Advertisement

Operation Kaveri ; ಸೂಡಾನ್‌ ಕಾರ್ಯಾಚರಣೆ ಶುರು ಸ್ತುತ್ಯರ್ಹ

12:43 AM Apr 25, 2023 | Team Udayavani |

ಅಧಿಕಾರಕ್ಕಾಗಿ ಸೂಡಾನ್‌ ಸೇನೆ ಮತ್ತು ಅಲ್ಲಿನ ಅರೆ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಹೋರಾಟದಲ್ಲಿ 800 ಮಂದಿ ಕನ್ನಡಿಗರೂ ಸೇರಿದಂತೆ 3 ಸಾವಿರ ಮಂದಿ ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಪಾರು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ “ಆಪರೇಷನ್‌ ಕಾವೇರಿ’ ಎಂಬ ಹೆಸರಿನ ರಕ್ಷಣ ಕಾರ್ಯಾಚರಣೆಯನ್ನು ಶುರು ಮಾಡಿರುವುದು ಸ್ತುತ್ಯರ್ಹವಾದ ಸಂಗತಿ ಯಾಗಿದೆ. ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರೇ ಸೋಮವಾರ ಟ್ವೀಟ್‌ ಮಾಡಿದ ಮಾಹಿತಿಯಂತೆ ಸದ್ಯ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಈ ಕಾರ್ಯಕ್ಕಾಗಿ ಐಎನ್‌ಎಸ್‌ ಸುಮೇಧ, ಐಎಎಫ್ನ ಸಿ-130ಜೆ ಎಂಬ ಎರಡು ಬೃಹತ್‌ ವಿಮಾನಗಳನ್ನು ಪೋರ್ಟ್‌ ಸೂಡಾನ್‌ಗೆ ಕಳುಹಿಸಲಾಗಿದೆ.

Advertisement

ಹೀಗಾಗಿ ಆಂತರಿಕ ಸಂಘರ್ಷದಿಂದ ಬಳಲಿ ಬೆಂಡಾಗಿರುವ ರಾಷ್ಟ್ರದಿಂದ ನಮ್ಮವರನ್ನು ಕರೆ ತರುವ ಕೆಲಸ ಶುರುವಾಗಿದೆ. ಇದರಿಂದ ಅಲ್ಲಿ ಸಿಲುಕಿದ್ದ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ. ಆಂತರಿಕ ಸಂಘರ್ಷವೋ, ಯುದ್ಧಕ್ಕೆ ತುತ್ತಾಗಿರುವ ಯಾವುದೇ ಒಂದು ದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಮ್ಮವರನ್ನು ಸುರಕ್ಷಿತವಾಗಿ ಕರೆದು ತರಬೇಕಾದರೆ ಬಹಳಷ್ಟು ಎಚ್ಚರಿಕೆಯನ್ನು ವಹಿಸಲೇಬೇಕಾಗುತ್ತದೆ. ಇತ್ತೀಚೆಗೆ ಕೆಲವು ಮುಖಂಡರು ಕೇಂದ್ರ ಸರಕಾರ ನಿರ್ಲಿಪ್ತವಾಗಿ ಕುಳಿತಿದೆ. ಅವರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಕಟುವಾಗಿ ಟೀಕಿಸಿದ್ದರು. ಇದು ನಿಜಕ್ಕೂ ಖಂಡನೀಯ ವಿಚಾರ. ನಿಗದಿತ ದೇಶದಲ್ಲಿ ರಾಯಭಾರ ಕಚೇರಿ ಇದ್ದರೂ ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿ ಹೇಗೆ, ಏನಾಗಲಿದೆ ಎಂಬ ಅಂಶವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ಇತರ ದೇಶಗಳು ತಮ್ಮವರನ್ನು ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿಯ ತಂತ್ರಗಳನ್ನು ಅನುಸರಿಸುತ್ತಿವೆ ಎಂಬುದರ ಬಗ್ಗೆ ನಿಕಟ ಸಂಪರ್ಕ ಇರಿಸಿಕೊಂಡು ಮುಂದಡಿ ಇರಿಸಬೇಕಾಗುತ್ತದೆ.

