Advertisement

ಭಾರತ ಸಿಂಧೂರ ನಮ್ಮ ಕಾಶ್ಮೀರ

10:00 AM Aug 07, 2019 | Sriram |

ಹೊಸದಿಲ್ಲಿ/ಶ್ರೀನಗರ: ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದ ಯಾರೂ ನಾವು ಭಾರತದ ಅಂಗ ಅಲ್ಲ ಎನ್ನುವಂತಿಲ್ಲ!

Advertisement

ಕಳೆದ 72 ವರ್ಷಗಳಿಂದಲೂ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಕೇಂದ್ರದ ನರೇಂದ್ರ ಮೋದಿ ಸರಕಾರ, ಜಮ್ಮು ಮತ್ತು ಕಾಶ್ಮೀರದ ಕುರಿತಂತೆ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ಸಂವಿಧಾನದ 370ನೇ ವಿಧಿ ಮತ್ತು 35ಎ ಪರಿಚ್ಛೇದ ದಲ್ಲಿರುವ ವಿಶೇಷ ಸ್ಥಾನಮಾನದ ಎಲ್ಲ ಅಂಶಗಳನ್ನೂ ರದ್ದು ಮಾಡಲಾಗಿದೆ. ಅಷ್ಟೇ ಅಲ್ಲ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ರಾಜ್ಯದ ಸ್ಥಾನಮಾನವನ್ನೂ ಕಿತ್ತುಹಾಕಿರುವ ಕೇಂದ್ರ ಸರಕಾರ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚನೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಾನಸಭೆ ಸಹಿತ ಅಧಿಕಾರ ಹಾಗೂ ಲಡಾಖ್‌ಗೆ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶಗಳ ಸ್ಥಾನಮಾನ ನೀಡಲಾಗಿದೆ. ಅಂದರೆ, ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರವು ದಿಲ್ಲಿ ಹಾಗೂ ಪುದುಚೇರಿ ರೀತಿ ಆಡಳಿತ ನಿರ್ವಹಣೆ ಮಾಡಿದರೆ, ಲಡಾಖ್‌ನಲ್ಲಿ ಚಂಡೀಗಢದ ರೀತಿ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ.

ಜು.27ರಿಂದಲೇ ಜಮ್ಮು-ಕಾಶ್ಮೀರದಲ್ಲಿ ಏನೋ ಒಂದು ಪ್ರಮುಖ ಘಟನೆಯಾಗಲಿದೆ ಎಂಬ ಸುಳಿವು ಸಿಕ್ಕಿತ್ತಾದರೂ ಏನಾಗಲಿದೆ ಎಂಬ ಖಚಿತ ಮಾಹಿತಿ ಯಾರಿಗೂ ಸಿಕ್ಕಿರಲಿಲ್ಲ. ಆದರೆ ಸೋಮವಾರ ಈ ಸಂಬಂಧ ಹಬ್ಬಿದ್ದ ಎಲ್ಲ ವದಂತಿಗಳೂ ತೆರೆಗೆ ಸರಿದವು.

ಸೋಮವಾರ ಬೆಳಗ್ಗೆ 9.30ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಸಭೆ ಬಳಿಕ ಯಾವುದೇ ಮಾಹಿತಿ ನೀಡದ ಕೇಂದ್ರ ಸರಕಾರ, ಸದನದಲ್ಲೇ ಅಮಿತ್‌ ಶಾ ಮಾಹಿತಿ ನೀಡಲಿದ್ದಾರೆ ಎಂಬುದನ್ನು ಪ್ರಕಟಿಸಿತು.

