Advertisement

ಭಾರತವೀಗ ವಿಶ್ವ ಬ್ಯಾಡ್ಮಿಂಟನ್‌ ಶಕ್ತಿಕೇಂದ್ರ

12:30 AM Feb 02, 2019 | |

ಭಾರತವನ್ನು ಈಗ ಬರೀ ಕ್ರಿಕೆಟ್‌ ಪ್ರೇಮಿ ರಾಷ್ಟ್ರ ಎನ್ನುವಂತಿಲ್ಲ. ನಿಧಾನಕ್ಕೆ ವಿವಿಧ ಕ್ರೀಡೆಗಳಲ್ಲಿ ಹಿಡಿತ ಸಾಧಿಸುತ್ತಿದೆ. ಕುಸ್ತಿ, ಬಾಕ್ಸಿಂಗ್‌, ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌, ಶೂಟಿಂಗ್‌, ಟೆನಿಸ್‌…ಈ ಎಲ್ಲ ಕ್ರೀಡೆಗಳಲ್ಲೂ ವಿಶ್ವಮಟ್ಟದ ತಾರೆಯರು ಸಿದ್ಧವಾಗಿದ್ದಾರೆ. ಹಲವು ಬೇರೆ ಬೇರೆ ಕೂಟಗಳಲ್ಲಿ ಈ ಎಲ್ಲರೂ ತಮ್ಮ ಪಾತ್ರವನ್ನು ಅದ್ಭುತ ನಿರ್ವಹಿಸಿ ಭಾರತೀಯರು ಸಂತೋಷಪಡುವಂತೆ ಮಾಡಿದ್ದಾರೆ. ಬಾಕ್ಸಿಂಗ್‌ನಲ್ಲಿ ವಿಜೇಂದರ್‌ ಸಿಂಗ್‌, ವಿಕಾಸ್‌ ಕೃಷ್ಣನ್‌, ಕುಸ್ತಿಯಲ್ಲಿ ಸುಶೀಲ್‌ ಕುಮಾರ್‌, ಭಜರಂಗ್‌ ಪುನಿಯ, ವಿನೇಶ್‌ ಫೊಗಾಟ್‌, ಗೀತಾ ಫೊಗಾಟ್‌, ಬಬಿತಾ ಫೊಗಾಟ್‌, ಅಥ್ಲೆಟಿಕ್ಸ್‌ನಲ್ಲಿ ಹಿಮಾ ದಾಸ್‌, ನೀರಜ್‌ ಚೋಪ್ರಾ, ಶೂಟಿಂಗ್‌ನಲ್ಲಿ ಮನು ಭಾಕರ್‌, ಸೌರಭ್‌ ವರ್ಮ, ಹೀನಾ ಸಿಧು, ಜಿತು ರಾಯ್‌, ಅಭಿನವ್‌ ಬಿಂದ್ರಾ…ಹೀಗೆ ಸಾಲು ಸಾಲು ಪ್ರತಿಭೆಗಳು ವಿಶ್ವಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರತದಲ್ಲಿ ಕ್ರೀಡಾಪ್ರಗತಿಯಾಗುತ್ತಿದೆ ಎಂಬುದರ ಸಂಕೇತ.

Advertisement

ಈ ಎಲ್ಲ ಕ್ರೀಡೆಗಳ ಜೊತೆಗೆ ಇನ್ನೊಂದು ಕ್ರೀಡೆ ಭಾರತದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಈ ಕ್ರೀಡೆಯಲ್ಲಿ ಭಾರತ ಏಕಸ್ವಾಮ್ಯ ಸಾಧಿಸಿದರೂ ಅಚ್ಚರಿಯಿಲ್ಲ ಎನ್ನುವಂತೆ ಇಲ್ಲಿ ಆಟಗಾರರು ತಯಾರಾಗುತ್ತಿದ್ದಾರೆ. ಈಗಾಗಲೇ ವಿಶ್ವದ ಇತರೆ ರಾಷ್ಟ್ರಗಳಿಗೆ ಈ ಸುಳಿವು ಸಿಕ್ಕಿದೆ. 

