Advertisement

ವಿದೇಶಿ ವಿದ್ವಾಂಸರ ಕಣ್ಣಲ್ಲಿ ಭಾರತದ ಹಳ್ಳಿ

08:50 PM Mar 30, 2019 | Team Udayavani |

ಎಲ್ಲಿಯ ಉಡುಪಿ? ಎಲ್ಲಿಯ ಇಂಗ್ಲೆಂಡ್‌? ಎತ್ತಣಿಂದೆತ್ತ‌ ಸಂಬಂಧವಯ್ನಾ? ಯುರೋಪ್‌ ದೇಶದ ಇಂಗ್ಲೆಂಡ್‌ನ‌ ಆ್ಯಡಮ್‌ ಕ್ಲಾಫ‌ಮ್‌ (Adam Clapham)ರವರಿಗೆ ಕರಾವಳಿ ತೀರದ ಉಡುಪಿ ಜಿಲ್ಲೆಯ ಕಟಪಾಡಿಯ ಮಣಿಪುರದ ಒಂದು ಹಳ್ಳಿ ಇಷ್ಟವಾಗಿ ಈ ಹಳ್ಳಿಯಲ್ಲಿಯೇ ಉಳಿದು ತುಳುನಾಡಿನ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುತ್ತ ಬದುಕು ಸಾಗಿಸುತ್ತಿದ್ದಾರೆ ಎಂದರೆ ಯಾರಿಗೂ ಅಚ್ಚರಿಯಾದೀತು ! ಕರಾವಳಿಯ ತೀರವೆಂದರೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ಪ್ರಾಕೃತಿಕವಾಗಿ ಮಹತ್ವದ ಭೂಭಾಗ. ಒಂದು ಕಡೆ ಪಶ್ಚಿಮಘಟ್ಟದ ಗಿರಿಸರದಿ, ಇನ್ನೊಂದು ಕಡೆ ಸದಾ ಅಬ್ಬರಿಸುವ ಅರಬ್ಬಿ ಶರಧಿ, ನಡುವೆ ನದಿ, ತೋಟ, ಗದ್ದೆಗಳಿರುವ ಹಸಿರು ಪರಿಧಿ! ದೇವಸ್ಥಾನ, ಚರ್ಚು, ಮಸೀದಿಗಳಲ್ಲಿ ಇರುವ ಸಂಪ್ರದಾಯಗಳು, ಆಚಾರ, ವಿಚಾರಗಳು ಎಲ್ಲವನ್ನೂ ಗಮನಿಸಿದರೆ ಇದು ನಿಜವಾಗಿಯೂ ಬಹುಸಂಸ್ಕೃತಿಯ ಪ್ರತೀಕ.

