ಬಾಂಗ್ಲಾದೇಶ: ಈಗಾಗಲೇ ಸೆಮಿಫೈನಲ್ ಹಂತಕ್ಕೇರಿರುವ ಭಾರತೀಯ ವನಿತೆಯರು ಸೋಮವಾರ ನಡೆಯುವ ವನಿತಾ ಏಷ್ಯಾ ಕಪ್ ಕ್ರಿಕೆಟ್ ಕೂಟದ ಪಂದ್ಯದಲ್ಲಿ ಥೈಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಭಾರತವು ಇನ್ನಷ್ಟು ಪ್ರಯೋಗಗಳನ್ನು ನಡೆಸುವ ಸಾಧ್ಯತೆಯಿದೆ.
ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಈ ಕೂಟದ ಪ್ರತಿಯೊಂದು ಪಂದ್ಯ ಗಳಲ್ಲಿಯೂ ಭಾರತವು ತನ್ನ ಆಟವಾಡದ ಆಟಗಾರರಿಗೆ ಆಡಲು ಅವಕಾಶ ಕಲ್ಪಿಸುತ್ತ ಬಂದಿದೆ. ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಏಳನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಈ ನಡೆಯಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.
ಶಫಾಲಿ ವರ್ಮ ಫಾರ್ಮ್ ಗೆ ಮರಳಿರುವುದು ಬಲುದೊಡ್ಡ ಅಂಶವಾಗಿದೆ. ಅವರು ಈ ಹಿಂದಿನ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. ಸ್ಮತಿ ಮಂಧನಾ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಕಳೆದ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದ್ದ ಹರ್ಮನ್‌ಪ್ರೀತ್ ಕೌರ್ ಸೋಮವಾರದ ಅಂತಿಮ ಲೀಗ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.
ಗಾಯದಿಂದ ಚೇತರಿಸಿಕೊಂಡಿರುವ ಜೆಮಿಮಾ ರೋಡ್ರಿಗಸ್ ಈ ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದಾರೆ.
ಥೈಲೆಂಡ್ ತಂಡವನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಪಾಕಿಸ್ಥಾನವನ್ನು ಸೋಲಿಸಿದ್ದ ಥಾçಲಂಡ್ ಕಳೆದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಎಂಟಂಕ ಹೊಂದಿರುವ ಭಾರತ ಅಗ್ರಸ್ಥಾನದಲ್ಲಿದೆ. ಈ ಹಿಂದೆ 2018ರ ಏಷ್ಯಾ ಕಪ್‌ನಲ್ಲಿ ಥೈಲೆಂಡ್ ವಿರುದ್ಧ ಆಡಿದ ವೇಳೆ ಭಾರತ ಸುಲಭ ಗೆಲುವು ದಾಖಲಿಸಿತ್ತು.