Advertisement
ಇದು ಶ್ರೀಲಂಕಾದ 70ನೇ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾದ 7 ಪಂದ್ಯಗಳ ಕಿರು ಸರಣಿ- “ನಿದಹಾಸ್ ಟಿ20 ಸೀರೀಸ್’. ಸರಣಿಯ ಎಲ್ಲ ಪಂದ್ಯಗಳು ಕೊಲಂಬೋದ “ಆರ್. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆಯಲಿವೆ. ಡಿಸ್ಕವರಿ ಚಾನೆಲ್‌ನ ನೂತನ ಕ್ರೀಡಾ ವಾಹಿನಿ “ಡಿ ನ್ಪೋರ್ಟ್’ ಮೊದಲ ಬಾರಿಗೆ ಕ್ರಿಕೆಟ್ ಸರಣಿಯನ್ನು ನೇರ ಪ್ರಸಾರ ಮಾಡಲಿದೆ.
ಇತ್ತೀಚೆಗಷ್ಟೇ ಯಶಸ್ವೀ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿ ಬಂದ ಭಾರತ, ಈ ಚುಟುಕು ಕ್ರಿಕೆಟ್ ಸರಣಿಗಾಗಿ ಬಹುತೇಕ ಸೀನಿಯರ್ ಆಟಗಾರರಿಗೆ ವಿಶ್ರಾಂತಿ ನೀಡಿದೆ. ರೋಹಿತ್ ಶರ್ಮ ಅವರಿಗೆ ನಾಯಕತ್ವ ವಹಿಸಿ, ಯುವ ಪಡೆಯೊಂದನ್ನು ಕಳುಹಿಸಿದೆ. ಕೊಹ್ಲಿ, ಧೋನಿ, ಭುವನೇಶ್ವರ್, ಪಾಂಡ್ಯ, ಕುಲದೀಪ್ ಮೊದಲಾದವರ ಸ್ಥಾನದಲ್ಲಿ ಪಂತ್, ಹೂಡಾ, ಸಿರಾಜ್, ವಾಷಿಂಗ್ಟನ್, ವಿಜಯ್ ಶಂಕರ್ ಅವರಿಗೆ ಅವಕಾಶ ಲಭಿಸಿದೆ. ಧವನ್, ರಾಹುಲ್, ರೈನಾ, ಪಾಂಡೆ, ಕಾರ್ತಿಕ್, ಚಾಹಲ್ ತಂಡದಲ್ಲಿರುವ ಸ್ಟಾರ್ ಆಟಗಾರರು. ಒಟ್ಟಾರೆ, ಪಕ್ಕಾ ಟಿ20 ತಂಡವೊಂದು ಸ್ಪರ್ಧೆಗೆ ಅಣಿಯಾಗಿದೆ. ಇನ್ನೊಂದೇ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್‌ಗೆ ಇದನ್ನು ಅಭ್ಯಾಸ ಸರಣಿ ಎಂದು ಪರಿಗಣಿಸಲಡ್ಡಿಯಿಲ್ಲ. ವಿರಾಟ್ ಕೊಹ್ಲಿ ಗೈರಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಬಡವಾಗಿರುವುದಂತೂ ನಿಜ. ನಾಯಕ ರೋಹಿತ್ ಶರ್ಮ ಫಾರ್ಮ್ ಕೂಡ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಶತಕವೊಂದನ್ನು ಬಾರಿಸಿದ್ದನ್ನು ಬಿಟ್ಟರೆ ರೋಹಿತ್ ಅವರದು ಸಂಪೂರ್ಣ ವೈಫಲ್ಯ. ಮರಳಿ ಲಯ ಕಂಡುಕೊಳ್ಳಲು ಈ ಸರಣಿ ರೋಹಿತ್‌ಗೆ ನೆರವಾಗಬೇಕಿದೆ. ಜತೆಗಾರನಾಗಿ ಉಪನಾಯಕ ಶಿಖರ್ ಧವನ್ ಕಣಕ್ಕಿಳಿಯಲಿದ್ದಾರೆ. ವನ್‌ಡೌನ್‌ನಲ್ಲಿ ರೈನಾ ಮುಂದುವರಿಯಲಿರುವುದರಿಂದ ಕೆ.ಎಲ್. ರಾಹುಲ್‌ಗೆ 4ನೇ ಕ್ರಮಾಂಕ ಸಿಗಬಹುದು. ಪಾಂಡೆ, ಕೀಪರ್ ಕಾರ್ತಿಕ್ ಮಧ್ಯಮ ಕ್ರಮಾಂಕವನ್ನು ಆಧರಿಸಬೇಕಿದೆ. ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಎಂದೇ ಪರಿಗಣಿಸಲ್ಪಟ್ಟಿರು ರಿಷಬ್ ಪಂತ್, ಬಿಗ್ ಹಿಟ್ಟರ್ ದೀಪಕ್ ಹೂಡಾ ಕೂಡ ರೇಸ್‌ನಲ್ಲಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಥಾನ ತುಂಬಲು ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್ ನಡುವೆ ಪೈಪೋಟಿ ಇದೆ.
Related Articles
Advertisement
ಲಂಕಾ ಹೆಚ್ಚು ಬಲಿಷ್ಠ ?ಭಾರತಕ್ಕೆ ಹೋಲಿಸಿದರೆ ಶ್ರೀಲಂಕಾ ತಂಡ ಮೇಲ್ನೋಟಕ್ಕೆ ಹೆಚ್ಚು ಬಲಿಷ್ಠ. ಕಳೆದ ಸಲ ಭಾರತದ ವಿರುದ್ಧ ತವರಿನಲ್ಲಿ ಆಡಿದ ಎಲ್ಲ 9 ಅಂತಾರಾಷ್ಟ್ರೀಯ ಪಂದ್ಯಗಳನ್ನು ಕಳೆದುಕೊಂಡ ತಂಡಗಳಲ್ಲಿದ್ದ ಪ್ರಮುಖರೆಲ್ಲ ಈ ಸರಣಿಯಲ್ಲೂ ಮುಂದುವರಿದಿದ್ದಾರೆ. ಚಂಡಿಮಾಲ್, ತರಂಗ, ಮೆಂಡಿಸ್, ಪೆರೆರ ಅವರಿಂದ ತಂಡಕ್ಕೆ “ಬ್ಯಾಟಿಂಗ್ ಫೈರ್ ಪವರ್’ ಲಭಿಸಬಹುದೆಂಬ ನಿರೀಕ್ಷೆ ಆತಿಥೇಯ ರಾಷ್ಟ್ರದ ಕ್ರಿಕೆಟ್ ಅಭಿಮಾನಿಗಳದ್ದು. ಬೌಲಿಂಗಿನಲ್ಲಿ ಲಕ್ಮಲ್, ಚಮೀರ, ಶಣಕ, ಮಿಸ್ಟರಿ ಸ್ಪಿನ್ನರ್ ಧನಂಜಯ ಲಂಕೆಯ ನೆರವಿಗಿದ್ದಾರೆ. ಅಸೇಲ ಗುಣರತ್ನ ಮಾತ್ರ ಗಾಯಾಳಾಗಿ ಈ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಭಾರತದೆದುರು ಅನುಭವಿಸಿದ 9-0 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವುದು ಶ್ರೀಲಂಕಾದ ಗುರಿ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದದ್ದು ಲಂಕೆಗೆ ಎಷ್ಟರ ಮಟ್ಟಿಗೆ ಲಾಭವಾದೀತು ಎಂದು ಕಾದು ನೋಡಬೇಕು.