ಬೀಳಗಿ: ಭಾರತ ಹಿಂದೂಗಳಿಂದ ಕೂಡಿದ ದೇಶ. ಹಿಂದೂಗಳೆಲ್ಲ ಸಮೃದ್ಧವಾಗಿದ್ದರೆ ಭಾರತ ಸಮೃದ್ಧವಾಗಿರುತ್ತದೆ. ಸಮೃದ್ಧತೆಗೆ ಆರ್ಥಿಕ ಸಂಪತ್ತಷ್ಟೇ ಇದ್ದರೆ ಸಾಲದು. ಬದಲಾಗಿ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಸಹೃದಯತೆ, ಸೌಹಾರ್ದತೆ, ಸಾಮರಸ್ಯತೆ ಇರಬೇಕು. ಹಿಂದೂಗಳಿದ್ದರೆ ಮಾತ್ರ ಭಾರತ ಇಲ್ಲದಿದ್ದರೆ ಭಾರತವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ರಾಷ್ಟ್ರೀಯ ಸಹಕಾರ್ಯದರ್ಶಿ ಗೋಪಾಜೀ ಹೇಳಿದರು.
ಇಲ್ಲಿನ ಸಿದ್ಧೇಶ್ವರ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಸಂಜೆ ಹಮ್ಮಿಕೊಂಡ ಮಹಾ ಲಕ್ಷ್ಮೀ ನಮೋಸ್ತುತೇ ಪೂಜಾ ಕಾರ್ಯಕ್ರಮ ಮತ್ತು ವಿರಾಟ ಹಿಂದೂ ಸಮಾಜೋತ್ಸವದಲ್ಲಿ ಗೋಪೂಜೆ ಹಾಗೂ ಭಾರತಾಂಬೆಯ ಭಾವಚಿತ್ರದ ಪೂಜೆ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ನಾವೆಲ್ಲ ಚಾಲುಕ್ಯರ ನಾಡಿನವರು. ಅತ್ಯಂತ ವೈಭವದಿಂದ ರಾಜ್ಯವನ್ನಾಳಿದ ದೊರೆ ಚಾಲುಕ್ಯ. ಮೊದಲ ಬಾರಿ ಮುಸಲ್ಮಾನರ ಆಕ್ರಮಣ( ಕ್ರಿ. ಶ 637) ಭಾರತದ ( ಮುಂಬೈ) ಮೇಲಾದಾಗ ಅವರನ್ನು ಮೆಟ್ಟಿ ನಿಂತು ಸೋಲಿಸಿ ವಾಪಸ ಕಳುಹಿಸಿದ ಪರಾಕ್ರಮಿಯ ನಾಡಿನಲ್ಲಿ ಹುಟ್ಟಿದ ನಾವುಗಳೆಲ್ಲ ಸಾಮರಸ್ಯದಿಂದ ಒಂದೇ ತಾಯಿಯ ಮಕ್ಕಳಂತೆ, ಯಾವುದೇ ಜಾತಿ, ಧರ್ಮ, ಮತ,ಪಂಥಗಳ ಭೇದ ಭಾವ ಇಲ್ಲದೇ ಎಲ್ಲರೂ ನಮ್ಮವರೆಂಬ ಭಾವದಿಂದ ಬದುಕಬೇಕು. ಅಣ್ಣ ಬಸವಣ್ಣ, ಅಕ್ಕ ಮಹಾದೇವಿ, ಎಲ್ಲ ಶರಣ ಸಂತರು, ದಾಸ ಮುನಿಗಳು, ವೇದ ಉಪನಿಷತ್ತು, ಭಗವದ್ಗೀತೆ ಇವುಗಳೆಲ್ಲವೂ ನಮಗೆ ಒಂದೇ ಸಂದೇಶ ನೀಡಿವೆ. ಅವುಗಳನ್ನು ಅರಿತು ನಡೆವ ಹಿಂದೂಗಳು ನಾವಾದರೆ ಮತ್ತೆ ಭಾರತ ವಿಜಯನಗರ ಸಾಮ್ರಾಜ್ಯವಾಗಿ, ವೈಭವದ ನಾಡಾಗಿ ಕಂಗೊಳಿಸುತ್ತದೆಂದು ಹೇಳಿದರು.
ಸಮಾರಂಭದಲ್ಲಿ ಬ್ರಹ್ಮರ್ಷಿ ಆನಂದ ಸಿದ್ಧಪೀಠದ ಆನಂದ ಗುರೂಜಿ, ಶ್ರೀನಿವಾಸ ಗುರೂಜಿ, ಪ್ರಾಂತ ಉಪಾಧ್ಯಕ್ಷ ಲಿಂಗರಾಜ ಅಪ್ಪ, ಸೋಮಪ್ಪಯ್ಯನ ಮಠದ ಚೆನ್ನಬಸವ ಸ್ವಾಮಿಗಳು, ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಗಳು, ದೊಡ್ಯಾಳ ಬ್ರಹನ್ಮಠದ ಶಿವಾನಂದ ದೇವರು, ಡಾ.ಸಾಗರ ತೆಕ್ಕೆಣ್ಣವರ, ರಾಮಣ್ಣ ಕಾಳಪ್ಪಗೋಳ,ಎಸ್.ಎನ್.ಮುತ್ತಗಿ, ಪುಂಡಲೀಕ ದಳವಾಯಿ ಇತರರಿದ್ದರು.
ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಪ.ಪಂ.ಅಧ್ಯಕ್ಷ ವಿಠಲ ಬಾಗೇವಾಡಿ ಸೇರಿದಂತೆ ಇತರ ಗಣ್ಯರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಗಮನ ಸೆಳೆದರು. ಅಂಬಾ ಭವಾನಿ ದೇವಸ್ಥಾನದಿಂದ ಮುಖ್ಯ ವೇದಿಕೆಯ ವರೆಗೆ ನಡೆದ ಶೋಭಾಯಾತ್ರೆ ಪ್ರೇಕ್ಷಕರ ಗಮನ ಸೆಳೆಯಿತು.