Advertisement

“ವಿಶ್ವಕಪ್‌ ಗೆಲ್ಲುವುದಕ್ಕೆ ಭಾರತವೇ ಫೇವರಿಟ್‌’

10:11 AM Apr 26, 2019 | mahesh |

ಮಂಗಳೂರು: ಭಾರತ ಕ್ರಿಕೆಟ್‌ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಆಟಗಾರನಾಗಿ “ಭಾರತದ ಗ್ರೇಟ್‌ ವಾಲ್‌’ ಎಂದೇ ಕರೆಸಿಕೊಂಡಿರುವ ಮಾಜಿ ಕಪ್ತಾನ ಹಾಗೂ ಹಾಲಿ ಭಾರತ ಅಂಡರ್‌-19 ತಂಡದ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಅವರು 25 ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸಿದ್ದಾರೆ. ಈ ಸಂದರ್ಭ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು.

Advertisement

ವಿಶ್ವಕಪ್‌ಗೆ ಆಯ್ಕೆಗೊಂಡಿರುವ ಭಾರತದ ಕ್ರಿಕೆಟ್‌ ತಂಡದ ಬಗ್ಗೆ ನೀವು ಏನು ಹೇಳುವಿರಿ?
ಈಗ ಆಯ್ಕೆಗೊಂಡಿರುವ ಭಾರತದ ಕ್ರಿಕೆಟ್‌ ಆಟಗಾರರ ತಂಡವು ಅತ್ಯಂತ ಬಲಿಷ್ಠವಾಗಿದ್ದು, ತುಂಬಾ ಸಮತೋಲಿತ ತಂಡವಾಗಿದೆ. ಈ ತಂಡದಲ್ಲಿ ಒಳ್ಳೆಯ ಬ್ಯಾಟ್ಸ್‌ಮ್ಯಾನ್‌-ಫಾಸ್ಟ್‌ ಬೌಲರ್, ಸ್ಪಿ³ನ್ನರ್, ಆಲ್‌ರೌಂಡರ್‌ ಆಟಗಾರರು ಕೂಡ ಇರುವುದರಿಂದ ವಿಶ್ವಕಪ್‌ ಆಡುವುದಕ್ಕೆ ಇದೊಂದು ಸಮತೋಲಿತ ತಂಡವಾಗಿದೆ.

ಹಾಗಾದರೆ ಈ ಬಾರಿ ವಿಶ್ವಕಪ್‌ ಭಾರತದ ಪಾಲಾಗುವ ವಿಶ್ವಾಸವಿದೆಯೇ ?
ಇಷ್ಟೊಂದು ಬಲಿಷ್ಠ ತಂಡವಿದ್ದರೂ ವಿಶ್ವಕಪ್‌ ಟೂರ್ನಿಯಲ್ಲಿ ನಮ್ಮ ಆಟಗಾರರು ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಆದರೆ ತುಂಬಾ ಪ್ರತಿಭಾನ್ವಿತ ಯುವ ಆಟಗಾರರ ಜತೆಗೆ ಉತ್ತಮ ಅನುಭವ ಹೊಂದಿರುವ ಆಟಗಾರರೂ ಇರುವ ಕಾರಣ ಖಂಡಿತವಾಗಿಯೂ ಈ ಬಾರಿ ವಿಶ್ವ ಕಪ್‌ ಗೆಲ್ಲುವುದಕ್ಕೆ ಭಾರತಕ್ಕೆ ಒಳ್ಳೆಯ ಅವಕಾಶವಿದೆ. ಆ ವಿಶ್ವಾಸವೂ ಇದೆ.

ಭಾರತ ತಂಡದ ಕೋಚ್‌ ಅವಕಾಶ ಸಿಕ್ಕಿದರೆ ಹೋಗುತ್ತೀರಾ?
ಇಲ್ಲ; ನಾನು ಭಾರತ ತಂಡದ ಕೋಚ್‌ ಆಗುವ ಅವಕಾಶ ಲಭಿಸಿದರೂ ಸದ್ಯಕ್ಕೆ ಹೋಗುವುದಕ್ಕೆ ಇಷ್ಟಪಡುವುದಿಲ್ಲ. ಆ ಬಗ್ಗೆ ನಾನು ಯೋಚಿಸಿಯೇ ಇಲ್ಲ. ಸದ್ಯ ಅಂಡರ್‌-19 ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿಯೇ ತೃಪ್ತಿ ಹೊಂದಿರುವೆ.

