Advertisement

ಗಾಂಧಿ ನಾಡಲ್ಲಿ ಭಾರತ- ಜಪಾನ್‌ ರೋಡ್‌ಶೋ

08:35 AM Sep 14, 2017 | Team Udayavani |

ಅಹಮದಾಬಾದ್‌: ಭಾರತದ ಬುಲೆಟ್‌ ಟ್ರೇನ್‌ ಕನಸಿಗೆ ನೀರೆರೆದಿರುವ ಜಪಾನ್‌ ಪ್ರಧಾನಿ ಶಿಂಜೋ ಅಬೆ, ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. 

Advertisement

ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಅಬೆ ಅವರು, ಗುರುವಾರ ಅಹಮಬಾದ್‌-ಮುಂಬೈ ಬುಲೆಟ್‌ ಟ್ರೇನ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮಧ್ಯೆಯೇ, ಬುಧವಾರ ಮಧ್ಯಾಹ್ನ ಬಂದ ಶಿನೋ ಅಬೆ ಅವರಿಗೆ ವಿಮಾನ ನಿಲ್ದಾಣದಲ್ಲೇ ಆಲಿಂಗನದ ಸ್ವಾಗತ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹತ್ಮಾ ಗಾಂಧೀಜಿ ಅವರ ಸಾಬರ್ಮತಿ ಆಶ್ರಮದ ವರೆಗೆ ತೆರೆದ ಜೀಪಿನಲ್ಲಿ ಅಬೆ ದಂಪತಿಯನ್ನು ಮೆರವಣಿಗೆಯಲ್ಲಿ ಕರೆತಂದಿದ್ದಾರೆ. ಸುಮಾರು 8 ಕಿ.ಮೀ. ಇದ್ದ ಈ ಮಾರ್ಗದಲ್ಲಿ ನಿಂತಿದ್ದ ಅಹಮದಾಬಾದ್‌ನ ಜನತೆ, ಜಪಾನ್‌ ಪ್ರಧಾನಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಅಲ್ಲದೆ ಹಲವಾರು ರಾಜ್ಯಗಳಿಂದ ಬಂದಿದ್ದ ಕಲಾವಿದರು, ರಸ್ತೆ ಬದಿಯಲ್ಲೇ 28ಕ್ಕೂ ಅಧಿಕ ಪ್ರದರ್ಶನ ನೀಡಿ ಭಾರತದ ಸಂಸ್ಕೃತಿ ಪರಿಚಯ ಮಾಡಿಕೊಟ್ಟಿದ್ದಾರೆ. 

ಸೀದಾ ಸಾಬರ್ಮತಿ ಆಶ್ರಮಕ್ಕೆ ಬಂದ ಅಬೆ ಅವರು, ಗಾಂಧೀಜಿ ಹೆಜ್ಜೆ ಗುರುತುಗಳ ಪರಿಚಯ ಮಾಡಿಕೊಂಡಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ, ಆಶ್ರಮದ ಸಂಪೂರ್ಣ ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ 16ನೇ ಶತಮಾನದ “ಸಿದಿ ಸೈಯ್ಯದ್‌ ನಿ ಜಾಲಿ’ ಮಸೀದಿಗೆ ಕರೆದೊಯ್ದ ಮೋದಿ ಅವರು, ಅದರ ಪರಿಚಯವನ್ನೂ ಮಾಡಿ ಕೊಟ್ಟಿದ್ದಾರೆ. ವಿಶೇಷವೆಂದರೆ, ಪ್ರಧಾನಿ ಯಾದ ಮೇಲೆ ಇದೇ ಮೊದಲ ಬಾರಿಗೆ ಮೋದಿ ಅವರು, ಮಸೀದಿಯೊಂದಕ್ಕೆ ಭೇಟಿ ನೀಡುತ್ತಿರುವುದು. 

ಬುಧವಾರ ರಾತ್ರಿ ಅಬೆ ದಂಪತಿಗೆ ಮೋದಿ ಅವರು ಔತಣ ಕೂಟ ಆಯೋಜಿಸಿದ್ದರು. ಅಗಾಶಿಯೇ ಟೆರೆಸ್‌ ರೆಸ್ಟೋರೆಂಟ್‌ನಲ್ಲಿ ನಡೆದ ಈ ಔತಣಕೂಟದಲ್ಲಿ ಮೋದಿ ಅವರ ನೆಚ್ಚಿನ “ಹಂದೊÌà’ ಹಾಗೂ ಸಂಪೂರ್ಣವಾಗಿ ಸಸ್ಯಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. 

ವಿಶೇಷವೆಂದರೆ ಮೋದಿ ಅವರು ಪ್ರಧಾನಿಯಾದ ಮೇಲೆ ಅಬೆ ಅವರನ್ನು ನಾಲ್ಕನೇ ಬಾರಿಗೆ ಭೇಟಿ ಮಾಡುತ್ತಿದ್ದಾರೆ. ಭಾರತ ಮತ್ತು ಜಪಾನ್‌ ನಡುವೆ ವರ್ಷಕ್ಕೊಮ್ಮೆ ಪರಿಶೀಲನಾ ಮಾದರಿಯ ಸಭೆ ನಡೆಯುತ್ತಿವೆ. ಜಪಾನ್‌ ಬಿಟ್ಟರೆ ಭಾರತ, ರಷ್ಯಾ ಜತೆ ಮಾತ್ರ ಹೀಗೆ ವಾರ್ಷಿಕವಾಗಿ ಪರಿಶೀಲನಾ ಮಾದರಿ ಸಭೆ ನಡೆಸುತ್ತಿದೆ. 

Advertisement

ಇಂದು ಬುಲೆಟ್‌ ಟ್ರೇನ್‌ಗೆ ಚಾಲನೆ
ಗುರುವಾರ ಮೋದಿ ಮತ್ತು ಅಬೆ ಅವರು ಅಹಮದಾಬಾದ್‌-ಮುಂಬೈ ನಡುವಿನ 508 ಕಿ.ಮೀ. ಉದ್ದದ ಬುಲೆಟ್‌ ಟ್ರೇನ್‌ ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈಗ ಆರಂಭವಾಗಲಿರುವ ಈ ಕಾಮಗಾರಿ 2022ಕ್ಕೆ ಅಂತ್ಯವಾಗಲಿದೆ. ಇದನ್ನು 1,10,000 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಜಪಾನ್‌ ಶೇ.90 ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಲಿದೆ. ಅಲ್ಲದೆ ಇದಕ್ಕೆ ಶೇ.0.01 ಬಡ್ಡಿ ವಿಧಿಸಲಾಗುತ್ತದೆ.  ಈ ಮಾರ್ಗ ಪೂರ್ಣವಾದ ಮೇಲೆ ಅಹ್ಮದಾಬಾದ್‌-ಮುಂಬೈ ನಡುವಿನ ಸಂಚಾರದ ಅವಧಿ ಕೇವಲ 3 ಗಂಟೆಗೆ ಇಳಿಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next