Advertisement

ರಾಜ್ಯಸಭೆಯಲ್ಲಿ ಘೋಷಣೆ
ಸೋಮವಾರ ಬೆಳಗ್ಗೆ ರಾಜ್ಯಸಭೆ ಸೇರುತ್ತಿದ್ದಂತೆ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಗೃಹ ಸಚಿವ ಅಮಿತ್‌ ಶಾ ಅವರು ಹೊಸ ಮಸೂದೆ ಬಗ್ಗೆ ಪ್ರಸ್ತಾವ ಮಾಡಲಿದ್ದಾರೆ ಎಂದು ಪ್ರಕಟಿಸಿದರು. ಆದರೆ ಅಮಿತ್‌ ಶಾ ಭಾಷಣಕ್ಕೂ ಮುನ್ನವೇ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ಕಾಶ್ಮೀರದಲ್ಲಿ ಯುದ್ಧದ ರೀತಿಯ ಸನ್ನಿವೇಶ ನಿರ್ಮಾಣ ವಾಗಿದೆ. ಮಾಜಿ ಮುಖ್ಯಮಂತ್ರಿಗಳು ಗೃಹಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಮೊದಲು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಶಾ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಸಂವಿಧಾನದ 370ನೇ ವಿಧಿಯನ್ನು ಕೈಬಿಡುವ ಬಗ್ಗೆ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಿಸಿ ದರು. ಜತೆಯಲ್ಲೇ ಜಮ್ಮು ಕಾಶ್ಮೀರವನ್ನು 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ವಿಭಜನ ಮಸೂದೆಯನ್ನೂ ಮಂಡಿಸುತ್ತಿರುವುದಾಗಿ ಘೋಷಿಸಿದರು.

ಆದರೆ ಇಡೀ 370ನೇ ವಿಧಿಯನ್ನು ರದ್ದುಗೊಳಿಸಲಾ ಗುತ್ತಿಲ್ಲ. ಪರಿಚ್ಛೇದ 35ಎರಲ್ಲಿ ನೀಡಲಾಗಿರುವ ವಿಶೇಷಾ ಧಿಕಾರವನ್ನು ರದ್ದು ಮಾಡಲಾಗುತ್ತಿದೆ. ಜತೆಗೆ 370ರಲ್ಲಿ ವಿಶೇಷಾಧಿಕಾರ ಸಂಬಂಧ ನೀಡಲಾಗಿರುವ ಎಲ್ಲ ಅಂಶಗಳನ್ನೂ ರಾಷ್ಟ್ರಪತಿಗಳ ಆದೇಶ ರದ್ದು ಮಾಡಿದೆ. ರಾಷ್ಟ್ರಪತಿಗಳು 370ನೇ ವಿಧಿಯ 3ನೇ ಪರಿಚ್ಛೇದದಲ್ಲಿ ನೀಡಲಾಗಿರುವ ಅಧಿಕಾರವನ್ನು ಬಳಸಿಕೊಂಡು ಈ ಆದೇಶ ಹೊರಡಿಸಿದ್ದಾರೆ ಎಂಬುದನ್ನು ಪ್ರಕಟಿಸಿದರು.

ಒಮರ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಬಂಧನ
ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ರದ್ದು ಮಾಡುವ ಮಸೂದೆ ಪಾಸ್‌ ಆದ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್‌ ಅಬ್ದುಲ್ಲಾ , ಮೆಹಬೂಬಾ ಮುಫ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್‌ ತೀವ್ರ ವಿರೋಧ
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ರಾಜ್ಯವನ್ನು ಇಬ್ಭಾಗ ಮಾಡಿದ್ದನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿದೆ. ರಾಜ್ಯಸಭೆಯಲ್ಲಿ ಮಾತನಾಡಿದ ಗುಲಾಂ ನಬಿ ಅಜಾದ್‌ ಮತ್ತು ಪಿ.ಚಿದಂಬರಂ ಅವರು, ಈ ನಿರ್ಧಾರವನ್ನು ತತ್‌ಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ತರಾತುರಿಯಲ್ಲಿ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದರು. ಕಪಿಲ್‌ ಸಿಬಲ್‌ ಅವರು, ನಾವು ಕಾಶ್ಮೀರವನ್ನು ಗೆದ್ದಿದ್ದೆವು, ನೀವು ಸೋಲಿಸಿದಿರಿ ಎಂದು ಹೇಳಿದರು.

