ಧಾರವಾಡ: ಭಾರತ ಬಡ ರಾಷ್ಟ್ರ ಎಂದು ಮಾಧ್ಯಮ ಹಾಗೂ ಪಠ್ಯಗಳಲ್ಲಿ ಬಿಂಬಿಸುತ್ತಿರುವುದು ಸುಳ್ಳು. ಭಾರತ ವಿಶ್ವದಲ್ಲಿಯೇ ಶ್ರೀಮಂತ ದೇಶ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಜೈಪುರದ ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ| ಉದಯ ಯರಗಟ್ಟಿ ಹೇಳಿದರು.
ವಿಶ್ವಕ್ಕೆ ಸೊನ್ನೆಯ ಕೊಡುಗೆ ನೀಡಿದ್ದು ಭಾರತ. ಮಹಾಭಾರತದಲ್ಲಿ ಕೌರವರು 101 ಅಂತ ಹೇಳಲು ಸಾಧ್ಯವಾಗಿದ್ದು ಈ ಸೊನ್ನೆಯಿಂದ. ರೈಟ್ ಸಹೋದರರು ವಿಮಾನ ಸಂಶೋಧನೆ ಮಾಡುವ ಮೊದಲೇ ಪುಷ್ಪಕ ವಿಮಾನಗಳ ಪರಿಕಲ್ಪನೆ ನಮ್ಮಲ್ಲಿ ಇದೆ. ಸೂರ್ಯನ ಸನ್ನಿಹಿತಕ್ಕೆ ತೆರಳಿ ಅದರ ಶಬ್ದ ಗ್ರಹಿಸಲು ಸಫಲರಾಗಿರುವ ನಾಸಾ, ಸೂರ್ಯನಿಂದ ಕೇಳಿ ಬಂದ ಓಂಕಾರ ಶಬ್ದ ಕಂಡು ಚಕಿತಕ್ಕೆ ಒಳಗಾಗಿದ್ದಾರೆ. ಭಾರತದ ಸಂಸ್ಕೃತಿಯಲ್ಲಿ ಓಂಕಾರ ಇದ್ದು, ಸಾವಿರಾರು ವರ್ಷಗಳ ಹಿಂದೆಯೇ ಓಂಕಾರ ಪ್ರಚಲಿತಗೊಂಡಿದೆ. ಇಂತಹ ಸಾಕಷ್ಟು ಸಾಧನೆಯ ಭಾರತವನ್ನು ಈಗಲೂ ಹಿಂದುಳಿದ ದೇಶ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದರು.
ದೇಶಕ್ಕೆ ತಾಂತ್ರಿಕತೆ ಕೊಡುಗೆ ನೀಡಿ: ಪ್ರಸ್ತುತ ಭಾರತಕ್ಕೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಅತ್ಯವಶ್ಯ. ಜ್ಞಾನ ಯುಗವಾದ 21ನೇ ಶತಮಾನದಲ್ಲಿ ಎಂಜಿಯರಿಂಗ್ ವೃತ್ತಿಪರರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ತಮ್ಮ ವೃತ್ತಿ ಜೀವನ ಸಾಗಿಸಬೇಕು. ದೇಶ ಎದುರಿಸುತ್ತಿರುವ ಸವಾಲುಗಳಾದ ನೀರು, ಪರಿಸರ ಸ್ವಚ್ಛತೆ, ವಿದ್ಯುತ್ ಕೊರತೆ ಸೇರಿದಂತೆ ಇತರ ಸವಾಲುಗಳ ಬಗ್ಗೆಯೂ ಗಮನಿಸುವ ಮೂಲಕ ಸಮಾಜಕ್ಕೆ ಬೆಂಬಲ ನೀಡಬೇಕು. ಹೊಸ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಾ| ಯರಗಟ್ಟಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿವಿ ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ಜೀವನದಲ್ಲಿ ಛಲ ಹೊಂದಿದ್ದರೆ ಎಲ್ಲ ಸಾಧನೆ ಮಾಡಲು ಸಾಧ್ಯ. ಇಂದಿನ ದಿನಗಳಲ್ಲಿ ತಾಂತ್ರಿಕತೆ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳೂ ಸಾಗಬೇಕು. ಇದರ ಜೊತೆಯಲ್ಲಿ ಸಮರ್ಥ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
Advertisement
ನಗರದ ಎಸ್‌ಡಿಎಂ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 9ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಯುವ ಎಂಜಿನಿಯರಿಂಗ್ ಪದವೀಧರರು ಸೂಕ್ತವಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.
Related Articles
Advertisement
ಪ್ರಾಂಶುಪಾಲರಾದ ಡಾ| ಎಸ್.ಬಿ. ವಣಕುದುರೆ ವಾರ್ಷಿಕ ವರದಿಯೊಂದಿಗೆ ಸ್ವಾಗತಿಸಿದರು. ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ ಸೇರಿದಂತೆ ಡೀನ್ ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು. ಸಹನಾ ಪಾಟೀಲ ಪ್ರಾರ್ಥಿಸಿದರು. ಪ್ರೊ| ವಾಸುದೇವ ಪರ್ವತಿ ನಿರೂಪಿಸಿದರು. ಡಾ| ಆರ್.ಎಲ್. ಚಕ್ರಸಾಲಿ ಎಲ್ಲ ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು. ಇಂದಿರಾ ಉಮರ್ಜಿ ಪರಿಚಯಿಸಿದರು. ಡಾ| ಕೆ.ಗೋಪಿನಾಥ ವಂದಿಸಿದರು.
ಬಲಿಷ್ಠ ಮತ್ತು ಸಶಕ್ತ ಭಾರತ ನಿರ್ಮಾಣಕ್ಕೆ ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್ ಕಲಾಂ ಅವರು ಅನೇಕ ಕೊಡುಗೆ ನೀಡಿದ್ದರು. ಅವರ ಹಾದಿಯಲ್ಲಿರುವ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಾಂತ್ರಿಕ ಸಂಶೋಧನೆಗಳು ಇನ್ನಷ್ಟು ಬೆಂಬಲಕ್ಕೆ ನಿಲ್ಲಬೇಕಿದೆ. ಅಂದಾಗ ನಾವೆಲ್ಲ ಒಂದು ತಾಂತ್ರಿಕ ಉನ್ನತಿ ಪಡೆದ ದೇಶದಲ್ಲಿ ವಾಸಿಸುವ ಪ್ರಜೆಗಳಾಗಲು ಸಾಧ್ಯ. • ಡಾ| ಉದಯ ಯರಗಟ್ಟಿ, ನಿರ್ದೇಶಕರು, ಐಐಟಿ, ಜೈಪುರ