ಕುಂದಾಪುರ: ಬೆಳಗ್ಗೆ 7ರಿಂದ 11 ಗಂಟೆವರೆಗೆ ದಿನಬಳಕೆ ವಸ್ತುಗಳ ಖರೀದಿಗೆ ಸಮಯ ಅವಕಾಶ ನೀಡಲಾಗಿದ್ದು ಅದರ ಅನಂತರ ಬಂದವರಿಗೆ ನಗರದ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ.
ಅಡುಗೆ ಅನಿಲ, ಬ್ಯಾಂಕ್ ಮೊದಲಾದ ಕಾರಣಗಳಿಗೆ ಬರುವವರನ್ನು ಕೂಡಾ ಸೋಮವಾರ ಶಾಸ್ತ್ರಿ ಸರ್ಕಲ್‌ನಲ್ಲಿ ಪೊಲೀಸರು ನಾಳೆ ಬರುವಂತೆ ಹೇಳಿ ಮರಳಿ ಮನೆಗೆ ಕಳುಹಿಸಿದರು. ಬ್ಯಾಂಕುಗಳು ಅಪರಾಹ್ನ ಎರಡು ಗಂಟೆವರೆಗೆ ತೆರೆದಿದ್ದವು. ಆದರೆ 11ರ ಅನಂತರವೂ ಓಡಾಟಕ್ಕೆ ಅವಕಾಶ ನೀಡಿದರೆ ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚು ಎಂದು ಮನಗಂಡ ಪೊಲೀಸರು 11 ಗಂಟೆಯ ಅನಂತರ ಅವಕಾಶ ನೀಡಲಿಲ್ಲ. ಮೆಡಿಕಲ್, ಆಸ್ಪತ್ರೆ ಮೊದಲಾದ ತುರ್ತು ಕೆಲಸಗಳಿಗೆ ಮಾತ್ರ ನಗರ ಪ್ರವೇಶ ಅವಕಾಶ ನೀಡಿದರು.
ಲಾಠಿ ಎತ್ತದೆ ಮಾತಿನಲ್ಲೇ ತಿಳಿಸುವ ಮೂಲಕ ಇಂದು ಕೂಡಾ ಪೊಲೀಸರು ಸಾವಧಾನವಾಗಿಯೇ ಸಾರ್ವಜನಿಕರ ಜತೆ ತಿಳಿಹೇಳುವ ಕೆಲಸ ನಡೆಸಿದರು. ಹಾಗಿದ್ದರೂ ಒಬ್ಬರೇ ಬಂದು ಮುಗಿಸುವ ಕೆಲಸಗಳಿಗೆ ಇಬ್ಬರು ಮೂವರು ಬರುತ್ತಿದ್ದುದೂ ಕಂಡು ಬಂತು.
ವಲಸೆ ಕಾರ್ಮಿಕರು ಊರಿಗೆ ಕಳುಹಿಸಿ ಎಂದು ಪೊಲೀಸರ ಬಳಿ ಮೊರೆ ಇಡುವ ದೃಶ್ಯ ಇಂದು ಕೂಡಾ ಮುಂದುವರಿದಿದೆ. ಪೊಲೀಸರು ಖಾಸಗಿ ವಾಹನಗಳಲ್ಲಿ ಸಾಧ್ಯವಿದ್ದಷ್ಟು ದೂರ ಹೋಗಲು ಮಾನವೀಯ ನೆಲೆಯಲ್ಲಿ ಅವಕಾಶ ನೀಡಿದರು. ಆದರೆ ದೂರದ ಊರಿಗೆ ಹೋಗಲು ಗಡಿ ಬಂದ್ ಆದ ಕಾರಣ ಸಾಧ್ಯವಿಲ್ಲದಾಗಿದೆ. ಅವರಿಗೆ ನೆಹರು ಮೈದಾನ ಬಳಿ ತಾತ್ಕಾಲಿಕ ವಸತಿ ನೆಲೆ ಕಲ್ಪಿಸಲಾಗಿದೆ.
ತಾಲೂಕು ಆಡಳಿತದ ವತಿಯಿಂದ ಅವರಿಗೆ ಇಂದಿರಾ ಕ್ಯಾಂಟಿನ್ ಮೂಲಕ ಆಹಾರ ನೀಡಲಾಗುತ್ತಿದೆ.