ಇಪೋ (ಮಲೇಷ್ಯಾ): ಶನಿವಾರದಿಂದ ಇಲ್ಲಿ ಆರಂಭವಾದ ಅಜ್ಲಾನ್ ಶಾ ಹಾಕಿ ಕೂಟದಲ್ಲಿ ಭಾರತ ನಿರಾಸೆ ಅನುಭವಿಸಿದೆ. ವಿಶ್ವದ ಪ್ರಬಲ ತಂಡ, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾಕ್ಕೆ ಭಾರತ ಸೋತು ಹೋಗಿದೆ. ತನ್ನ ಸಂಪೂರ್ಣ ಶಕ್ತಿ ವಿನಿಯೋಗಿಸಿ ಹೋರಾಡಿದರೂ ಭಾರತ 2-3ರಿಂದ ಶರಣಾಯಿತು. ಆದರೂ ಬರೀ ಅನನುಭವಿಗಳಿಂದ ತುಂಬಿರುವ ಭಾರತ ಮೆಚ್ಚುಗೆಗೆ ಪಾತ್ರವಾಯಿತು. ಅಷ್ಟು ಮಾತ್ರವಲ್ಲ ತಾನು ಹಾಕಿಯಲ್ಲಿ ಮತ್ತೆ ಬಲಿಷ್ಠವಾಗುತ್ತಿರುವ ತಂಡ ಎಂಬ ಸೂಚನೆ ರವಾನಿಸಿತು.
ಹಾಲಿ ನಾಯಕ ಮನಿøàತ್ ಸಿಂಗ್ ಅನುಪಸ್ಥಿತಿಯಲ್ಲಿ ಸರ್ದಾರ್ ಸಿಂಗ್ ನೇತೃತ್ವದಲ್ಲಿ ಆಡಲಿಳಿದ ಭಾರತದ ಮೇಲೆ ಬಹಳ ಒತ್ತಡವಿತ್ತು. ಸರ್ದಾರ್, ರಮಣ್ ದೀಪ್, ಗುರ್ಜಂತ್, ಉತ್ತಪ್ಪಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲೇಬೇಕಾದ ಪಂದ್ಯವಿದಾಗಿತ್ತು. ಅಂತಹ ಹಂತದಲ್ಲಿ ಕಣಕ್ಕಿಳಿದ ಭಾರತ ಕೆಲವು ಸಣ್ಣಪುಟ್ಟ ತಪ್ಪುಗಳನ್ನು ಹೊರತುಪಡಿಸಿಯೂ ಅತ್ಯುತ್ತಮ ಪ್ರದರ್ಶನ ನೀಡಿತು.
ಈ ಪಂದ್ಯ ಮಳೆಯಿಂದ ಬಾಧೆಗೊಳಗಾಗಿದ್ದು ಇನ್ನೊಂದು ಗಮನಿಸಬೇಕಾದ ಸಂಗತಿ. ಇಲ್ಲಿ ಎರಡೂ ತಂಡಗಳು ಗೆಲುವಿಗಾಗಿ ಹೋರಾಡಿದವು. ಅದರಲ್ಲೂ ಪೂರ್ಣ ಪ್ರಮಾಣದ ತಂಡದೊಂದಿಗೆ ಕಣಕ್ಕಿಳಿದ ಅರ್ಜೆಂಟೀನಾ ಭರ್ಜರಿಯಾಗಿಯೇ ಆಡಿತು. ದಾಖಲಾದ ಐದೂ ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕ ಬಂದವು ಎನ್ನುವುದು ಇಲ್ಲಿನ ವಿಶೇಷ.
ಅರ್ಜೆಂಟೀನಾ ಪರ ವಿಶ್ವಶ್ರೇಷ್ಠ ಪೆನಾಲ್ಟಿ ಕಾರ್ನರ್ ತಜ್ಞ ಗೊಂಜಾಲೊ ಪೀಲಟ್ ಸತತ 3 ಗೋಲು ಬಾರಿಸಿದರು. ಅವರನ್ನು ಭಾರತ ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪಂದ್ಯದ ಮೊದಲ ಗೋಲು ದಾಖಲಾಗಿದ್ದು 13ನೇ ನಿಮಿಷದಲ್ಲಿ. ಭಾರತದ ಗೋಲ್‌ಕೀಪರ್ ಕೃಷ್ಣನ್ ಪಾಠಕ್‌ರನ್ನು ವಂಚಿಸಿ ಪೀಲಟ್ ಪೆನಾಲ್ಟಿಯನ್ನು ಗೋಲಾಗಿಸಿದರು. 24ನೇ ನಿಮಿಷದಲ್ಲಿ ಮತ್ತೂಮ್ಮೆ ಗೋಲು ಬಾರಿಸಿದರು. ಅಷ್ಟರಲ್ಲಿ ಭಾರತ ಒತ್ತಡಕ್ಕೆ ಸಿಲುಕಿತು. ಗೋಲು ಬಾರಿಸಿ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ಎದುರಿಸಿತು.