Advertisement

ಆ್ಯಡಮ್‌ ಕ್ಲಾಫ‌ಮ್‌ ಪ್ರತಿಷ್ಠಿತ ಬಿಬಿಸಿ ಮಾಧ್ಯಮ ಕಂಪೆನಿಯಲ್ಲಿ ಡಾಕ್ಯುಮೆಂಟರಿ ಪ್ರೊಡ್ನೂಸರ್‌ ಹುದ್ದೆಯಲ್ಲಿದ್ದ ಕಾರಣ ವೃತ್ತಿನಿಮಿತ್ತ ಇಡೀ ಪ್ರಪಂಚವನ್ನೇ ಸುತ್ತಾಡಿದವರು. ವಿವಿಧ ದೇಶಗಳ ಸಾಂಸ್ಕೃತಿಕ ವೈವಿಧ್ಯವನ್ನು ಹತ್ತಿರದಿಂದ ಕಂಡವರು. ಬಿಬಿಸಿಯ ಉದ್ಯೋಗದಿಂದ ನಿವೃತ್ತಿ ಪಡೆದ ನಂತರವೂ ದೇಶ ಸುತ್ತಬೇಕು ಎಂಬ ಇವರ ಅಭಿಲಾಷೆ ಇಟ್ಟುಕೊಂಡವರು. ಭಾರತಕ್ಕೆ ಬರುತ್ತಿದ್ದ ಆಡಮ್‌ರವರರಿಗೆ ದಕ್ಷಿಣಭಾರತದ ಅದರಲ್ಲೂ ಕರಾವಳಿ ತೀರ ತುಂಬಾ ಇಷ್ಟವಾಗಿತ್ತು. ಆರಂಭದಲ್ಲಿ ಕೊಚ್ಚಿನ್‌ ಮತ್ತು ಕೇರಳದ ಇನ್ನಿತರ ಜಿಲ್ಲೆಗಳಲ್ಲಿ ಸುತ್ತಾಡುತ್ತಿದ್ದರು. ಕಾರವಾರದವರೆಗೂ ಹೋಗಿಬಂದರು. ಕೊನೆಗೆ ಉಡುಪಿ ಜಿಲ್ಲೆಯ ಕಟಪಾಡಿಯ ಮಣಿಪುರ ಎಂಬ ಗ್ರಾಮದಲ್ಲಿ ಇವರು ಒಂದು ಸಾಂಪ್ರದಾಯಿಕ ಮನೆಯನ್ನು ಆಯ್ಕೆ ಮಾಡಿ ಅದರಲ್ಲಿ ಕಳೆದ 12 ವರ್ಷಗಳಿಂದ ವಾಸಿಸುತ್ತಿದ್ದಾರೆ.

“ನದಿಗ್ರಾಮ’ವೆಂದೇ ಇವರಿಂದ ನಾಮಕರಣವಾದ ಮಣಿಪುರದ ಈ ತಾಣ ಹೇಗಿದೆಯೆಂದರೆ ಇವರು ವಾಸಿಸುವ ಮನೆಯ ಹಿಂದೆ ಉದ್ಯಾವರ ಹೊಳೆ, ಮನೆಯ ಎದುರು ವಿಶಾಲವಾಗಿ ಇರುವ ಹಸಿರು ಕಂಗೊಳಿಸುವ ಗದ್ದೆ, ತೋಟ. ಹಳ್ಳಿ. ಸನಿಹದಲ್ಲಿಯೇ ದೈವಸ್ಥಾನ, ಚರ್ಚು, ಮಸೀದಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಸಮಾರಂಭಗಳು. ಪುಟ್ಟ ಮಣಿಪುರ ಇಡೀ ಭಾರತಕ್ಕೆ ಪ್ರತಿಬಿಂಬದಂತೆ ಕಾಣಿಸಿತು.

ಆ್ಯಡಮ್‌ ಕ್ಲಾಫ‌ಮ್‌ ತುಳುನಾಡಿನಲ್ಲಿ 12 ವರ್ಷಗಳ ತಿರುಗಾಟದಿಂದ ಪಡೆದ ತಿಳುವಳಿಕೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಎ ವಿಲೇಜ್‌ ಇನ್‌ ಸೌತ್‌ ಇಂಡಿಯ ಎಂಬ ಪುಸ್ತಕ ಬರೆದು ಇತ್ತೀಚೆಗೆ ಲಂಡನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದು ಮಣಿಪುರ ಎಂಬ ಹಳ್ಳಿಯನ್ನು ಕೇಂದ್ರೀಕರಿಸಿಕೊಂಡು ಬರೆದ ಸಂಕಥನವಾದರೂ ದಕ್ಷಿಣಭಾರತದ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿನಿಧಿಸುವಂತಿದೆ. ಇಂಥ ದಾಖಲೀಕರಣಗಳು ಭವಿಷ್ಯದಲ್ಲಿ ಕರಾವಳಿಯ ಇತಿಹಾಸವನ್ನು ಕಟ್ಟುವಲ್ಲಿ ಮಹಣ್ತೀದ ಆಕರಗಳಾಗಲಿವೆ.

– ದಿನೇಶ ಹೊಳ್ಳ

Advertisement
Advertisement

Udayavani is now on Telegram. Click here to join our channel and stay updated with the latest news.

Next