ಬ್ಯಾಡ್ಮಿಂಟನ್‌…
ಒಂದು ಹತ್ತು, ಇಪ್ಪತ್ತು ವರ್ಷಗಳ ಹಿಂದೆಯಾದರೆ ಭಾರತದಲ್ಲಿ ಬ್ಯಾಡ್ಮಿಂಟನ್‌ ಎಂಬ ಹೆಸರು ಹೇಳಿದರೆ, ಪ್ರಕಾಶ್‌ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್‌ ಹೆಸರು ಮಾತ್ರ ಪ್ರಸ್ತಾಪವಾಗುತ್ತಿತ್ತು. ಈ ಇಬ್ಬರ ನಂತರವೇ ನಮ್ಮ ದೇಶದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆ ಜನಪ್ರಿಯತೆ ಪಡೆದುಕೊಳ್ಳಲು ಶುರು ಮಾಡಿದ್ದು. ಇಬ್ಬರೂ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಗಳು. ಗೋಪಿಚಂದ್‌, ಇಂಗ್ಲೆಂಡ್‌ನ‌ಲ್ಲಿ ಗೆದ್ದ ನಂತರ ಬಹಳ ವರ್ಷಗಳೇನು ಆಡಲಿಲ್ಲ. ನಿವೃತ್ತಿಯಾಗಿ ತರಬೇತಿ ಶುರು ಮಾಡಿದರು. ಹೈದರಾಬಾದ್‌ನಲ್ಲಿರುವ ಆ ಅಕಾಡೆಮಿಯಿಂದ ಸಾಲು ಸಾಲು ವಿಶ್ವಶ್ರೇಷ್ಠ ತಾರೆಯರು ಹೊರಹೊಮ್ಮುತ್ತಿದ್ದಾರೆ. ಇಲ್ಲಿ ಪ್ರತಿಭೆಗಳಿಗೆ ಬರವೇ ಇಲ್ಲ. ಯಾರನ್ನೂ ಲಘುವಾಗಿ ಪರಿಗಣಿಸುವಂತಿಲ್ಲ. ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್‌, ಪಾರುಪಳ್ಳಿ ಕಶ್ಯಪ್‌, ಎಚ್‌.ಎಸ್‌.ಪ್ರಣಯ್‌, ಸಾಯಿ ಪ್ರಣೀತ್‌ ಇವರೆಲ್ಲ ಗೋಪಿಚಂದ್‌ ಅಕಾಡೆಮಿಯಿಂದಲೇ ತರಬೇತಾದವರು.

ಪ್ರತೀ ಬಾರಿ ವಿಶ್ವದ ಯಾವುದೇ ದೇಶದಲ್ಲಿ ಬ್ಯಾಡ್ಮಿಂಟನ್‌ ಕೂಟಗಳು ನಡೆದಾಗಲೂ, ಭಾರತದ ಒಬ್ಬರಲ್ಲೊಬ್ಬರು ಪ್ರಶಸ್ತಿ ಗೆದ್ದು ಸುದ್ದಿಯಾಗುತ್ತಾರೆ. ಭಾರತದ ಯಾರೊಬ್ಬರೂ ಗೆಲ್ಲದ ಕೂಟಗಳು ಬಹಳ ಕಡಿಮೆ. ಕನಿಷ್ಠ ಸೆಮಿಫೈನಲ್‌ನಲ್ಲಾದರೂ ಭಾರತೀಯರ ಹೆಸರಿರುತ್ತದೆ. ಇದು ಭಾರತ ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ಶಕ್ತಿಕೇಂದ್ರವಾಗುವತ್ತ ಹೊರಟಿದೆ ಎಂಬುದರ ಸೂಚನೆ.