ಐದು ರಾಷ್ಟ್ರಗಳಿಗೆ ಮಾಹಿತಿ
ಬಾಲಾಕೋಟ್‌ ದಾಳಿಯ ಸಂದರ್ಭದ ಮಾದರಿಯಲ್ಲೇ ಕಾಶ್ಮೀರದ ವಿಷಯದಲ್ಲಿ ಬಹುದೊಡ್ಡ ನಿರ್ಣಯ ತೆಗೆದುಕೊಳ್ಳುವಾಗಲೂ ಅಮೆರಿಕ, ರಷ್ಯಾ, ಚೀನ, ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ದೇಶಗಳ ರಾಯಭಾರಿಗಳಿಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ತ್ರಿವಳಿ ತಲಾಖ್‌, ಆರ್‌ಟಿಐ ಬಿಲ್‌ಗ‌ಳಿಂದ ಬಲ
ರಾಜ್ಯಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಕೇಂದ್ರದಲ್ಲಿರುವ ಎನ್‌ಡಿಎ ಸರಕಾರಕ್ಕೆ, ಜಮ್ಮು ಮತ್ತು ಕಾಶ್ಮೀರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಭಾರೀ ಕಷ್ಟದ ಸ್ಥಿತಿಯೇ ಆಗಿತ್ತು. ಆದರೆ ಕಳೆದ 10 ದಿನದಲ್ಲಿ ಕೇಂದ್ರ ಸರಕಾರ ಹಲವಾರು ಪ್ರಮುಖ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಅದರಲ್ಲೂ ತ್ರಿವಳಿ ತಲಾಖ್‌, ಆರ್‌ಟಿಐ ಮಸೂದೆಗಳ ವಿಚಾರದಲ್ಲಿ ಬಿಜೆಡಿ, ಎಐಎಡಿಎಂಕೆ, ವೈಎಸ್‌ಆರ್‌ ಕಾಂಗ್ರೆಸ್‌, ಟಿಆರ್‌ಎಸ್‌ನಂಥ ಪಕ್ಷಗಳ ಬೆಂಬಲ ಸಿಕ್ಕಿದ್ದರಿಂದ ಆತ್ಮವಿಶ್ವಾಸ ಬಂದಿತ್ತು. ಹೀಗಾಗಿಯೇ ಜಮ್ಮು ಕಾಶ್ಮೀರದ ಬಗ್ಗೆ ನಿರ್ಧಾರ ತೆಗೆದುಕೊಂಡು ಮೊದಲೇ ರಾಜ್ಯಸಭೆಯಲ್ಲಿ ಮಂಡನೆ ಮಾಡಿ ಪಾಸ್‌ ಮಾಡಿಸಿಕೊಂಡಿದೆ. ವಿಶೇಷವೆಂದರೆ, ಈ ಮಸೂದೆಗೆ ಅನಿರೀಕ್ಷಿತವಾಗಿ ಬಿಎಸ್‌ಪಿ, ಎಎಪಿಯಂಥ ಪಕ್ಷಗಳ ಬೆಂಬಲವೂ ಸಿಕ್ಕಿತು.

ಜಮ್ಮು-ಕಾಶ್ಮೀರದಲ್ಲಾಗುವ ಬದಲಾವಣೆಗಳು
ಮೊದಲು
1. ಜಮ್ಮು ಕಾಶ್ಮೀರದಲ್ಲಿ
ವಿಶೇಷ ಅಧಿಕಾರ ಚಲಾವಣೆ
2. ದ್ವಿನಾಗರಿಕತ್ವ
3. ಪ್ರತ್ಯೇಕ ಧ್ವಜ
4. 360ನೇ ವಿಧಿ ಅನ್ವಯವಾಗಲ್ಲ (ತುರ್ತು ಪರಿಸ್ಥಿತಿ)
5. ಅಲ್ಪಸಂಖ್ಯಾಕರಿಗೆ ಮೀಸಲಾತಿ ಇಲ್ಲ (ಹಿಂದೂಗಳು ಮತ್ತು ಸಿಕ್ಖರು)
6. ಭಾರತದ ಯಾವುದೇ ನಾಗರಿಕ ಇಲ್ಲಿ ಆಸ್ತಿ ಕೊಳ್ಳುವಂತಿಲ್ಲ
7. ಮಾಹಿತಿ ಹಕ್ಕು ಜಾರಿ ಇಲ್ಲ
8. ವಿಧಾನಸಭೆಯ ಅವಧಿ 6 ವರ್ಷ
9. ಇಲ್ಲಿನ ಯುವತಿ ಹೊರಗಿನ ವ್ಯಕ್ತಿಯನ್ನು ವಿವಾಹವಾದರೆ ನಾಗರಿಕತ್ವ ರದ್ದು
10. ಗ್ರಾ.ಪಂ.ಗಳಿಗೆ ಅಧಿಕಾರವಿಲ್ಲ
11. ಕಡ್ಡಾಯ ಶಿಕ್ಷಣ ಹಕ್ಕು ಜಾರಿ ಇಲ್ಲ
12. ರಣಬೀರ್‌ ಪಿನಲ್‌ ಕೋಡ್‌ ಅನ್ವಯ
13. ಹೊರಗಿನವರಿಗೆ ರಾಜ್ಯ ಸರಕಾರದ ಉದ್ಯೋಗ ಇಲ್ಲ

