ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ವಿಶ್ವದ ಅತೀ ದೊಡ್ಡ ಮೂರನೇ ಆರ್ಥಿಕ ಶಕ್ತಿಯಾಗಲಿದೆ ಎಂದು ಕೇಂದ್ರ ಮಹಿಳಾ ಶಿಶು ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದರು.
ಅವರು ಕಾಂಞಂಗಾಡ್‌ನಲ್ಲಿ ಎನ್‌ಡಿಎ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮೋದಿಗೆ ಸವಾಲೊಡ್ಡುವ ಜನರಿಗೆ ಅವರ ನೇತಾರ ಯಾರು, ಅವರ ಕ್ರಿಯಾ ಯೋಜನೆ ಯಾವುದು ಎಂದು ಪ್ರಶ್ನಿಸಿದರೆ ಉತ್ತರವಿಲ್ಲ. ಕೇಂದ್ರದಲ್ಲಿ
ನರೇಂದ್ರ ಮೋದಿ ಸಹಕಾರಿ ಇಲಾಖೆ ಸಚಿವಾಲಯ ರಚಿಸಿದಾಗ ಕೇರಳದಲ್ಲಿ ಸಹಕಾರಿ ಬ್ಯಾಂಕ್ ಗಳನ್ನು ಕೊಳ್ಳೆ ಹೊಡೆಯಲಾಯಿತು.
ಕರುವನ್ನೂರಿನಲ್ಲಿ ಸಿಪಿಎಂ, ಕಂಡ್ಲದಲ್ಲಿ ಸಿಪಿಐ, ಮಲಪ್ಪುರಂನಲ್ಲಿ ಲೀಗ್, ವಯನಾಡಿನಲ್ಲಿ ಕಾಂಗ್ರೆಸ್ ಕೊಳ್ಳೆ ಹೊಡೆಯಿತು. ಸಹಕಾರಿ ಬ್ಯಾಂಕ್ ಕೊಳ್ಳೆಯಿಂದ ಹಿಡಿದು ಚಿನ್ನ ಕಳ್ಳ ಸಾಗಾಟದ ವರೆಗಿನ ಎಲ್ಲ ಹಗರಣಗಳ ಒಕ್ಕೂಟವೇ ಐಎನ್‌ಡಿಐಎ ಮೈತ್ರಿಕೂಟ ಎಂದು ಆರೋಪಿಸಿದರು.
ಮತ್ಸ್ಯ ಸಂಪದ ಯೋಜನೆ ಪ್ರಕಾರ 400 ಕೋಟಿ ರೂ. ಮಂಜೂರು ಮಾಡಿದ್ದರೂ ಕೇರಳ ಕೇವಲ 72 ಕೋಟಿ ರೂ. ವೆಚ್ಚ ಮಾಡಿತು. 50 ವರ್ಷ ಪ್ರತಿನಿಧಿಸಿದ ಕಾಂಗ್ರೆಸ್ ಅಮೇಠಿಯಲ್ಲಿ ಯಾವುದೇ ಅಭಿವೃದ್ಧಿ ಸಾಧಿಸಿಲ್ಲ. ನಾನು ಸಂಸದೆಯಾದ ಬಳಿಕ ಕಳೆದ ಐದು ವರ್ಷದಲ್ಲಿ 4 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಯಿತು. ರೈಲು ನಿಲ್ದಾಣ ಅಭಿ ವೃದ್ಧಿಪಡಿಸಲಾಯಿತು . ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಅಮೃತ ಸ್ಟೇಶನ್ ಯೋಜನೆಯಲ್ಲಿ ಕಾಸರಗೋಡು ರೈಲು ನಿಲ್ದಾಣ ಅಭಿವೃದ್ಧಿ ಸಾಧ್ಯವಾಯಿತು ಎಂದರು.
ಎನ್‌ಡಿಎ ಚುನಾವಣ ಸಮಿತಿ ಚೇರ್‌ಮನ್ ಎಂ. ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್, ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಮಾತನಾಡಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದರು.