Advertisement

ಕೋವಿಡ್-19 ಯುದ್ಧ ಗೆಲ್ಲಲಿದೆ ಭಾರತ

04:23 PM Apr 17, 2020 | mahesh |

ಕುಂದಾಪುರ: ಪ್ರಪಂಚದ ಅಷ್ಟೂ ರಾಷ್ಟ್ರಗಳು ಕೋವಿಡ್-19 ವಿರುದ್ಧ ನಡೆಸುತ್ತಿರುವ ಸೆಣಸಾಟ ನೋಡಿದಾಗ ಭಾರತ ಗೆದ್ದು ಬಂದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಲಂಡನ್‌ ಜಿಡಿಪಿ ಶೇ. -1ಕ್ಕೆ ಇಳಿಯಲಿದ್ದರೆ, ಭಾರತದಲ್ಲಿ ಶೇ. +1 ಇರಲಿದೆ ಎನ್ನುವುದು ಆರ್ಥಿಕ ತಜ್ಞರ ಅಂದಾಜು. ಭಾರತದಲ್ಲಿ ಜನಶಕ್ತಿಯಿದೆ, ಪ್ರಾಕೃತಿಕ ಸಂಪನ್ಮೂಲವಿದೆ ಹಾಗೂ ಸಮರ್ಥ ನಾಯಕತ್ವ ಇದೆ. ಕುಂದಾಪುರ ನಗರದ ಫೆರಿ ರಸ್ತೆಯ ಪ್ರಭಾಕರ ಟೈಲ್ಸ್‌ ಸಮೀಪದ ನಿವಾಸಿ, ಪ್ರಸ್ತುತ ಲಂಡನ್‌ನ ಲೂಟನ್‌ನಲ್ಲಿ ಐಟಿ ಉದ್ಯೋಗಿಯಾಗಿರುವ ಪವನ್‌ ಕುಮಾರ್‌ ಮೂಡ್ಲಕಟ್ಟೆ ಅವರ ಖಚಿತ ವಿಶ್ವಾಸವಿದು.

Advertisement

ಹೊರ ಬಂದರೆ ಬಂಧನ
ಇಲ್ಲಿ ನಿತ್ಯ ಸಂಜೆ 5 ಗಂಟೆಗೆ ಪ್ರಧಾನಿ ಕಚೇರಿಯಿಂದ ದೇಶದ ಚಿತ್ರಣ ನೀಡಲಾಗುತ್ತದೆ. ಲಾಕ್‌ಡೌನ್‌ ಇದೆ. ಅಗತ್ಯ ವಸ್ತುಗಳಿಗಾಗಿ ಮಾತ್ರ ಹೊರಬರಬಹುದು. ಅನಗತ್ಯ ಬೀದಿಗೆ ಬಂದರೆ 1 ಸಾವಿರ ಪೌಂಡ್‌ (95 ಸಾವಿರ ರೂ.) ದಂಡ ವಿಧಿಸುತ್ತಾರೆ. ಕ್ವಾರಂಟೈನ್‌ನವರು ಹೊರಬಂದರೆ ಬಂಧಿಸಿ ಜೈಲಿಗಟ್ಟುತ್ತಾರೆ. ಅಗತ್ಯ ಸೇವೆಗಳ ಉದ್ಯೋಗಿಗಳಿಗೆ ಪಾಸ್‌ ನೀಡಲಾಗಿದೆ ಎಂದು ವಿವರಿಸಿದರು.

ಮೀಸಲು
ದಿನಸಿ ಮಾಲ್‌ಗ‌ಳಲ್ಲಿ ಬೆಳಗಿನ 1 ಗಂಟೆ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ವೈದ್ಯ, ನರ್ಸ್‌ ಮೊದಲಾದ ಅಗತ್ಯ ಸೇವೆಗಳ ಸಿಬಂದಿ ವ್ಯವಹಾರಕ್ಕೆ ಮೀಸಲು. ಆಮೇಲೆ ಸಾರ್ವಜನಿಕರಿಗೆ. 20 ಜನರಿಗೆ ಮಾತ್ರ ಪ್ರವೇಶಾವಕಾಶ. ಅಂತರ ಕಾಯ್ದುಕೊಳ್ಳಬೇಕು. ಬಸ್ಸು ಓಡಾಟ ಕಡಿಮೆ ಮಾಡಲಾಗಿದ್ದು ಕಚೇರಿ ಸಮಯಕ್ಕೆ ಮಾತ್ರ ಮೀಸಲಿಡಲಾಗಿದೆ.