ಈಗ
1. ಯಾವುದೇ ವಿಶೇಷಾಧಿಕಾರ ಇಲ್ಲ
2. ಒಂದೇ ಪೌರತ್ವ
3. ತಿರಂಗ ಧ್ವಜ ಮಾತ್ರ
4. 360ನೇ ವಿಧಿ ಅನ್ವಯ (ತುರ್ತು ಪರಿಸ್ಥಿತಿ)
5. ಅಲ್ಪಸಂಖ್ಯಾಕರಿಗೆ ಶೇ.16ರಷ್ಟು ಮೀಸಲಾತಿ
6. ಯಾರೂ ಆಸ್ತಿ ಖರೀದಿಸಬಹುದು
7. ಮಾಹಿತಿ ಹಕ್ಕು ಅನ್ವಯ
8. ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಅವಧಿ 5 ವರ್ಷ ಮಾತ್ರ
9. ಹೊರಗಿನ ವ್ಯಕ್ತಿ ವಿವಾಹವಾದ ಯುವತಿಯ ಯಾವುದೇ ಹಕ್ಕು ರದ್ದಾಗಲ್ಲ
10. ಪಂಚಾಯತ್‌ಗಳಿಗೆ ಅಧಿಕಾರ
11. ಇಲ್ಲಿನ ಮಕ್ಕಳಿಗೂ ಕಡ್ಡಾಯ ಶಿಕ್ಷಣ ಹಕ್ಕು ಅನ್ವಯ
12. ಇಂಡಿಯನ್‌ ಪಿನಲ್‌ ಕೋಡ್‌ ಅನ್ವಯ
13. ಹೊರಗಿನವರಿಗೂ ರಾಜ್ಯ ಸರಕಾರದ ಉದ್ಯೋಗ

ಕೇಂದ್ರದ ಪರ-ವಿರೋಧ
ಪರ ನಿಂತವರು
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕುವ ಕೇಂದ್ರದ ನಿರ್ಧಾರಕ್ಕೆ ಹಲವಾರು ಪಕ್ಷಗಳು ಬೆಂಬಲ ನೀಡಿವೆ. ಅದರಲ್ಲೂ ಉತ್ತರ ಪ್ರದೇಶದ ಬಿಎಸ್‌ಪಿ, ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್‌, ಒಡಿಶಾದ ಬಿಜೆಡಿ, ಸರಕಾರದ ಬೆನ್ನಿಗೆ ನಿಂತಿವೆ.

ಬಿಜೆಪಿ, ಶಿವಸೇನೆ, ಎಐಎಡಿಎಂಕೆ, ಬಿಎಸ್‌ಪಿ, ಎಎಪಿ, ಅಕಾಲಿದಳ, ಟಿಆರ್‌ಎಸ್‌, ವೈಎಸ್‌ಆರ್‌ಪಿ, ಟಿಡಿಪಿ, ಎಲ್‌ಜೆಪಿ, ಎಜಿಪಿ, ಪಿಎಂಕೆ, ಆರ್‌ಪಿಐ, ಬಿಜೆಡಿ.

ವಿರೋಧಿಸಿದವರು
370ನೇ ವಿಧಿ ತೆಗೆದುಹಾಕುವ ಕೇಂದ್ರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದು ಕಾಂಗ್ರೆಸ್‌. ಇದಕ್ಕೆ ಬೆಂಬಲವಾಗಿ ನಿಂತವರು, ನ್ಯಾಶನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಪಿಡಿಪಿ. ಅಚ್ಚರಿ ಎಂಬಂತೆ ಜೆಡಿಯು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿ ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿತು. ಕಾಂಗ್ರೆಸ್‌, ಪಿಡಿಪಿ, ಎನ್‌ಸಿ, ಟಿಎಂಸಿ, ಎಸ್‌ಪಿ, ಸಿಪಿಎಂ, ಸಿಪಿಐ, ಡಿಎಂಕೆ, ಎಂಡಿಎಂಕೆ, ಎನ್‌ಸಿಪಿ, ಜೆಡಿಯು.