ಸದ್ಯದ ಬೆಳವಣಿಗೆಯಲ್ಲಿ ಕೂಡ ಕೇಂದ್ರ ಸರಕಾರ ಫ್ರಾನ್ಸ್‌ ಸೇನೆಯ ನೆರವಿನಿಂದ ನಮ್ಮವರನ್ನು ಮೊದಲ ಹಂತದಲ್ಲಿ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ. ಸೂಡಾನ್‌ ರಾಜಧಾನಿ ಖಾತೊìಮ್‌ನಲ್ಲಿ ಇರುವ ಭಾರತದ ರಾಯಭಾರ ಕಚೇರಿ ಸಿಬಂದಿಗೆ ತಾವು ಇರುವಲ್ಲಿಂದಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ಅಲ್ಲಿನ ಸೇನೆಯ ಜತೆಗೆ ನಿಕಟ ಸಂಪರ್ಕ ಸಾಧಿಸಿಕೊಂಡು ಯುದ್ಧ ಪೀಡಿತ ಸ್ಥಳಗಳಲ್ಲಿ ಇರುವ ನಮ್ಮವರನ್ನು ಪತ್ತೆ ಮಾಡಿ ಕರೆತರುವುದೇ ದೊಡ್ಡ ಸಾಹಸದ ಕೆಲಸ.

ಇಂಥ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವುದು ನಮ್ಮ ದೇಶದ ವೀರ ಯೋಧರಿಗೆ ಮತ್ತು ಸೇನೆಗೆ, ಸರಕಾರಕ್ಕೆ ಹೊಸತೇನೂ ಅಲ್ಲ. ಕೊರೊನಾ ಸೋಂಕಿನ ಸಂದರ್ಭದಲ್ಲಿ ಹಲವು ರಾಷ್ಟ್ರಗಳಲ್ಲಿ ಸಿಕ್ಕಿ
ಹಾಕಿಕೊಂಡಿದ್ದವರನ್ನು ಯಶಸ್ವಿಯಾಗಿ ಕೇಂದ್ರ ಸರಕಾರ ಕರೆದು ತಂದದ್ದುಉಂಟು. ಅದಕ್ಕೆ ಸಮುದ್ರ ಸೇತು ಎಂದು ಹೆಸರಿಸಲಾಗಿತ್ತು. 2021ರಲ್ಲಿ “ದೇವಿಶಕ್ತಿ’ ಎಂಬ ಹೆಸರಿನ ಮೂಲಕ ತಾಲಿಬಾನ್‌ ನಿಯಂತ್ರಣದಲ್ಲಿ ಇರುವ ಅಫ್ಘಾನಿಸ್ಥಾನದಲ್ಲಿಇದ್ದ ಭಾರತೀಯ ಮೂಲದ ನಾಗರಿಕರನ್ನು ಸುರಕ್ಷಿತವಾಗಿ ಕರೆದು ತರಲಾಗಿತ್ತು. ಇಲ್ಲಿ ಉಲ್ಲೇಖ ಮಾಡಿರುವುದು ಒಂದೆರಡು ಉದಾಹರಣೆಗಳು ಮಾತ್ರ.

ಆದರೆ ಈ ವಿಚಾರದಲ್ಲಿ ಅನಗತ್ಯ ಆಕ್ಷೇಪಗಳನ್ನು ಮಾಡುವ ಬದಲು ಯಾವ ರೀತಿಯಾಗಿ ಕಾರ್ಯಾಚರಣೆ ನಡೆಸಬಹುದು ಎಂಬ ಬಗ್ಗೆ ಸಮರ್ಪಕ ಸಲಹೆ ಸೂಚನೆಗಳನ್ನು ನೀಡಿದರೆ ಹೆಚ್ಚು ಉಪಕಾರವಾದೀತು.
ಸಂಘರ್ಷ ಪೀಡಿತ ಸೂಡಾನ್‌ನಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಸದ್ಯ ಯೋಗ್ಯ ರೀತಿಯಲ್ಲಿಯೇ ನಿಭಾಯಿಸುತ್ತಿದೆ ಎನ್ನಬಹುದು. ಅದಕ್ಕಾಗಿಯೇ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವಾಗಿಯೇ ಸಂಕಷ್ಟಕ್ಕೆ ಈಡಾದ ರಾಷ್ಟ್ರದಿಂದ ನಮ್ಮವರು ಸುರಕ್ಷಿತವಾಗಿ ಅವರವರ ಮನೆ ಸೇರಬೇಕು ಎನ್ನುವುದಷ್ಟೇ ಹಾರೈಕೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next