ಅಕ್ಕಿಆಲೂರು: ವಿಶ್ವಗುರು ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಇಲ್ಲಿರುವ ಎಲ್ಲ ಜಾತಿ, ಧರ್ಮಗಳ ಸಂದೇಶಗಳು ಜಾತ್ಯತೀತ ತತ್ವದಡಿಯೇ ಮುನ್ನಡೆದಿವೆ ಎಂದು ಸೋಂದಾ ಜೈನ ದಿಗಂಬರ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಶ್ರೀಗಳು ಹೇಳಿದರು.
ಪಟ್ಟಣದ ಮುತ್ತಿನಕಂತಿಮಠ ಗುರುಪೀಠ ದಲ್ಲಿ ಲಿಂ.ವೀರರಾಜೇಂದ್ರ ಶಿವಾಚಾರ್ಯ ಶ್ರೀಗಳ 29ನೇ ಪುಣ್ಯಸ್ಮರಣೋತ್ಸವ ಹಾಗೂ ನೂತನ ಶಿಲಾಮಠದ ಹೊಸ್ತಿಲು ಪೂಜಾ ಸಮಾರಂಭದ ಪ್ರಯುಕ್ತ ನಡೆದ ಸರ್ವಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಗತ್ತಿಗೆ ನಾವೆಲ್ಲರೂ ಅತಿಥಿಗಳು ಮಾತ್ರ. ಇಲ್ಲಿ ನಾನು-ನನ್ನದು ಎಂಬ ಭಾವನೆ ಸಲ್ಲದು. ಮಾನವ ಜನ್ಮ ಅತೀ ಶ್ರೇಷ್ಠವಾಗಿದ್ದು, ಪರಿಪೂರ್ಣ ಮಾನವರಾಗುವತ್ತ ನಮ್ಮೆಲ್ಲರ ಚಿತ್ತ ನೆಟ್ಟಿರಬೇಕು ಎಂದರು. ಹುಬ್ಬಳ್ಳಿಯ ಸೈಯದ್ ತಾಜುದ್ದೀನ್ ಪೀರಾ ಖಾದ್ರಿ ಮಾತನಾಡಿ, ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದೆ. ಎಲ್ಲ ಮಾನವರನ್ನು ಏಕತಾ ಭಾವನೆಯಿಂದ ಪ್ರೀತಿಸಬೇಕು.
ನಿರ್ಗತಿಕರಿಗೆ, ಬಡವರಿಗೆ ನೆರವು ನೀಡುವ ಮನಸ್ಥಿತಿಯನ್ನು ನಾವೆಲ್ಲರೂ ರೂಢಿಸಿಕೊಂಡಾಗ ನಿಜವಾದ ಧರ್ಮದ ಪರಿಪಾಲನೆಯಾಗುತ್ತದೆ. ಮಕ್ಕಳನ್ನು ಶಕ್ಷಣಿಕವಾಗಿ, ಧಾರ್ಮಿಕವಾಗಿ ಉತ್ತಮ ಸಂಸ್ಕಾರದಿಂದ ಬೆಳೆಸಬೇಕು. ಬಣ್ಣಗಳು ಹಲವಾರು ಇದ್ದರೂ, ಎಲ್ಲ ಬಣ್ಣಗಳು ಸೇರಿದಾಗಲೇ ನಮ್ಮ ಭವ್ಯಭಾರತದ ಧ್ವಜ ನಿರ್ಮಾಣವಾಗುತ್ತದೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ನಾವೆಲ್ಲರೂ ಬದುಕಿನಲ್ಲಿ ಅರಿವು ಎಂಬ ಪುಸ್ತಕದ ಹಾಳೆಗಳಿದ್ದಂತೆ. ಪ್ರತಿಯೊಬ್ಬರಲ್ಲಿ ವಿಶಿಷ್ಟ ಕಲೆ ಅಡಗಿರುತ್ತದೆ. ಸಮುದಾಯದಲ್ಲಿ ನಾವು ನಡೆದುಕೊಳ್ಳುವ ರೀತಿ ಮತ್ತು ಸಮಾಜಕ್ಕೆ ನಾವು ನೀಡುವ ಕೊಡುಗೆಯಲ್ಲಿ ಒಳ್ಳೆಯತನವಿದ್ದಾಗ ಮಾತ್ರ ಜಗತ್ತು ನಮಗೆ ಸುಂದರವಾಗಿ ಕಾಣಲು ಸಾಧ್ಯ. ಜ್ಞಾಪಕ ಶಕ್ತಿಯಿಂದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಪ್ರೋತ್ಸಾಹಿಸಿದೇ, ವಿಷಯವನ್ನು ಸಂಪೂರ್ಣ ವಾಗಿ ಅರ್ಥೈಸಿಕೊಳ್ಳುವ ಅಂತಃಶಕ್ತಿ ಅವರಲ್ಲಿ ಮೂಡಿಸಬೇಕಿದೆ.
ಶಾಸಕ ಸಿ.ಎಂ. ಉದಾಸಿಯವರ ಮೂಲಕ ಅಕ್ಕಿಆಲೂರಿನ ವಿರಕ್ತಮಠದ ಜೀರ್ಣೋದ್ಧಾರಕ್ಕೆ 1 ಕೋಟಿ ಮತ್ತು ಮುತ್ತಿನಕಂತಿಮಠದ ಜೀರ್ಣೋದ್ಧಾರಕ್ಕೆ 2 ಕೋಟಿ ರೂ. ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ನೆಗಳೂರಿನ ಹಿರೇಮಠದ ಗುರುಶಾಂತ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಗ್ಲೋಬಲ್ ಸೂಫಿ ´ೋರಮ್ ನ ಅಧ್ಯಕ್ಷ ಯಾಸೀರ ಅರಾಫತ್ ಮಕಾನದಾರ ಮಾತನಾಡಿದರು. ನಂತರ ಕೋರೊನಾ ವಾರಿಯರ್ಸ್‌ಗಳಾದ ಪಟ್ಟಣದ ವೈದ್ಯರನ್ನು ಸನ್ಮಾನಿಸಲಾಯಿತು. ದೂರದರ್ಶನ ಮತ್ತು ಆಕಾಶವಾಣಿ ಕಲಾವಿದೆ ಪ್ರಭಾ ಇನಾಂದಾರ ತಂಡದಿಂದ ಸಂಗೀತ ಸೇವೆ ನೆರವೇರಿತು. ಈ ಸಂದರ್ಭದಲ್ಲಿ ನ್ಯಾಯವಾದಿ ಎಸ್.ಆರ್.ಪಾಟೀಲ, ರಾಜಣ್ಣ ಗೌಳಿ, ಗೌಳಿ ಸಮಾಜದ ರಾಜ್ಯಾಧ್ಯಕ್ಷ ಕುಮಾರ ಗೌಳಿ, ಮೌಲಾನಾ ಅಮೀರ ಅಜಮ್, ಉದಯಕುಮಾರ ವಿರುಪಣ್ಣನವರ ಸೇರಿದಂತೆ ಪ್ರಮುಖರು ಹಾಜರಿದ್ದರು.