ನಿಮ್ಮ ದೃಷ್ಟಿಯಲ್ಲಿ ಭಾರತದಲ್ಲಿ ಪ್ರತಿಭಾನ್ವಿತ ಆಟಗಾರರು ರೂಪುಗೊಳ್ಳುತ್ತಿದ್ದಾರೆಯೇ?
ನಮ್ಮ ದೇಶದ ಕ್ರಿಕೆಟ್‌ ಕ್ಷೇತ್ರ ನೋಡಿದರೆ, ಅತ್ಯುತ್ತಮ ಪ್ರತಿಭೆ ಹೊಂದಿರುವ ಕ್ರಿಕೆಟ್‌ ಪಟುಗಳು ಹೊರಹೊಮ್ಮುತ್ತಿದ್ದಾರೆ. ಈ ಹೊಸ ಟ್ಯಾಲೆಂಟ್‌ಗಳು ಯಾವುದೇ ದೊಡ್ಡ ನಗರಗಳಿಂದ ಬರುತ್ತಿಲ್ಲ. ಬದಲಿಗೆ ಸಾಮಾನ್ಯ ನಗರ ಪ್ರದೇಶ ಅಥವಾ ಈ ಮೊದಲು ನಮಗೆ ಎಲ್ಲಿ ಉತ್ತಮ ಆಟಗಾರರು ಲಭಿಸಿಲ್ಲವೋ ಅಂಥ ಪ್ರದೇಶಗಳಿಂದ ನಿರೀಕ್ಷೆಗೂ ಮೀರಿರುವ ಅತ್ಯುತ್ತಮ ಯುವ ಆಟಗಾರರು ಲಭಿಸುತ್ತಿದ್ದಾರೆ. ಹೀಗಾಗಿ ಭಾರತಕ್ಕೆ ಖಂಡಿತವಾಗಿಯೂ ಇನ್ನೂ ಉತ್ತಮ ಕ್ರಿಕೆಟ್‌ ಪ್ರತಿಭೆಗಳು ಲಭಿಸುವುದರಲ್ಲಿ ಸಂದೇಹವಿಲ್ಲ.

Advertisement

ಒಂದು ಕಾಲದಲ್ಲಿ ಕ್ರಿಕೆಟ್‌ ಅಂದರೆ ಸಚಿನ್‌, ದ್ರಾವಿಡ್‌, ಗಂಗೂಲಿ ಆಗಿತ್ತು. ಆ “ಗೋಲ್ಡನ್‌ ಇರಾ’ ವನ್ನು
ಈಗ ನಿಮ್ಮ ಅಭಿಮಾನಿಗಳಂತೆ ನೀವು ಮಿಸ್‌ ಮಾಡಿಕೊಳ್ಳುತ್ತಿದ್ದೀರಾ?
ನಾವು ಮಿಸ್‌ ಮಾಡಿಕೊಳ್ಳುತ್ತಿಲ್ಲ; ಬದಲಿಗೆ, ಎಂಜಾಯ್‌ ಮಾಡುತ್ತಿದ್ದೇವೆ. ಏಕೆಂದರೆ ಈಗಿನ ಯುವ ಆಟಗಾರರು ಕ್ರಿಕೆಟ್‌ ಫೀಲ್ಡ್‌ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಅವರ ಆಟವನ್ನು ನೋಡಿ ನಾವೆಲ್ಲ ಇನ್ನಷ್ಟು ಖುಷಿಪಡುತ್ತಿದ್ದೇವೆ. ನಮ್ಮ ಈಗಿನ ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರಿಷಬ್‌ ಪಂತ್‌, ಶುಭ್‌ಮನ್‌ ಗಿಲ್‌ ಹೀಗೆ ಹಲವು ಹೊಸ ಆಟಗಾರರು ಬರುತ್ತಿದ್ದಾರೆ. ಕ್ರಿಕೆಟ್‌ನಲ್ಲಿಯೂ ಒಂದು ಜನರೇಷನ್‌ ಹೋಗಿ ಇನ್ನೊಂದು ಜನರೇಷನ್‌ ಆಟಗಾರರು ಬರುತ್ತಾರೆ.

