Advertisement

ಭಾರತ ಶ್ರೀಮಂತಿಕೆಯ ಕಲೆ, ಸಂಸ್ಕೃತಿಯ ಪರಂಪರೆ

09:39 PM Jun 29, 2019 | Lakshmi GovindaRaj |

ಬಾಗೇಪಲ್ಲಿ: ಭಾರತ ಶ್ರೀಮಂತಿಕೆಯ ಕಲೆ ಮತ್ತು ಸಂಸ್ಕೃತಿಯ ಪರಂಪರೆ ಹೊಂದಿದೆ. ಜಗತ್ತಿಗೆ ತಮ್ಮ ಕಲೆಯನ್ನು ಪರಿಚಯಿಸುವುದರ ಮುಖಾಂತರ ಮಾದರಿಯಾಗಿದೆ ಎಂದು ಸಂಶೋಧಕ ಬಿ.ಆರ್‌.ಕೃಷ್ಣ ತಿಳಿಸಿದರು.

Advertisement

ಬೆಂಗಳೂರು ಬಿಎಂಎಸ್‌ ಕಾಲೇಜಿನ ಆರ್ಕಿಟೆಕ್‌ ವಿಭಾಗದ ವಿದ್ಯಾರ್ಥಿಗಳಿಗೆ ಗುಮ್ಮನಾಯಕನಪಾಳ್ಯದಲ್ಲಿ ಗುಮ್ಮನಾಯಕನಪಾಳ್ಯದ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿಸುತ್ತಾ, ಕಲೆ ಮತ್ತು ಸಂಸ್ಕೃತಿಗೆ ಈ ಪಾಳೇಗಾರರು ಅಪೂರ್ವ ಕೊಡುಗೆ ನೀಡಿದ್ದಾರೆ. ಈ ಸಂಸ್ಥಾನ ಕ್ರಿ.ಶ.1243 ರಲ್ಲಿ ಸ್ಥಾಪನೆಯಾಗಿ 1803 ರವರೆಗೆ 560 ವರ್ಷಗಳ ಕಾಲ ಆಳಿದವರು.

ತಾಲೂಕಿನಲ್ಲಿ ಅನೇಕ ಕೆರೆ, ಕುಂಟೆ, ಕಾಲುವೆಗಳನ್ನು ನಿರ್ಮಿಸಿ ಜನರ ಬದುಕಿಗೆ ಆಸರೆಯಾಗಿ ನಿಂತಿದ್ದಾರೆ. ಸಂಸ್ಥಾನದಲ್ಲಿ 108 ದೇಗುಲಗಳನ್ನು ನಿರ್ಮಿಸಿದ್ದಾರೆ ಎನ್ನಲಾಗಿದ್ದು, ಇಂದು ಅನೇಕ ದೇಗುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ ಎಂದರು.

ಕಲಾ ಫ್ರೌಢಿಮೆ:  ದೇವಾಲಯಗಳನ್ನು ಪರಿಶೀಲಿಸಿದ್ದೆ ಆದಲ್ಲಿ ಕಲಾ ಫ್ರೌಡಿಮೆಯನ್ನು ನಾವು ಕಾಣಬಹುದು. ಬೇಲೂರು ಹಳೆಬೀಡುವಿನಲ್ಲಿ ಬಳಪದ ಕಲ್ಲಿನಲ್ಲಿ ಕಲಾವಂತಿಕೆಯನ್ನು ಮೆರೆದಿದ್ದಾರೆ. ಆದರೆ ವಿಜಯನಗರದ ಅರಸರ ಲೇಪಾಕ್ಷಿ, ಹಂಪಿ ಹಾಗೂ ಗುಮ್ಮನಾಯಕಪಾಳ್ಯದಲ್ಲಿ ಕಠಿಣ ಶಿಲೆಯಲ್ಲಿಯೇ ತಮ್ಮ ಕಲಾ ವೈಭವವನ್ನು ಸಾರಿದ್ದಾರೆ ಎಂದರು.