ರಾಜ್ಯ ಇಬ್ಭಾಗ
ಕೇಂದ್ರ ಸರಕಾರದ ಅತೀ ಪ್ರಮುಖ ನಿರ್ಧಾರ ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿದ್ದು. ಅಷ್ಟೇ ಅಲ್ಲ, ಎರಡಕ್ಕೂ ಕೇಂದ್ರಾಡಳಿತ ಸ್ಥಾನಮಾನ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ಒಳಗೊಳ್ಳಲಿದೆ. ಇಲ್ಲೂ ಲೆಫ್ಟಿನೆಂಟ್‌ ಗವರ್ನರ್‌ ಇದ್ದು, ಅವರ ಸಲಹೆ-ಸೂಚನೆಗಳಂತೆ ಅಧಿಕಾರ ನಡೆಸ ಬೇಕಾಗುತ್ತದೆ. ಆದರೆ ಲಡಾಖ್‌ ಪ್ರದೇಶದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರ ಚಲಾಯಿಸಲಿದ್ದಾರೆ.

ಕ್ಷೇತ್ರ ಪುನರ್‌ವಿಂಗಡಣೆ
ಅಮಿತ್‌ ಶಾ ಅವರು ಮಂಡಿಸಿದ ಜಮ್ಮು ಮತ್ತು ಕಾಶ್ಮೀರ ವಿಭಜನೆ ಮಸೂದೆಯಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ಬಗ್ಗೆಯೂ ಪ್ರಸ್ತಾವ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ 107 ವಿಧಾನಸಭೆ ಕ್ಷೇತ್ರಗಳಿದ್ದು, ಇವುಗಳ ಸಂಖ್ಯೆ 114ಕ್ಕೆ ಏರಿಕೆಯಾಗಲಿದೆ. ವಿಶೇಷವೆಂದರೆ, ಇದರಲ್ಲಿ 24 ಕ್ಷೇತ್ರಗಳು ಪಾಕ್‌ ಆಕ್ರಮಿತ ಕಾಶ್ಮೀರದ ಒಳಗೆ ಬರಲಿದ್ದು, ಈ ಭಾಗ ಭಾರತಕ್ಕೆ ವಾಪಸ್‌ ಬರುವವರೆಗೂ ಖಾಲಿಯಾಗಿಯೇ ಉಳಿಯಲಿವೆ.

ರಾಜ್ಯಸಭೆಯಲ್ಲಿ ಮಸೂದೆ ಪಾಸ್‌
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದು ಮತ್ತು ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸುವ ಮಸೂದೆಗೆ ರಾಜ್ಯಸಭೆ ಸೋಮವಾರ ಸಂಜೆಯೇ ಒಪ್ಪಿಗೆ ನೀಡಿತು. ಗೃಹ ಸಚಿವ ಅಮಿತ್‌ ಶಾ ಅವರು ಮಂಡಿಸಿದ ಈ ಮಸೂದೆ ಪರವಾಗಿ 125 ಮತಗಳು ಬಂದರೆ, ವಿರೋಧಿಸಿ 61 ಮತ ಬಂದವು. ಇದೇ ಮಸೂದೆ ಮಂಗಳವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಪಾಕಿಸ್ಥಾನ ವಿರೋಧ
ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿದ ಮತ್ತು 370ನೇ ವಿಧಿಯನ್ವಯ ಇದ್ದ ವಿಶೇಷಾಧಿಕಾರ ತೆಗೆದು ಹಾಕಿದ ಭಾರತದ ನಿರ್ಧಾರ ವನ್ನು ಪಾಕಿಸ್ಥಾನ ತಿರಸ್ಕರಿಸಿದೆ. ಈ ಅಕ್ರಮ, ಏಕ ಪಕ್ಷೀಯ ನಿರ್ಧಾರದ ವಿರುದ್ಧ ಹೋರಾಡಲು ಲಭ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸುವುದಾಗಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿ ರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಇದರಿಂದ ಕಾಶ್ಮೀರದ ಸ್ಥಿತಿ ಮತ್ತಷ್ಟು ಹದಗೆಡಬಹುದು. ಅಣ್ವಸ್ತ್ರ ಹೊಂದಿರುವ ದೇಶಗಳ ಮಧ್ಯೆ ಇನ್ನಷ್ಟು ವೈರತ್ವಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಪಾಕ್‌ನ ವಿದೇಶಾಂಗ ಕಾರ್ಯದರ್ಶಿ ಸೊಹೈಲ್‌ ಮಹಮ್ಮದ್‌, ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಬದಿಗೆ ಸರಿಸಿದೆ ಎಂದಿದ್ದಾರೆ.