ಸರಕಾರದಿಂದ ವೇತನ
ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ, ಉದ್ಯೋಗ ಕಡಿತ ಮಾಡಬಾರದು ಎಂದು ಸೂಚಿಸಿ, ಎಲ್ಲ ಉದ್ಯೋಗಿಗಳಿಗೆ ಸರಕಾರ ಫ‌ರ್ಲೋ ಘೋಷಿಸಿದ್ದು ಸರಕಾರದಿಂದಲೇ 2,500 ಪೌಂಡ್‌ ಮೀರದಂತೆ ಶೇ. 80 ವೇತನವನ್ನು ನೀಡಲಾಗುತ್ತದೆ. ಇದನ್ನು ಕಂಪನಿಗಳಿಗೆ 3 ತಿಂಗಳಿಗೆ ಅನುದಾನವಾಗಿ ನೀಡಲಾಗುತ್ತದೆ ಎಂದು ವಿವರಿಸಿದರು.

ಭಾರತ ಅಗ್ರಣಿ
ಭವಿಷ್ಯದಲ್ಲಿ ಆರ್ಥಿಕತೆಗೆ ಕೊರೊನಾ ನೀಡಿದ ಹೊಡೆತವನ್ನು ಸಹಿಸಿಕೊಳ್ಳುವ ಶಕ್ತಿ ಭಾರತಕ್ಕೆ ಇದೆ. ಆದರೆ ಜನ ಸ್ವಾವಲಂಬಿಗಳಾಗಬೇಕು. ಭಾರತದಲ್ಲಿ ಔಷಧ ಉತ್ಪಾದಿಸಿ ವಿದೇಶಕ್ಕೆ ಕಳುಹಿಸಲಾಗುತ್ತದೆ. ಎಲ್ಲ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಭಾರತದಲ್ಲೇ ತಯಾರಿಸಿ ಮಾರುಕಟ್ಟೆ ಮಾಡಬೇಕು. ಜನರೂ ಇದಕ್ಕೆ ಒಗ್ಗಿಕೊಳ್ಳಬೇಕು. ಕೊಳ್ಳುಬಾಕತನಕ್ಕೆ ಈಗ ಹಾಕಿಕೊಂಡ ಮಿತಿಯನ್ನು ಮುಂದುವರಿಸಬೇಕು. ಈ ಸ್ಥಿತಿಯಲ್ಲಿ ನಮ್ಮ ಆಪದಾºಂಧವರಾಗಿದ್ದ ನಮ್ಮ ಪಕ್ಕದ ಅಂಗಡಿಗಳನ್ನು ಮುಂದೆಯೂ ಪ್ರೋತ್ಸಾಹಿಸಬೇಕು. ದೇಶದೊಳಗೇ ಹಣ ಓಡಾಡಿದರೆ ಆರ್ಥಿಕತೆ ಚಿಗಿತುಕೊಳ್ಳುತ್ತದೆ. ವಿದೇಶದಲ್ಲಿ ಉದ್ಯಮಗಳಿಗೆ ಶೇ. 1, 2ಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಭಾರತದಲ್ಲಿ ಶೇ. 15-20 ಬಡ್ಡಿಗೆ ಸಾಲ ಮಾಡಿ ಉದ್ಯಮ ಮಾಡುವುದು ಹೇಗೆ? ಆಮದು ಸುಂಕ ಭರಿಸಿ ಖರೀದಿಸುವುದು ಹೇಗೆ? ಈ ನಿಟ್ಟಿನಲ್ಲೂ ಸರಕಾರವೂ ಸ್ಪಂದಿಸಬೇಕು ಎಂದು ಸಲಹೆ ನೀಡಿದ್ದಾರೆ.

Advertisement

ಸ್ಥಳೀಯ ವ್ಯವಹಾರ ಬೆಂಬಲಿಸಿ
ಲಾಕ್‌ಡೌನ್‌ ದಿನಗಳಲ್ಲಿ ಸರಕಾರ ಹೇಳಿದ್ದನ್ನು ಕೇಳಬೇಕು, ಅದು ನಮಗೆ ಒಳ್ಳೆಯದು. ಅದಾದ ಅನಂತರ ನಮ್ಮ ಸ್ಥಳೀಯ ಆರ್ಥಿಕ ವ್ಯವಹಾರವನ್ನು ಬೆಂಬಲಿಸಬೇಕು. ಅದು ದೇಶಕ್ಕೆ ಒಳ್ಳೆಯದು. ಭಾರತ ಈ ಹೊಡೆತ ತಾಳಿಕೊಳ್ಳಲಿದೆ.
-ಪವನ್‌ ಕುಮಾರ್‌ ಮೂಡ್ಲಕಟ್ಟೆ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next