ವಿವರಣೆ: ದೇವಾಲಯದ ಕಂಬಗಳಲ್ಲಿ ಭೋದಿಗೆ, ಕಂಠ, ಮುಚ್ಚಳ, ಕೊಡ, ಎಡಕಟ್ಟು, ಮಾಲಾಲಾಂಕರ, ಶಲಾಕ, ಪಿಂಡಿ ಇತ್ಯಾದಿ ಭಾಗಗಳನ್ನು ತಿಳಿಸಿದ ಅವರು, ದೇವಾಲಯದ ಗೋಪುರದಲ್ಲಿ ಅಧಿಷ್ಠಾನ, ಕೂಷ್ಠಕಂಬ, ಉಬ್ಬುಕಂಬ, ಭಿತ್ತಿ, ಕಪೋತ, ಕರ್ಣಕೂಟ, ವೇದಿ, ವಾಹನ, ಗ್ರೀವ, ಗ್ರೀವದೇವತೆ, ಮಹನಾಸಿ, ಸ್ತೂಪಿ, ಮಹಾಪದ್ಮ, ಕಲಶ ಇತ್ಯಾದಿ ಮುಖ್ಯ ಭಾಗಗಳನ್ನು ತಿಳಿಸಿದರು. ದೇವಾಲಯದಲ್ಲಿ ಗರ್ಭಗುಡಿ, ಅಂತರಾಳ ಅಥವಾ ಸುಖನಾಸಿ, ನವರಂಗ ಇತ್ಯಾದಿ ಭಾಗಗಳ ಬಗ್ಗೆ ಪರಿಚಯಿಸಿದರು.

Advertisement

ವಿದ್ಯಾರ್ಥಿಗಳು ತೋಳ್ಳಪಲ್ಲಿ ಮತ್ತು ಗುಮ್ಮನಾಯಕಪಾಳ್ಯದ ಗ್ರಾಮಸ್ಥರನ್ನು ಸಂದರ್ಶನ ನಡೆಸಿ, ಜನಜೀವನ, ಆರ್ಥಿಕಸ್ಥಿತಿ, ಸಾಮಾಜಿಕ ಸ್ಥಿತಿ, ಶೈಕ್ಷಣಿಕ ಅಭಿವೃದ್ಧಿ, ಸಂಪ್ರದಾಯ, ಕಟ್ಟುಪಾಡುಗಳು, ಆಚಾರ, ವಿಚಾರಗಳು, ಲೋಕರೂಢಿಗಳು, ನೈತಿಕ ನಿಯಮಗಳು, ಕೃಷಿ, ನೀರಾವರಿ, ವಾಣಿಜ್ಯ, ಸಾರಿಗೆ, ಕುಡಿಯುವ ನೀರು, ರಸ್ತೆ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಜನಸಂಖ್ಯೆ, ಸರ್ವೆ ಮಾಹಿತಿ: ತೋಳ್ಳಪಲ್ಲಿ ಗ್ರಾಪಂ ಕಚೇರಿಗೆ ಭೇಟಿ ನೀಡಿ ಗುಮ್ಮನಾಯಕಪಾಳ್ಯದ ಜನಸಂಖ್ಯೆ, ಜಾತಿವಾರು ಸಂಖ್ಯೆ ಇತ್ಯಾದಿ ಅನೇಕ ವಿಷಯಗಳನ್ನು ಕ್ರೋಢಿಕರಿಸಿದರು. ಪಾತಪಾಳ್ಯ ಗ್ರಾಮಲೆಕ್ಕಾಧಿಕಾರಿ ಅವರನ್ನು ದೂರವಾಣಿ ಮೂಲಕ ಸಂದರ್ಶಿಸಿ ಗುಮ್ಮನಾಯಕನಪಾಳ್ಯದ ಸರಹದ್ದು, ಸರ್ವೆ ನಂ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು .

ವಿದ್ಯಾರ್ಥಿಗಳಾದ ಅನುಷಾ, ಐಶ್ವರ್ಯ, ದಿಶಾ, ಅಪೂ, ಅರ್ಪಿತ , ಅಧಿತಿ, ಅಮಾನ್‌, ಅನಗಾ, ಭೂಮಿಕ, ತ್ರಿಶಾ, ಅಮೃತ, ದೀಪಿಕಾ, ಮೇಘನಾ, ಮಾನ್ಯ, ಅನುಘ್ನಾ ಹಾಗೂ ತ್ರಿಶಾ ಅವರು ಭಾಗವಹಿಸಿದ್ದರು. ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಸಹಕರಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next