ಇಂಡಿ: ವಿಶ್ವದಲ್ಲಿಯೇ ಭಾರತ ದೇಶ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಡೆದು ಬಂದಿದೆ. ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದೆ. ಪಯಣದಲ್ಲಿ ಸಾಧನೆಯ ಮೈಲಿಗಲ್ಲುಗಳನ್ನು ನೆಟ್ಟಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಬುಧವಾರ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ನಡೆದ 73ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂಡಿ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಸಾಲ ಮುಕ್ತ ಮಾಡುವ ಮತ್ತು ಕೃಷ್ಣಾ ನದಿ ನೀರನ್ನು ಮತಕ್ಷೇತ್ರಕ್ಕೆ ತಂದು ತಾಲೂಕನ್ನು ಸಮಗ್ರ ನೀರಾವರಿಯನ್ನಾಗಿಸುವ ಕನಸು ಕಂಡಿದ್ದು ಈ ದಿಶೆಯಲ್ಲಿ ನಿರಂತರ ಪ್ರಯತ್ನ ನಡೆದಿದೆ ಎಂದರು.
ಇಂಡಿ ತಾಲೂಕಿನಲ್ಲಿ ಅರಣ್ಯ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು, ಬೂದಿಹಾಳ ಗ್ರಾಮದ ಹತ್ತಿರ ಸಣ್ಣ ಕೈಗಾರಿಕೆದಾದರರಿಗೆ ಉತ್ತೇಜನ ನೀಡುವುದು, ನಿಂಬೆ ಅಭಿವೃದ್ಧಿ ಮಂಡಳಿಗೆ ಪ್ರೋತ್ಸಾಹ ನೀಡಿ ಬಲಪಡಿಸುವ ಅನೇಕ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಧ್ವಜಾರೋಹಣ ನೆರವೇರಿಸಿ ಕಂದಾಯ ಉಪ ವಿಬಾಗಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನ ತಿಳಿಸಿದ ದಿನವಿದು. ಈ ದಿನದಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಪಣ ತೊಡೋಣ ಎಂದರು.
ಪೊಲೀಸ್ ಹಾಗೂ ಗೃಹ ರಕ್ಷಕ ದಳದಿಂದ ಪಿಎಸೈ ಮಾಳಪ್ಪ ಪೂಜಾರಿ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ಡಿಎಸ್‌ಪಿ ಶ್ರೀಧರ ದೊಡ್ಡಿ, ಇಒ ಸುನೀಲ ಮುದ್ದಿನ, ತಹಶೀಲ್ದಾರ್ ಸಿ.ಎಸ್. ಕುಲಕರ್ಣಿ, ಮುಖ್ಯಾಧಿಕಾರಿ ಲಕ್ಷ್ಮೀಶ, ಬಿಇಒ ವಸಂತ ರಾಠೊಡ, ಹೆಸ್ಕಾಂನ ಮೇಡೆಗಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪುರಸಭೆ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿ.ಎಂ. ಬಂಡಗಾರ ಸ್ವಾಗತಿಸಿದರು. ಬಸವರಾಜ ಗೊರನಾಳ ನಿರೂಪಿಸಿದರು.