ನೆಲಮಂಗಲ: ಶ್ರೀಮಂತ ಸಂಸ್ಕೃತಿ ಮತ್ತು ಸಮೃದ್ಧ ಕಲೆಯಿಂದ ಮಾತ್ರ ಜಗತ್ತಿನಲ್ಲಿ ಭಾರತದ ಶ್ರೇಷ್ಠತೆ ಹೆಚ್ಚಲು ಸಾಧ್ಯ. ಈ ನಿಟ್ಟಿನಿಲ್ಲಿ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೇ ದೇಶೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಡಾ.ಕೆ ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣದ ಸನ್‌ರೈನ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲೆ ತಿಳಿದಿದ್ದರೆ ಸಾಧನೆ ಸಾಧ್ಯ: ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕಲೆಯನ್ನೂ ತಿಳಿದಿರಬೇಕು. ಕಾರಂಜಿಯಂತಹ ವೇದಿಕೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರೆ ಸಾಧ್ಯನೆ ಮಾಡಲು ಸಾಧ್ಯವಾಗುತ್ತದೆ. ಕಲೆ ಕರಗತವಾಗಿದ್ದರೆ ಮಾನಸಿಕವಾಗಿ ಕುಗ್ಗುದೆ, ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನದ ಗುರಿಯ ಜೊತೆ ಸಾಧನೆ ಮಾಡುವ ಹಂಬಲ ಕಲಾವಿದನಲ್ಲಿರುತ್ತದೆ. ಪೋಷಕರು ಹಾಗೂ ಶಿಕ್ಷಕರು ಪ್ರೋತ್ರಾಹಿಸಿ ಹೆಚ್ಚಿನ ತರಬೇತಿ ನೀಡುವ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.
ದೇಶದ ಹಿರಿಮೆ ಸಾರಿದ ಇಸ್ರೋಗೆ ಸಲಾಂ: ದೇಶದ ಹಿರಿಮೆಯನ್ನು ಸಾರುವ ಚಂದ್ರಯಾನ 2ರ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ದೇಶದ ಪ್ರತಿಯೊಬ್ಬ ವ್ಯಕ್ತಿ ನೆನಪಿಸಿಕೊಳ್ಳಬೇಕಾದ ದಿನ. ಚಂದ್ರನ ಅಂಗಳದವರೆಗೂ ಸ್ವದೇಶಿ ನಿರ್ಮಿತ ಉಪಗ್ರಹ ಕಳುಹಿಸಿದ ಹೆಮ್ಮೆ ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ. ಇಂತಹ ಅಮೋಘ ಸಾಧನೆ ಮಾಡಿದ ವಿಜ್ಞಾನಿಗಳಿಗೆ ನಾವೆಲ್ಲರೂ ಅಭಿನಂದನೆ ತಿಳಿಸಬೇಕು. ಯೋಜನೆ ವೈಫಲ್ಯವಾದರೂ ಸಾಧನೆ ದೊಡ್ಡದು. ಹೀಗಾಗಿ ವಿಜ್ಞಾನಿಗಳು ಎದೆಗುಂದದೆ ಮತ್ತಷ್ಟು ಸಾಧನೆ ಮಾಡಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಬಿಇಒ ಆಲ್ಮಾಸ್ ಪರ್ವೀನ್ ತಾಜ್ ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ರಾಹಿಸಲು ಪ್ರತಿಭಾಕಾರಂಜಿ ಉತ್ತಮ ವೇದಿಕೆಯಾಗಿದೆ. 22 ಕ್ಲಸ್ಟರ್‌ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶವಿದೆ. ಶಿಕ್ಷಕರು ಹಾಗೂ ಪೋಷಕರು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ವಿಜ್ಞಾನಿಗಳಿಗೆ ವಿದ್ಯಾರ್ಥಿನಿಯ ಸಂದೇಶ: ಭಾರತದ ಹೆಮ್ಮೆಯ ಇಸ್ರೋ ವಿಜ್ಞಾನಿಗಳು ಸ್ವದೇಶಿ ನಿರ್ಮಿತ ಚಂದ್ರಯಾನ 2ರ ಯಶಸ್ವಿ ಉಡಾವಣೆಯ ಜೊತೆ ವಿಕ್ರಮನು ಚಂದ್ರನ ಮೇಲೆ ಹೆಜ್ಜೆಯಾಕುವ ಆಸೆ ನಿರಾಸೆಯಾದ ಕಾರಣ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಯ ಯಶಸ್ವಿನಿ ಎಂಬ 6ನೇ ತರಗತಿಯ ವಿದ್ಯಾರ್ಥಿನಿಯು ಚಂದ್ರಯಾನ 2ರ ವಿಕ್ರಮನ ಚಿತ್ರ ಬಿಡಿಸಿ, “ವಿಜ್ಞಾನಿಗಳೇ ಎದೆಗುಂದದಿರಿ. ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಸಂದೇಶ ಸಾರಿದರು.
ಸ್ಪರ್ಧೆಗಳು: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಚಿತ್ರಕಲಾ ಸ್ಪರ್ಧೆ, ನೃತ್ಯ, ಜನಪದಗೀತೆ, ಭಾವಗೀತೆ, ಲಂಬಾಣಿ ಪದ, ನಾಟಕ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ತಿಳಿಸಿದ್ದಾರೆ.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಂಗನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ,ಮುಖಂಡ ನರಸಿಂಹಮೂರ್ತಿ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರಯ್ಯ, ಶಿವಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ನರಸಿಂಹಯ್ಯ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಆರ್.ಶಿವಕುಮಾರ್, ಯೋಗನಂದ, ವಿ.ರಾಜಣ್ಣ, ಸದಾನಂದಾರಾಧ್ಯ, ನಂಜುಂಡಯ್ಯ,ವಿ.ರವಿಕುಮಾರ್, ಹೆಚ್.ರಾಮಾಂಜಿನಪ್ಪ, ಮಂಜುನಾಥ್ ಇದ್ದರು.