ಸಾಮಾನ್ಯವಾಗಿ ಥಾಯ್ಲೆಂಡ್‌, ಚೀನಾ, ಮಲೇಷ್ಯಾ, ಜಪಾನ್‌ ಈ ರಾಷ್ಟ್ರಗಳ ಆಟಗಾರರು ಮಾತ್ರ ಬ್ಯಾಡ್ಮಿಂಟನ್‌ನಲ್ಲಿ ಮಿಂಚುತ್ತಿದ್ದರು. ಟ್ರೋಫಿಗಳೆಲ್ಲ ಈ ದೇಶದ ಕ್ರೀಡಾಪಟುಗಳಿಗೆ ಮೀಸಲು ಎನ್ನುವಂತಿತ್ತು. ಭಾರತದಲ್ಲಿ ಈ ಕ್ರೀಡೆ ಸಶಕ್ತವಾದ ನಂತರ ಅಂತಹದೊಂದು ಅಭಿಪ್ರಾಯ ಬದಲಾಗಿದೆ. ಭಾರತೀಯರನ್ನು ಸೋಲಿಸದೇ ಪ್ರಶಸ್ತಿ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿಯಿದೆ. ಹೀಗೆ ಕ್ರಿಕೆಟೇತರವಾಗಿ ಕ್ರೀಡೆಯೊಂದು ಭಾರತದಲ್ಲಿ ಜನಮಾನ್ಯತೆ ಗಳಿಸುತ್ತಿರುವುದು ಧನಾತ್ಮಕ ಲಕ್ಷಣ. ಅಷ್ಟು ಮಾತ್ರವಲ್ಲ ಪ್ರತಿಭೆಗಳು ಹೊರಹೊಮ್ಮಲು, ಕ್ರಿಕೆಟನ್ನು ಹೊರತುಪಡಿಸಿ ಇತರೆ ಕ್ರೀಡೆಗಳನ್ನೂ ಆಯ್ದುಕೊಳ್ಳಬಹುದು ಎನ್ನುವುದಕ್ಕೆ ಇದು ಪ್ರೇರಣೆ.

Advertisement

ವಿಶ್ವ ನಂ.1ಗಳ ತಾಣ ಭಾರತ
ಭಾರತ ವಿಶ್ವ ನಂ.1 ಬ್ಯಾಡ್ಮಿಂಟನ್‌ ಆಟಗಾರರ ತಾಣವಾಗಿದೆ. ಒಲಿಂಪಿಕ್ಸ್‌ನಲ್ಲಿ ಕಂಚು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ, ಒಂದು ಕಂಚು ಗೆದ್ದಿರುವ ಸೈನಾ ನೆಹ್ವಾಲ್‌ ಮಾಜಿ ವಿಶ್ವ ನಂ.1 ಆಟಗಾರ್ತಿ. ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್‌ ಕೂಡ ಮಾಜಿ ವಿಶ್ವ ನಂ.1 ಆಟಗಾರ. ಸದ್ಯ ವಿಶ್ವದ ಖ್ಯಾತ ಬ್ಯಾಡ್ಮಿಂಟನ್‌ ತಾರೆಯರ ಜೊತೆಗೆ ಕೇಳಿ ಬರುತ್ತಿರುವ ಪಿ.ವಿ.ಸಿಂಧು ಕೂಡ ವಿಶ್ವ ನಂ.2ವರೆಗೆ ಏರಿದ್ದರು. ಅವರಿಗೆ ಈ ಪಟ್ಟ ಸಿಕ್ಕುವುದು ಕಷ್ಟವೇನಲ್ಲ. ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಬೆಳ್ಳಿ, 2 ಕಂಚು ಗೆದ್ದಿದ್ದಾರೆ. ಇವರ ಸಾಲಿಗೆ ಸೇರಿಕೊಳ್ಳಲು ಇನ್ನೂ ಹಲವು ಪ್ರತಿಭೆಗಳು ಸಿದ್ಧವಾಗುತ್ತಲೇ ಇದ್ದಾರೆ!

ಕೆ.ಶ್ರೀಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next