ಮುಂಬಯಿ: ಭಾರತ ಮೊದಲು ಹಿಂದೂಗಳ ರಾಷ್ಟ್ರವಾಗಿದ್ದು, ಅನಂತರ ಇತರ ಧರ್ಮದವರಿಗೆ ಸೇರಿರುವುದಾಗಿದೆ ಎಂದು ಸೋಮವಾರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪ್ರತಿಪಾದಿಸಿದೆ.
ಕೇಂದ್ರದಲ್ಲಿ ಹಿಂದುತ್ವಪರ ಸರಕಾರವಿದ್ದರೂ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಸ್ಥಳಾಂತರಿತ ಕಾಶ್ಮೀರ ಪಂಡಿತರ ಘರ್ ವಾಪಸಿಯಂತಹ ಸಮಸ್ಯೆಗಳು ಇನ್ನೂ ಬಗೆಹರೆಯದಿರುವುದಕ್ಕೂ ಪಕ್ಷವು ವಿಷಾದ ವ್ಯಕ್ತಪಡಿಸಿದೆ.
ಹಿಂದೂಸ್ಥಾನ ಹಿಂದೂಗಳ ರಾಷ್ಟ್ರವಾಗಿದೆ. ಅಂದರೆ ದೇಶವು ಬೇರೆಯವರಿಗೆ ಸೇರಿದ್ದಲ್ಲ ಎಂಬುದು ಅದರರ್ಥವಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ಇಂದೋರ್‌ನಲ್ಲಿ ಹೇಳಿಕೆ ನೀಡಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಅವರು ಭಾರತವು ಹಿಂದೂಗಳ ಜತೆಗೆ ಇತರರಿಗೂ ಸೇರಿದೆ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ, ಭಾರತವು ಮೊದಲು ಹಿಂದೂಗಳಿಗೆ ಸೇರಿದ್ದು,ಅನಂತರ ಇತರರಿಗೆ ಸ್ಥಾನ ಎಂಬುದು ಶಿವಸೇನೆ ಮುಖ್ಯಸ್ಥರ ಅಭಿಪ್ರಾಯವಾಗಿದೆ. ಯಾಕೆಂದರೆ, ಮುಸ್ಲಿಮರಿಗೆ 50ಕ್ಕೂ ಅಧಿಕ ರಾಷ್ಟ್ರಗಳಿವೆ. ಆದರೆ, ಹಿಂದೂಗಳಿಗೆ ಇರುವುದು ಕೇವಲ ಒಂದೇ ರಾಷ್ಟ್ರ, ಅದು ಭಾರತ ಎಂದು ಸೋಮವಾರ ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರತಿಪಾದಿಸಿದೆ.
ಕ್ರಿಶ್ಚಿಯನ್ನರು ಅಮೆರಿಕ ಮತ್ತು ಯೂರೋಪ್‌ನಂತಹ ರಾಷ್ಟ್ರಗಳನ್ನು ಹೊಂದಿದ್ದಾರೆ, ಬೌದ್ಧರಿಗಾಗಿ ಚೀನಾ, ಜಪಾನ್, ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಂತಹ ರಾಷ್ಟ್ರಗಳಿವೆ. ಆದರೆ, ಹಿಂದೂಗಳಿಗೆ ಭಾರತವೊಂದನ್ನು ಬಿಟ್ಟು ಬೇರೆ ಯಾವುದೇ ರಾಷ್ಟ್ರವಿಲ್ಲ ಎಂದು ಶಿವಸೇನೆ ನುಡಿದಿದೆ.
ಹಿಂದೂ ರಾಷ್ಟ್ರದಲ್ಲಿ ಇತರ ಧರ್ಮಗಳ ಜನರು ಹಿಂದೂಸ್ಥಾನಿ ನಾಗರಿಕರಂತೆ ನೆಲೆಸಬಹುದಾಗಿದೆ. ಆದರೆ, ಅವರು ತಮ್ಮ ತಮ್ಮ ಧರ್ಮವನ್ನು ರಕ್ಷಿಸುವ ಜತೆಗೆ ಹಿಂದೂ ರಾಷ್ಟ್ರದ ಪರವೂ ನಿಷ್ಠೆ ಯನ್ನು ಹೊಂದಿರಬೇಕಾಗುತ್ತದೆ ಎಂದು ಕೇಸರಿ ಪಕ್ಷ ತಿಳಿಸಿದೆ.
ಭಾರತದಲ್ಲಿ ಇಂದು ಹಿಂದುತ್ವಪರ ಬಹುಮತದ ಸರಕಾರವಿದ್ದರೂ, ಅದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಸರಕಾರವು ವಿವಾದವನ್ನು ಸ್ವತಃ ಬಗೆಹರಿಸುವ ಬದಲಿಗೆ ಅದನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದೆ ಎಂದು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಮಿತ್ರಪಕ್ಷ ಶಿವಸೇನೆ ಕಿಡಿಕಾರಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ವಿರುವ ಹೊರತಾಗಿಯೂ ಇಂದು ಸಾರ್ವಜನಿಕ ಸ್ಥಳದಲ್ಲಿ ವಂದೇ ಮಾತರಂ ಹಾಡಲು ಅನು ಮತಿಯಿಲ್ಲದಂತಾಗಿದೆ. ಈ ಸಂಬಂಧ ಆರ್‌ಎಸ್‌ಎಸ್ ಸರಕಾರಕ್ಕೆ ನಿರ್ದೇಶನ ನೀಡಬೇಕಾದ ಆವ ಶ್ಯಕತೆಯಿದೆ ಎಂದು ಶಿವಸೇನೆ ಸಲಹೆ ನೀಡಿದೆ.
ಯಾವ ಓರ್ವ ನಾಯಕ ಅಥವಾ ಪಕ್ಷಕ್ಕೆ ಈ ದೇಶವನ್ನು ಮಹಾನ್ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ನಮಗೆ ಮೊದಲು ಉತ್ತಮ ಸಮಾಜವೊಂದನ್ನು ನಿರ್ಮಾಣ ಮಾಡುವ ಆವಶ್ಯಕತೆಯಿದೆ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಯನ್ನೂ ನಾವು ಕಡೆಗಣಿಸುವಂತ್ತಿಲ್ಲ ಎಂದೂ ಪಕ್ಷವು ಸಂಪಾದಕೀಯದಲ್ಲಿ ತಿಳಿಸಿದೆ.