Advertisement

ಯಶಸ್ಸಿನತ್ತ ಸ್ವಚ್ಚ ಭಾರತ: ಹಿಂದುಳಿಯದಿರಲಿ ಕರ್ನಾಟಕ  

06:00 AM Aug 04, 2018 | |

ದೇಶವನ್ನು ಬಯಲು ಶೌಚ ಮುಕ್ತಗೊಳಿಸಲು ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಕೈಗೊಂಡಿದ್ದ ಅಭಿಯಾನ ಯಶಸ್ಸಿನತ್ತ ಮುಖ ಮಾಡಿರುವುದು ಒಂದು ಆಶಾದಾಯಕ ಬೆಳವಣಿಗೆ. ಅದರಲ್ಲೂ ಗ್ರಾಮೀಣ ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವ ಗುರಿ ಅಸಾಧ್ಯವೆಂದೇ ಭಾವಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸತತ ಪ್ರಯತ್ನಗಳಿಂದ ಈ ಅಸಾಧ್ಯ ಗುರಿಯ ಸನಿಹ ತಲುಪಿರುವುದು, ಯಾವುದೇ ಕಾರ್ಯಕ್ರಮವನ್ನು ಬದ್ಧತೆಯಿಂದ ಅನುಷ್ಠಾನಿಸಿದರೆ ಯಶಸ್ವಿಯಾಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. 

Advertisement

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ನಡೆಸಿರುವ ಸಮೀಕ್ಷೆ ಪ್ರಕಾರ ಬಯಲು ಶೌಚ ಮುಕ್ತ ಅಭಿಯಾನ ಶೇ.90ರಷ್ಟು ಗುರಿ ಸಾಧಿಸಿದೆ. ಗ್ರಾಮೀಣ ಭಾಗಗಳಲ್ಲಿ ಬಯಲು ಶೌಚಕ್ಕೆ ಹೋಗುವವರ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಿದೆ ಎಂಬ ಅಂಶ ಈ ಸಮೀಕ್ಷೆಯಿಂದ ವ್ಯಕ್ತವಾಗಿದೆ. 2014ರಲ್ಲಿ ಗ್ರಾಮೀಣ ಭಾಗಗಳಲ್ಲಿ 55 ಕೋಟಿ ಜನರು ಬಯಲು ಶೌಚವನ್ನು ಆಶ್ರಯಿಸಿದ್ದರು. 2018ಕ್ಕಾಗುವ ಈ ಸಂಖ್ಯೆ 25 ಕೋಟಿಗಿಳಿದಿದೆ. ಇಷ್ಟರ ತನಕ ಸುಮಾರು 296 ಜಿಲ್ಲೆಗಳು, 3,07,349 ಹಳ್ಳಿಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲಾಗಿದ್ದು, ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಸಾಧನೆ ಚಿಕ್ಕದಲ್ಲ. ಸಿಕ್ಕಿಂ, ಹಿಮಾಚಲ ಪ್ರದೇಶ, ಕೇರಳ, ಹರ್ಯಾಣ, ಉತ್ತರಖಂಡ, ಛತ್ತೀಸ್‌ಗಢ, ಅರುಣಾಚಲ್‌ ಪ್ರದೇಶ, ಗುಜರಾತ್‌, ದಮನ್‌-ದಿಯು ಮತ್ತು ಚಂಡೀಗಢ ರಾಜ್ಯಗಳು ಸಂಪೂರ್ಣ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ. 

ಬಯಲು ಶೌಚ ಅನೇಕ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿತ್ತು. ಹಳ್ಳಿಗಳಲ್ಲಿ ಮಹಿಳೆಯರು ಶೌಚಕ್ಕೆ ಹೋಗಲು ರಾತ್ರಿಯಾಗುವ ತನಕ ಕಾಯುವ ದಯನೀಯ ಪರಿಸ್ಥಿತಿಯಿತ್ತು. ಇದನ್ನೇ ಕಾದು ಕುಳಿತುಕೊಂಡು ಪುಂಡರು ಅವರ ಮೇಲೆ ಹಲ್ಲೆ ಮಾಡುತ್ತಿದ್ದರು. ವರ್ಷದಲ್ಲಿ ಸುಮಾರು 1 ಲಕ್ಷ ಮಕ್ಕಳು ಬಯಲು ಶೌಚ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದರು ಎಂಬಿತ್ಯಾದಿ ದಾರುಣವಾದ ಅಂಕಿಅಂಶಗಳು ನಮ್ಮ ಮುಂದಿದ್ದವು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೇರಿದ ಕೂಡಲೇ ಇದನ್ನು ಸವಾಲಾಗಿ ಪರಿಗಣಿಸಿ ಸ್ವಚ್ಚ ಭಾರತ ಅಭಿಯಾನವನ್ನು ಪ್ರಾರಂಭಿಸಿ ಸಮರೋಪಾದಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಯಿತು. ಹೀಗೆ ಶುರುವಾದ ಅಭಿಯಾನವೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ನ್ಯೂಯಾರ್ಕ್‌ ಟೈಮ್ಸ್‌ನಂಥ ಪ್ರತಿಷ್ಠಿತ ಪತ್ರಿಕೆಗಳೇ ಬಯಲು ಶೌಚ ಮುಕ್ತ ಅಭಿಯಾನದ ಯಶಸ್ಸಿನ ಬಗ್ಗೆ ಸಂಪಾದಕೀಯ ಬರೆದಿದೆ. ದೇಶದ ಅಭಿವೃದ್ಧಿಯ ನೆಲೆಯಲ್ಲೂ ಇದೊಂದು ಈಡೇರಲೇಬೇಕಾದ ಕಾರ್ಯವೆನ್ನುವುದೂ ಸ್ಪಷ್ಟ. 

