜಾರ ಒಂದು ರನ್ ಗಳಿಸಿ ಪ್ಯಾಟ್ ಕೆಮ್ಮಿನ್ಸ್ ಎಸೆತದಲ್ಲಿ ಔಟ್ ಆದರು. ಮಾಯಾಂಕ್ ಅಗರ್ವಾಲ್ 9 ರನ್ ಗಳಿಸಿ ಹ್ಯಾಝಲ್ ವುಡ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.ರಹಾನೆ, ನಾಯಕ ವಿರಾಟ್ ಕೊಹ್ಲಿ, ವೃದ್ಧಿಮಾನ್ ಸಾಹ, ಹನುಮಾ ವಿಹಾರಿ ಹೀಗೆ ಬ್ಯಾಟಿಂಗ್ ಜವಬ್ದಾರಿ ನಿಭಾಯಿಸಬೇಕಿದ್ದ ಆಟಗಾರರು ಆಸೀಸ್ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿತು.
ಆಸೀಸ್ ಪರ ದ್ವಿತೀಯ ಇನ್ನಿಂಗ್ಸ್ ನಲ್ಲಿ ಗೇಮ್ ಚೇಜಿಂಗ್ ಬೌಲಿಂಗ್ ಸ್ಪೆಲ್ ಮಾಡಿದ ಹ್ಯಾಝಲ್ ವುಡ್ 5 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ಸಂಕ್ಷಪ್ತ ಸ್ಕೋರ್ :
ಭಾರತ ಮೊದಲ ಇನ್ನಿಂಗ್ಸ್ / ದ್ವಿತೀಯ ಇನ್ನಿಂಗ್ಸ್ : 244 & 36/9
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ / ದ್ವಿತೀಯ ಇನ್ನಿಂಗ್ಸ್ : 191 & 93/2