Advertisement

ಭಾರತ ಧರ್ಮ ಶಾಲೆಯಲ್ಲ

12:51 AM Jan 13, 2020 | Team Udayavani |

ಬೆಂಗಳೂರು: ಚಾಪೆ ಹಿಡಿದು ಬಂದವರಿಗೆಲ್ಲ ಜಾಗ ಕೊಡಲು ಭಾರತ “ಧರ್ಮ ಶಾಲೆ’ ಅಲ್ಲ. ಈ ದೇಶ ಇಲ್ಲಿ ಹುಟ್ಟಿ, ಇಲ್ಲೇ ಬದುಕು-ಬಾಳಿದವರಿಗೆ ಸೇರಿದ್ದು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್‌ ಸ್ವಾಮಿ ಹೇಳಿದರು. ವಿರಾಟ್‌ ಹಿಂದೂಸ್ತಾನ್‌ ಸಂಗಮ್‌ ಭಾನುವಾರ ಶಿಕ್ಷಕರ ಸದನದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ರೋಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.

Advertisement

ಬರ್ಮಾದಲ್ಲಿ ಇದ್ದೂ ಮುಹಮ್ಮದ್‌ ಅಲಿ ಜಿನ್ನಾ ತಮ್ಮ ನಾಯಕ ಎಂದು 1944ರಲ್ಲೇ ರೋಹಿಂಗ್ಯಾಗಳು ಘೋಷಿಸಿಕೊಂಡಿದ್ದರು. ಅಲ್ಲಿನ ಸಂವಿಧಾನ ರಚನಾ ಸಭೆ ನಡೆದಾಗ ನಾವು ಬರ್ಮಾದ ಭಾಗವಾಗಿ ಇರಲು ಬಯಸುವುದಿಲ್ಲ ಎಂದು ಹೇಳಿದ್ದರು. ಪಾಕಿಸ್ತಾನ ಅವರನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ಹೀಗಿರುವಾಗ ಭಾರತ ಯಾಕೆ ಅಶ್ರಯ ನೀಡಬೇಕು. ಚಾಪೆ ಹಿಡಿದು ಬಂದವರಿಗೆಲ್ಲ ಜಾಗ ನೀಡಲು ನಮ್ಮ ದೇಶ “ಧರ್ಮ ಶಾಲೆ’ ಅಲ್ಲ ಎಂದು ಪ್ರತಿಪಾದಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೇ ಗೊಂದಲ ಹುಟ್ಟು ಹಾಕಲಾಗುತ್ತಿದೆ. ಕಾಂಗ್ರೆಸ್‌ನ ಬಹು ತೇಕ ನಾಯಕರು ಸೇರಿದಂತೆ ಕಾಯ್ದೆಯ ವಿರುದ್ಧ ಹೋರಾಟ ಮಾಡುತ್ತಿರುವವರು ಕಾಯ್ದೆಯನ್ನು ಓದಿಲ್ಲ. ಈ ಕಾಯ್ದೆಯಿಂದ ಭಾರತದ ಮುಸ್ಲಿಮರ ಪೌರತ್ವಕ್ಕೆ ಯಾವುದೇ ಬಾಧೆ ಉಂಟಾಗುವುದಿಲ್ಲ ಎಂದು ಸ್ವಾಮಿ ಹೇಳಿದರು.

ಧರ್ಮದ ಆಧಾರದಲ್ಲಿ ಕಿರುಕುಳಕ್ಕೆ ಒಳಗಾದ ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಬಂದ 31 ಸಾವಿರ ಮಂದಿ 70 ವರ್ಷಗಳಿಂದ ಅಕ್ರಮ ವಲಸಿಗರಾಗಿ ನಿರಾಶ್ರಿತ ಕೇಂದ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಪೌರತ್ವ ನೀಡಲು ಕಾಯ್ದೆ ತರಲಾಗಿದೆ. ಇಸ್ಲಾಮಿಕ್‌ ರಾಷ್ಟ್ರದಲ್ಲಿ ಇರುವ ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರು ಭಾರತಕ್ಕೆ ಬರಲು ಬಯಸುವುದಿಲ್ಲ. ಅದಕ್ಕಾಗಿ ಅವರನ್ನು ಕಾಯ್ದೆಯಲ್ಲಿ ಸೇರಿಸಿಲ್ಲ ಎಂದು ತಿಳಿಸಿದರು.

ಅಖಂಡ ಮತ್ತು ಏಕೀಕೃತ ಭಾರತ ನಿರ್ಮಾಣದ ಕಲ್ಪನೆ ನಮ್ಮದು. ಹಿಂದುತ್ವ ಕೇವಲ ಹಿಂದೂಗಳಿಗೆ ಸಂಬಂಧಿಸಿದ್ದು ಅಲ್ಲ. ಈ ವಿಚಾರ ತಿಳಿದುಕೊಳ್ಳಬೇಕಾದರೆ ನಮ್ಮ ಮನಸ್ಥಿತಿಗಳು ಬದಲಾಗಬೇಕು. ದಕ್ಷಿಣ ಭಾರತದಲ್ಲಿ ಹಿಂದೂ ದೇವಾಲಯಗಳು ಸುರಕ್ಷಿತವಾಗಿದ್ದರೆ ಅದಕ್ಕೆ ವಿಜಯನಗರ ಸಾಮ್ರಾಜ್ಯ ಕಾರಣ. ಈಗಿನ ಆರ್ಥಿಕ ಬಿಕ್ಕಟ್ಟಿನಿಂದ ಎದೆಗುಂದ ಬೇಕಿಲ್ಲ. ಬಹಳ ಬೇಗ ಪರಿಸ್ಥಿತಿ ಸರಿಯಾಗಲಿದೆ ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಸತತ ಐದು ದಶಕಗಳ ಕಾಲ ಸೇವೆ ಸಲ್ಲಿಸಿರುವ ಸುಬ್ರಮಣಿಯನ್‌ ಸ್ವಾಮಿಯವರು ಮಹಾ ಮೇಧಾವಿ, ಸೂಕ್ಷ್ಮಮತಿ ರಾಜಕಾರಣಿ. ಅವರು ಆಡಿದ ಮಾತುಗಳು ಅನೇಕ ಸಂದರ್ಭಗಳಲ್ಲಿ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿವೆ. ಈಗಿನ ಸನ್ನಿವೇಶದಲ್ಲಿ ಹೊರಗಿನ ಶತ್ರುಗಳು ಮಾತ್ರವಲ್ಲ ಒಳಗಿನ ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ನಿರೀಕ್ಷೆ ಇಲ್ಲದ ಕಾಲದಿಂದಲೂ ಹಳ್ಳಿ-ಹಳ್ಳಿಗೆ ಸುತ್ತಾಡಿ ಬಿ.ಎಸ್‌.ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತಂದರು. ಹೊಟ್ಟೆಕಿಚ್ಚಿನ ಕೆಲವರು ಅವರನ್ನು ತುಳಿಯಲು ಪ್ರಯತ್ನಿಸಿದರು. ಆದರೆ, ಅವರು ಗಟ್ಟಿಯಾಗಿ ನಿಂತರು. ಅವರೊಬ್ಬ ಕರ್ನಾಟಕದ ಅತ್ಯುತ್ತಮ ಮುಖ್ಯಮಂತ್ರಿ.
-ಡಾ.ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next