ಆಗ ಭಾರತಕ್ಕೆ ಹಿಂದೆ ಒಂದರಂತೆ 3 ಕಾರ್ನರ್‌ಗಳನ್ನು ಲಭಿಸಿದವು. ಮೊದಲ ಎರಡು ವ್ಯರ್ಥವಾಯಿತು. 3ನೇಯದನ್ನು ಯುವ ಕಾರ್ನರ್ ತಜ್ಞ ಅಮಿತ್ ರೋಹಿದಾಸ್ ಯಶಸ್ವಿಯಾಗಿ ಗೋಲುಪೆಟ್ಟಿಗೆಯೊಳಗೆ ದಬ್ಬಿದರು. ಅಂತರ 2-1ಕ್ಕಿಳಿಯಿತು. 31ನೇ ನಿಮಿಷದಲ್ಲಿ ಮತ್ತೂಂದು ಕಾರ್ನರ್ ಲಭಿಸಿತು. ಅಮಿತ್ ರೋಹಿದಾಸ್ ಅದನ್ನೂ ಯಶಸ್ವಿಯಾಗಿ ಪೆಟ್ಟಿಗೆಯೊಳಗೆ ಮುಟ್ಟಿಸಿದರು. ಅಲ್ಲಿಗೆ ಇತ್ತಂಡಗಳು ಸಮಬಲಕ್ಕೆ ಬಂದವು.
ಇದಾದ ಕೆಲವೇ ನಿಮಿಷದಲ್ಲಿ ಅರ್ಜೆಂಟೀನಾ ಪೆನಾಲ್ಟಿ ದೈತ್ಯ ಪೀಲಟ್ ಮತ್ತೂಮ್ಮೆ ಗೋಲು ಬಾರಿಸಿ ಮುನ್ನಡೆಯನ್ನು 3-1ಕ್ಕೇರಿಸಿದರು. ಅಷ್ಟರಲ್ಲಿ ಮಳೆ ಶುರುವಾಯಿತು. ಸಿಡಿಲು, ಮಿಂಚುಗಳ ಭರ್ಜರಿ ಮಳೆಯ ಕಾರಣ ಪಂದ್ಯ 1 ಗಂಟೆ ನಿಂತುಹೋಯಿತು. ಮತ್ತೆ ಶುರುವಾದಾಗ ಭಾರತ ಶಕ್ತಿ ಮೀರಿ ಗೆಲ್ಲುವುದಕ್ಕೆ ಯತ್ನಿಸಿದರೂ ಅದ್ಯಾವುದೂ ಫಲಕೊಡಲಿಲ್ಲ. ವಾಸ್ತವವಾಗಿ ಭಾರತಕ್ಕೆ ಪಂದ್ಯಾರಂಭವಾಗಿ ಮೊದಲನೇ 10 ನಿಮಿಷದೊಳಗೆ ಗೋಲು ಗಳಿಸುವ ಅವಕಾಶವಿತ್ತು. ಸುಮಿತ್ ಕುಮಾರ್ ಭರ್ಜರಿಯಾಗಿ ಚೆಂಡನ್ನು ತಳ್ಳಿಕೊಂಡು ಸಾಗಿ ಗೋಲುಪೆಟ್ಟಿಗೆಯತ್ತ ಸಾಗಿದ್ದರು. ಇನ್ನೇನು ಗೋಲು ಬಾರಿಸಿಯೇ ಬಿಟ್ಟರು ಅನ್ನುವಾಗ ಅರ್ಜೆಂಟೀನಾ ಗೋಲುಕೀಪರ್ ಅದನ್ನು ತಡೆದರು.
ಭಾರತ ಭಾನುವಾರದ ಪಂದ್ಯದಲ್ಲಿ ಮತ್ತೂಂದು ಬಲಿಷ್ಠ ತಂಡ ಇಂಗ್ಲೆಂಡನ್ನು ಎದುರಿಸಲಿದೆ. ಇದು ಸೇರಿ ಭಾರತಕ್ಕೆ ಇನ್ನು ನಾಲ್ಕು ಪಂದ್ಯ ಬಾಕಿಯಿದ್ದು, ಅಷ್ಟರಲ್ಲೂ ಅತ್ಯುತ್ತಮವಾಗಿ ಆಡಿದರೆ ಮಾತ್ರ ಪ್ರಶಸ್ತಿ ಕನಸನ್ನು ಉಳಿಸಿಕೊಳ್ಳಲಿದೆ.