ಮೂರು
ಕುಟುಂಬಗಳಿಗಾಗಿ
ವಿಶೇಷಾಧಿಕಾರ
ಸೋಮವಾರ ಬೆಳಗ್ಗೆಯೇ ಮಸೂದೆ ಮಂಡಿಸಿದ್ದ ಅಮಿತ್‌ ಶಾ ಅವರು, ಸಂಜೆ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷಾಧಿಕಾರ ಇದ್ದದ್ದು ಕೇವಲ ಮೂರು ಕುಟುಂಬಗಳಿಗಾಗಿ ಮಾತ್ರ. ಇದು ಜನರಿಗಾಗಿ ಇರಲೇ ಇಲ್ಲ ಎಂದು ಹೇಳುವ ಮೂಲಕ ಫಾರೂಕ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಗಾಂಧಿ ಕುಟುಂಬಗಳಿಗೆ ತಿರುಗೇಟು ನೀಡಿದರು. ಈ 370ನೇ ವಿಧಿಯಿಂದಾಗಿ ಕಾಶ್ಮೀರ ದಲ್ಲಿ ಉಗ್ರವಾದ ಬೆಳೆದಿದೆ. ಭ್ರಷ್ಟಾಚಾರಕ್ಕೂ ಇದು ಸಾಕಷ್ಟು ಸಹಾಯ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ಜಮ್ಮು ಮತ್ತು ಕಾಶ್ಮೀರವನ್ನು ಶಾಶ್ವತವಾಗಿ ಕೇಂದ್ರಾಡಳಿತ ಪ್ರದೇಶ ಮಾಡಲಾಗುತ್ತದೆಯೇ ಎಂದು ಹಲವಾರು ಸಂಸದರು ಪ್ರಶ್ನೆ ಮಾಡಿದ್ದಾರೆ. ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಿದ ತತ್‌ಕ್ಷಣವೇ ಮತ್ತೆ ರಾಜ್ಯದ ಸ್ಥಾನ ಮಾನ ನೀಡಲಾಗುವುದು’ ಎಂದು ಅಮಿತ್‌ ಶಾ ಭರವಸೆ ನೀಡಿದರು. ಇದು ಸುದೀರ್ಘ‌ ಸಮಯ ತೆಗೆದು ಕೊಳ್ಳಬಹುದು. ಆದರೆ ಒಂದಲ್ಲ ಒಂದು ದಿನ ಮತ್ತೆ ಇದು ರಾಜ್ಯದ ಸ್ಥಾನಮಾನ ಪಡೆದೇ ಪಡೆಯುತ್ತದೆ ಎಂದರು.

370ನೇ ವಿಧಿ ಕೇವಲ ತಾತ್ಕಾಲಿಕವಾಗಿ ನೀಡಿದ್ದಷ್ಟೆ. ಈ ಅವಕಾಶವನ್ನು ಜುನಾಗಢ, ಹೈದರಾಬಾದ್‌ನಂಥ ಪ್ರದೇಶಗಳಿಗೆ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರು ನೀಡಿರಲೇ ಇಲ್ಲ. ಕಾಶ್ಮೀರದ ವಿಷಯದಲ್ಲಿ ವಲ್ಲಭಭಾಯ್‌ ಪಟೇಲ್‌ ಅವರು ತಲೆ ಹಾಕಲೂ ಇಲ್ಲ, ಹೀಗಾಗಿಯೇ ಅಂದು ತಾತ್ಕಾಲಿಕವಾಗಿ ಈ ವಿಧಿಯ ಅವ ಕಾಶ ನೀಡಲಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next