ಕರ್ನಾಟಕವೂ ಈ ಅಭಿಯಾನದಲ್ಲಿ ಸಕ್ರಿಯವಾಗಿ ಕೈಜೋಡಿಸಿದೆ. ಬಯಲು ಶೌಚ ಮುಕ್ತ ರಾಜ್ಯವಾಗುವತ್ತ ರಾಜ್ಯ ದಾಪುಗಾಲು ಇಡುತ್ತಿದೆ. ಇದರಲ್ಲಿ ಶೇ. 90 ಯಶಸ್ಸು ಸಾಧಿಸಲಾಗಿದೆ. ಆದರೂ ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಇನ್ನೂ ನಿರೀಕ್ಷಿತ ಪ್ರಗತಿಯಾಗದಿರುವುದು ಮಾತ್ರ ದುರದೃಷ್ಟಕರ. ರಾಜ್ಯದಲ್ಲಿ ಇನ್ನೂ 10 ಜಿಲ್ಲೆಗಳು, 61 ತಾಲೂಕುಗಳು , 108 ಸ್ಥಳೀಯ ಸಂಸ್ಥೆಗಳು, 1915 ಗ್ರಾಮ ಪಂಚಾಯಿತಿಗಳು ಬಯಲು ಶೌಚ ಮುಕ್ತಗೊಳ್ಳಬೇಕಿವೆ. 2019ಕ್ಕಾಗುವಾಗ ಇಡೀ ದೇಶವನ್ನು ಬಯಲು ಶೌಚ ಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಹೀಗಾಗಿ ಇನ್ನೂ ಬಯಲು ಶೌಚ ಜಾರಿಯಲ್ಲಿರುವ ಭಾಗಗಳಿಗೆ ಸರಕಾರ ತುರ್ತು ಗಮನ ಹರಿಸುವ ಅವಶ್ಯಕತೆಯಿದೆ. ರಾಜ್ಯ ಈ ಅಭಿಯಾನದಲ್ಲಿ ಇಷ್ಟಾದರೂ ಸಾಧನೆ ಮಾಡಲು ಸಾಧ್ಯವಾದದ್ದು ಹಿಂದಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌. ಕೆ. ಪಾಟೀಲ್‌ ಅವರ ಪ್ರಯತ್ನದಿಂದಾಗಿ ಎನ್ನುವುದು ಉಲ್ಲೇಖೀಸಲೇ ಬೇಕಾದ ವಿಚಾರ. 

ಸ್ವಚ್ಚ ಭಾರತ ಮಿಷನ್‌ನಡಿ ಶೌಚಾಲಯ ನಿರ್ಮಾಣದಲ್ಲಿ ಕರ್ನಾಟಕ ಇನ್ನೂ 21ನೇ ಸ್ಥಾನದಲ್ಲಿರುವುದು ಬೇಸರ ವಿಷಯ. ಹಾಗೇ ನೋಡಿದರೆ ಕಳೆದ ಮಾರ್ಚ್‌ಗೆ ರಾಜ್ಯ ಸಂಪೂರ್ಣ ಬಯಲು ಶೌಚ ಮುಕ್ತ ಎಂದು ಘೋಷಿಸಲ್ಪಡಬೇಕಿತ್ತು. ಹೈದರಾಬಾದ್‌ ಕರ್ನಾಟಕದ ಬೀದರ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಪ್ರಗತಿ ಕುಂಠಿತವಾಗಿರುವ ಕಾರಣ ಇದು ಸಾಧ್ಯವಾಗಿಲ್ಲ.ಈ ಭಾಗದ ಜನಪ್ರತಿನಿಧಿಗಳು, ಸ್ಥಳೀಯಾಡಳಿತಗಳು ಇನ್ನಾದರೂ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುವುದು ಅನಿವಾರ್ಯ. ಜನರಲ್ಲಿ ಜಾಗೃತಿ ಮೂಡಿಸುವುದಷ್ಟೇ ಅಲ್ಲ ; ಅಧಿಕಾರಿಗಳು, ಅನುಷ್ಠಾನ ಇಲಾಖೆಯ ಸಿಬಂದಿಯಲ್ಲೂ ಯೋಜನೆಯ ನಿಜವಾದ ಕಾಳಜಿಯನ್ನು ಸರಕಾರ ಅರ್ಥೈಸಬೇಕು. ಅಭಿವೃದ್ಧಿಯ ಹಲವು ಮಾನದಂಡಗಳಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕ ಬಯಲು ಶೌಚ ಮುಕ್ತಗೊಳಿಸುವ ವಿಚಾರದಲ್ಲಿ ಹಿಂದುಳಿಯುವುದು ಒಂದು ಕಪ್ಪುಚುಕ್ಕೆಯಾಗಿ ಉಳಿಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next