 ಸದಾ ಜಗತ್ತು ಸುತ್ತುವ ನೀವು ಈಗ ಮಂಗಳೂರಿಗೆ ಬಂದಿದ್ದೀರಾ?
ಮಂಗಳೂರಿಗೆ ಬಂದಿರುವುದು ತುಂಬಾ ಖುಷಿಯಾಗಿದೆ. 25 ವರ್ಷಗಳ ಹಿಂದೆ ಕಾಲೇಜಿನಲ್ಲಿರುವಾಗ ಇಲ್ಲಿಗೆ ಬಂದಿದ್ದೆ. ಅದಾದ ಮೇಲೆ ಇಲ್ಲಿಗೆ ಬರುವುದಕ್ಕೆ ಅವಕಾಶವೇ ಸಿಕ್ಕಿರಲಿಲ್ಲ. ಇದು ತುಂಬಾ ಸುಂದರ ಹಾಗೂ ಹಸಿರುಯುಕ್ತ ನಗರಿ. ಪಕ್ಕದಲ್ಲಿಯೇ ಬೀಚ್‌ ಇದೆ. ಇಲ್ಲಿನ ಜನರು ಕೂಡ ತುಂಬಾ ಫ್ರೆಂಡ್ಲಿ ಇದ್ದಾರೆ. ಪ್ರತಿಷ್ಠಿತ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳು ಇಲ್ಲಿವೆ. ನಿಜಕ್ಕೂ ಮಂಗಳೂರಿನಂಥ ನಗರಕ್ಕೆ ಬಂದಿರುವುದು ವಿಶಿಷ್ಟ ಅನುಭವ ನೀಡಿದ್ದು, ಖಂಡಿತಾವಾಗಿಯೂ ಕುಟುಂಬದವರ ಜತೆಗೆ ಮತ್ತೆ ಮಂಗಳೂರಿಗೆ ಬರಬೇಕೆಂದು ಅಂದುಕೊಂಡಿದ್ದೇನೆ.

ಮತದಾನ ಅವಕಾಶ ಕೈತಪ್ಪಿರುವುದಕ್ಕೆ ಬೇಸರವಿಲ್ಲವೇ?
ಮತದಾನ ಜಾಗೃತಿ ಬಗ್ಗೆ ಭಾರತೀಯ ಚುನಾವಣ ಆಯೋಗದ ರಾಯಭಾರಿಯಾಗಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಕೈತಪ್ಪಿರುವುದಕ್ಕೆ ಬೇಸರವಿಲ್ಲವೇ?

ಖಂಡಿತವಾಗಿಯೂ ಈ ವಿಚಾರದಲ್ಲಿ ನನಗೆ ಬೇಸರವಾಗಿದೆ. ಮತದಾನ ಮಾಡುವುದಕ್ಕೆ ನಾನೂ ಉತ್ಸುಕನಾಗಿದ್ದೆ. ಆದರೆ ವಾಸ್ತವದಲ್ಲಿ ಕೆಲವೊಂದು ತಾಂತ್ರಿಕ ಕಾರಣ, ಸಂವಹನದ ಕೊರತೆ ಮತ್ತು ಮನೆ ಶಿಫ್ಟ್‌ ಮಾಡಿರುವ ಕಾರಣಗಳಿಂದಾಗಿ ನನ್ನ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್‌ ಆಗಿತ್ತು. ಮುಂದಕ್ಕೆ ಮುತುವರ್ಜಿ ವಹಿಸುವ ಮೂಲಕ ಖಂಡಿತವಾಗಿಯೂ ಮುಂದಿನ ಬಾರಿ ತಪ್ಪದೆ ಮತದಾನ ಮಾಡುತ್ತೇನೆ.

ಕೆ.ಎಲ್‌. ರಾಹುಲ್‌ಗೆ ಸಾಮರ್ಥ್ಯವಿದೆ…
ಕೆ.ಎಲ್‌. ರಾಹುಲ್‌ ನಿಜಕ್ಕೂ ಉತ್ತಮ ಆಟಗಾರ. ಅವನು ಚೆನ್ನಾಗಿ ಆಡುತ್ತಿದ್ದು, ಕೇವಲ ಏಕದಿನ ಅಥವಾ ಟೆಸ್ಟ್‌ ಪ್ಲೇಯರ್‌ ಅಲ್ಲ; 20-20 ಮ್ಯಾಚ್‌ ಸಹಿತ ಮೂರು ವಿಭಾಗಗಳಲ್ಲಿಯೂ ಚೆನ್ನಾಗಿ ಆಡುವ ಸಾಮರ್ಥ್ಯವಿರುವ ಆಟಗಾರ. ಅದನ್ನು ಈಗಾಗಲೇ ತೋರಿಸಿದ್ದಾನೆ. ಅವನು ಭಾರತ ತಂಡದಲ್ಲಿ ಹೆಚ್ಚುಕಾಲ ಆಡುವ ವಿಶ್ವಾಸ ನನಗಿದೆ.

-ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next