Advertisement

G-20 ಶೃಂಗಕ್ಕೆ ಹೊಸ ಭಾಷ್ಯ ಬರೆಯಲು ಭಾರತ ಸನ್ನದ್ಧ

11:43 PM Sep 08, 2023 | Team Udayavani |

ಭಾರತದಲ್ಲಿ ಇದೇ ಮೊದಲ ಬಾರಿಗೆ ಜಿ 20 ರಾಷ್ಟ್ರಗಳ ಶೃಂಗಸಭೆ ರಾಜಧಾನಿ ಹೊಸದಿಲ್ಲಿಯಲ್ಲಿ ಶನಿವಾರ ಮತ್ತು ರವಿವಾರಗಳಂದು ನಡೆಯಲಿದೆ. ಶುಕ್ರವಾರವೇ ಜಿ20 ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳ ನಾಯಕರು ಹೊಸದಿಲ್ಲಿಗೆ ಬಂದಿಳಿದಿದ್ದಾರೆ.

Advertisement

ಪ್ರಪ್ರಥಮ ಬಾರಿಗೆ ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತ ಕಳೆದ 10 ತಿಂಗಳುಗಳ ಅವಧಿಯಲ್ಲಿ ದೇಶದ ಮೂಲೆಮೂಲೆಗಳಿಗೆ ಜಿ20 ರಾಷ್ಟ್ರಗಳ ಪ್ರತಿನಿಧಿಗಳನ್ನು ಕರೆದೊಯ್ದು ಅಲ್ಲಿನ ಇತಿಹಾಸ, ಸಂಸ್ಕೃತಿಯನ್ನು ಪರಿಚಯಿಸಿದೆ. ಈಗ ತನ್ನ ಅಧ್ಯಕ್ಷತೆಯ ಜಿ20 ಶೃಂಗಸಭೆಯನ್ನು ಅತ್ಯಂತ ಅದ್ದೂರಿಯಿಂದ ಮತ್ತು ಅಷ್ಟೇ ಮಹತ್ವಪೂರ್ಣ ಚರ್ಚೆ, ಸಮಾಲೋಚನೆಗಳು ನಡೆದು ಐತಿಹಾಸಿಕ ನಿರ್ಣಯಗಳನ್ನು ಕೈಗೊಳ್ಳುವ ರೂಪರೇಖೆಗಳೊಂದಿಗೆ ಸಜ್ಜಾಗಿ ನಿಂತಿದೆ.

ಜಿ20 ಅಧ್ಯಕ್ಷತೆಯನ್ನು ಕೇವಲ ರಾಜತಾಂತ್ರಿಕ ಪ್ರಕ್ರಿಯೆಯ ಭಾಗ ಎಂದು ಭಾವಿಸದೆ ಪ್ರತಿಯೊಂದೂ ಹಂತದಲ್ಲೂ ಜಾಗತಿಕ ಸಮುದಾಯವನ್ನು ತನ್ನತ್ತ ಆಕರ್ಷಿಸುವಲ್ಲಿ ಸಫ‌ಲವಾಗಿದೆ. “ವಸುಧೈವ ಕುಟುಂಬಕಂ; ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಜಿ20 ರಾಷ್ಟ್ರಗಳ ಅಧ್ಯಕ್ಷಗಿರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಈಗ ಈ ಎಲ್ಲ ಯಶಸ್ಸಿನ ಗೋಪುರಕ್ಕೆ ಜಿ20 ಶೃಂಗಸಭೆಯ ಸ್ವರ್ಣ ಕಲಶವನ್ನಿಡಲು ಮುಹೂರ್ತ ಕೂಡಿಬಂದಿದೆ.

ಜಿ20 ಶೃಂಗ ಸಭೆಯಲ್ಲಿ ರಷ್ಯಾ-ಉಕ್ರೇನ್‌ ಸಮರ, ಕೆಲವೊಂದು ದೇಶಗಳ ವಿಸ್ತರಣಾವಾದ, ಭಯೋತ್ಪಾದನೆ, ಜಾಗತಿಕ ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಪರಿಸರ ಸ್ನೇಹಿ ಇಂಧನ ಬಳಕೆ ಸಹಿತ ವಿವಿಧ ಜಾಗತಿಕ ಸಮಸ್ಯೆಗಳು ಮತ್ತು ಆದ್ಯತೆಯ ವಿಷಯಗಳ ಕುರಿತಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ಚರ್ಚಿಸಲಿದ್ದಾರೆ. ಇವೆಲ್ಲದರ ನೇತೃತ್ವವನ್ನು ಸ್ವತಃ ಭಾರತವೇ ವಹಿಸಲಿದೆ ಎಂಬುದು ದೇಶವಾಸಿಗಳಾದ ನಮಗೆಲ್ಲರಿಗೂ ಹೆಮ್ಮೆಯ ಮತ್ತು ಗೌರವದ ವಿಷಯ.

ಇದೇ ವೇಳೆ ಜಿ20 ಶೃಂಗಸಭೆಗೆ ಆಗಮಿಸಿರುವ ವಿವಿಧ ರಾಷ್ಟ್ರಗಳ ನಾಯಕರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಶುಕ್ರವಾರದ ಸಂಜೆಯಿಂದಲೇ ಪ್ರಧಾನಿ ಅವರು ಈ ಮಾತುಕತೆ ಸರಣಿಗೆ ಚಾಲನೆ ನೀಡಿದ್ದು ವಿವಿಧ ದೇಶಗಳೊಂದಿಗಿನ ಬಾಂಧವ್ಯ ವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದ, ನಿರ್ಣಯಗಳಿಗೆ ಅಂಕಿತ ಹಾಕುವ ನಿರೀಕ್ಷೆ ಇದೆ.

Advertisement

ಇಡೀ ವಿಶ್ವದ ಶಾಂತಿ, ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಕೋನದಲ್ಲಿ ಭಾರತ ಜಿ20 ಶೃಂಗದ ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ನಿಭಾಯಿಸಲು ಆರಂಭದಲ್ಲಿಯೇ ಸಂಕಲ್ಪ ತೊಟ್ಟಿತ್ತು. ಅದರಂತೆ ತನ್ನ ಜವಾಬ್ದಾರಿಯನ್ನು ಈವರೆಗೆ ಸಮರ್ಥವಾಗಿ ನಿಭಾಯಿಸಿರುವ ಭಾರತ, ತನ್ನ ಅಧ್ಯಕ್ಷತೆಯ ಕೊನೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯನ್ನು ಮಾದರಿಯಾಗಿ ನಡೆಸಲು ಮತ್ತು ಶೃಂಗಕ್ಕೆ ಹೊಸಭಾಷ್ಯ ಬರೆಯಲು ಮುಂದಾಗಿದೆ. ಇದೇ ವೇಳೆ ಭಾರತ ತನ್ನ ಸಾರ್ವಭೌಮತೆ, ಘನತೆಗೆ ಎಲ್ಲೂ ಕುಂದುಂಟಾಗದಂತೆ ಎಚ್ಚರಿಕೆಯ ಹೆಜ್ಜೆ ಇಡುವ ಜತೆಯಲ್ಲಿ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಲು ಇದನ್ನೊಂದು ಅವಕಾಶವನ್ನಾಗಿ ಪರಿವರ್ತಿಸಿಕೊಂಡುದುದು ಶ್ಲಾಘನೀಯ.

Advertisement

Udayavani is now on Telegram. Click here to join our channel and stay updated with the latest news.

Next