ನವದೆಹಲಿ: ಹಿಂಸಾಚಾರ ಪೀಡಿತ ಸುಡಾನ್‌ನಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸೋಮವಾರ ‘ಆಪರೇಷನ್ ಕಾವೇರಿ’ ಆರಂಭಿಸಿದೆ.
ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಭಾರತದ ಹಡಗುಗಳು ಮತ್ತು ವಿಮಾನಗಳು ಸಜ್ಜಾಗಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. “ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಕಾವೇರಿ ನಡೆಯುತ್ತಿದೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಅವರ ದಾರಿಯಲ್ಲಿ ಇನ್ನಷ್ಟು ಮಂದಿಯಿದ್ದಾರೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
“ನಮ್ಮ ಹಡಗುಗಳು ಮತ್ತು ವಿಮಾನಗಳು ಭಾರತೀಯರನ್ನು ಮನೆಗೆ ಮರಳಿ ತರಲು ಸಿದ್ಧವಾಗಿವೆ. ಸುಡಾನ್‌ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ಬದ್ಧವಾಗಿದೆ, ”ಎಂದು ಜೈಶಂಕರ್ ಹೇಳಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ತನ್ನ ತುರ್ತು ಯೋಜನೆಗಳ ಭಾಗವಾಗಿ ಸೌದಿ ಅರೇಬಿಯಾದ ನಗರವಾದ ಜೆಡ್ಡಾದಲ್ಲಿ ಐಎಎಫ್‌ನ ಎರಡು ಸಾರಿಗೆ ವಿಮಾನಗಳನ್ನು ಮತ್ತು ನೌಕಾಪಡೆಯ ಹಡಗನ್ನು ಸುಡಾನ್‌ನ ಪ್ರಮುಖ ಬಂದರಿನಲ್ಲಿ ಇರಿಸಿರುವುದಾಗಿ ಭಾರತ ಭಾನುವಾರ ಹೇಳಿದೆ.
ಪ್ರಸ್ತುತ ಸುಡಾನ್‌ನಾದ್ಯಂತ ಇರುವ 3,000 ಕ್ಕೂ ಹೆಚ್ಚು ಭಾರತೀಯ ನಾಗರಿಕರ ಸುರಕ್ಷತೆಯ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಸರಕಾರ ಶುಕ್ರವಾರ ಹೇಳಿತ್ತು. ಸುಡಾನ್ ನಲ್ಲಿ ಕಳೆದ 11 ದಿನಗಳಿಂದ ದೇಶದ ಸೇನೆ ಮತ್ತು ಅರೆಸೈನಿಕ ಗುಂಪಿನ ನಡುವೆ ಮಾರಣಾಂತಿಕ ಹೋರಾಟಕ್ಕೆ ಸಾಕ್ಷಿಯಾಗಿದ್ದು ಸುಮಾರು 400ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ.