ಬ್ಲೂಮ್‌ಬರ್ಗ್ (ಇಂಗ್ಲೆಂಡ್): ಕೋವಿಡ್ 19 ಪರಿಣಾಮ ಪ್ರಮುಖ ಜಾಗತಿಕ ಕಂಪೆನಿಗಳು ಚೀನದಿಂದ ಕಾಲ್ತೆಗೆಯಲು ಸಿದ್ಧವಾಗಿವೆ.
ಅವನ್ನೆಲ್ಲ ಭಾರತಕ್ಕೆ ಬರ ಮಾಡಿಕೊಳ್ಳಲು ಕೇಂದ್ರ ಸರಕಾರ ಇಡೀ ದೇಶಾದ್ಯಂತ ಜಾಗ ಗುರ್ತಿಸಿದೆ. ಅದರ ಗಾತ್ರ ಯೂರೋಪಿನ ಪುಟ್ಟ ರಾಷ್ಟ್ರ ಲಕ್ಸೆಂಬರ್ಗ್‌ನ ದುಪ್ಪಟ್ಟು ಎಂಬ ಕುತೂಹಲಕಾರಿ ಸಂಗತಿಯೊಂದು ಆಂಗ್ಲ ಮಾಧ್ಯಮವೊಂದರಲ್ಲಿ ವರದಿಯಾಗಿದೆ.
ಭಾರತ ಸರಕಾರ ದೇಶಾದ್ಯಂತ 4,61,589 ಹೆಕ್ಟೇರ್ ಜಾಗವನ್ನು ಗುರ್ತಿಸಿದೆ, ಇದರಲ್ಲಿ 1,15,131 ಹೆಕ್ಟೇರ್ ಜಾಗ ಈಗಾಗಲೇ ಅಸ್ತಿತ್ವದಲ್ಲಿರುವ ಕೈಗಾರಿಕಾ ಪ್ರದೇಶವಾಗಿ ಗುರ್ತಿಸಲ್ಪಟ್ಟಿದೆ ಎನ್ನಲಾಗಿದೆ. ವಿಶೇಷವೆಂದರೆ ಕೇವಲ 6.14 ಲಕ್ಷ ಜನಸಂಖ್ಯೆ ಹೊಂದಿರುವ ಲಕ್ಸೆಂಬರ್ಗ್‌ನ ಗಾತ್ರ ಕೇವಲ 2,43,000 ಹೆಕ್ಟೇರ್ ಮಾತ್ರ!
ಸದ್ಯಕ್ಕೆ ಸೌದಿಯ ಅರಾಮ್ಕೋ, ಪೋಸ್ಕೊದಂತಹ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಬಹಳ ಆಸಕ್ತಿಯಿದೆ. ಅವಕ್ಕೆ ಜಾಗವನ್ನು ಪಡೆಯುವುದೇ ದೊಡ್ಡ ಅಡ್ಡಿಯಾಗಿದೆ.
ರಾಜ್ಯ ಸರಕಾರಗಳ ಒಪ್ಪಿಗೆ, ಸಂಬಂಧಪಟ್ಟ ನೆಲದಲ್ಲಿರುವ ಜನರ ಒಪ್ಪಿಗೆ ಇವೆಲ್ಲ ತಾಪತ್ರಯದಿಂದಾಗಿ ಜಾಗ ವಶೀಕರಣ ತಡವಾಗುತ್ತಿದೆ. ಆದ್ದರಿಂದ ಆ ಕಂಪೆನಿಗಳು ಬೇಸತ್ತಿವೆ ಎಂದು ಹೇಳಲಾಗಿದೆ.