ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ಪರ ಮಾತನಾಡಿ, ಎಫ್ಎಟಿಎಫ್ ವಿಚಾರದಲ್ಲೂ ಪಾಕಿಸ್ಥಾನವನ್ನು ಕಪ್ಪುಪಟ್ಟಿಯ ಕುಣಿಕೆಯಿಂದ ಬಚಾವ್ ಮಾಡುವ ಉದ್ಧಟತನ ತೋರಿದ್ದ ಟರ್ಕಿ ದೇಶಕ್ಕೀಗ ಭಾರತ ಬಿಸಿ ಮುಟ್ಟಿಸುವ ಕೆಲಸ ಆರಂಭಿಸಿದೆ. ಈ ತಿಂಗಳಾಂತ್ಯಕ್ಕೆ ಆಯೋಜನೆಯಾಗಿದ್ದ ಪ್ರಧಾನಿ ಮೋದಿಯವರ ಎರಡು ದಿನದ ಟರ್ಕಿ ಭೇಟಿಯನ್ನು ಭಾರತ ಸರಕಾರ ರದ್ದುಗೊಳಿಸಿದೆ.
ಮೊದಲಿನಿಂದಲೂ ಟರ್ಕಿ-ಭಾರತ ಸಂಬಂಧ ಅಷ್ಟೇನೂ ಹೇಳಿಕೊಳ್ಳುವಂತೆ ಇರಲಿಲ್ಲವಾದರೂ, ಕೆಲ ಸಮಯದಿಂದ ತೀರಾ ಹದಗೆಟ್ಟಿರುವುದಂತೂ ಸತ್ಯ. ಈ ಹದಗೆಟ್ಟ ಸಂಬಂಧಕ್ಕೆ ಟರ್ಕಿಯೇ ಸಂಪೂರ್ಣ ಜವಾಬ್ದಾರ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಭಾರತದ ನಿರ್ಧಾರವನ್ನು ಟರ್ಕಿ ಅಧ್ಯಕ್ಷ ಎಡೋìಗನ್ ಟೀಕಿಸಿದ್ದರು. ಅಲ್ಲದೇ ಭಾರತದಿಂದ ವ್ಯಾಪಕ ಮಾನವ ಹಕ್ಕು ಉಲ್ಲಂಘನೆ ನಡೆಯುತ್ತಿದೆ ಎನ್ನುವ ಪಾಕಿಸ್ಥಾನದ ಹುಸಿ ಆರೋಪವನ್ನು ಬೆಂಬಲಿಸಿದ್ದರು. ಅನಂತರ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲೂ ಅವರು ಇದೇ ಧಾಟಿಯಲ್ಲೇ ಮಾತನಾಡಿದ್ದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು.
ಆ.27-28ರಂದು ಟರ್ಕಿಯ ಅಂಕಾರದಲ್ಲಿ ಭಾರತ ಮತ್ತು ಟರ್ಕಿ ನಡುವೆ ಹೂಡಿಕೆ ಸಭೆ ನಡೆಯಬೇಕಿತ್ತು. ಇನ್ನೊಂದೆಡೆ, ಈ ಭೇಟಿ ಅಂತಿಮವೇ ಆಗಿಲ್ಲ. ಹೀಗಾಗಿ ಇದನ್ನು ರದ್ದು ಮಾಡುವ ಮಾತೇ ಇಲ್ಲ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ. ಆದರೆ ಈ ಭೇಟಿಯ ಹಿನ್ನೆಲೆಯಲ್ಲಿ ಟರ್ಕಿ ಈಗಾಗಲೇ ಸಿದ್ಧತೆ ಕೂಡ ನಡೆಸಿತ್ತು ಎನ್ನುವುದು ಸತ್ಯ. ಪ್ಯಾರಿಸ್‌ನಲ್ಲಿ ನಡೆದ ಹಣಕಾಸು ಕ್ರಿಯಾಪಡೆಯ(ಎಫ್ಎಟಿಎಫ್ ) ಸಭೆಯಲ್ಲಿ ಪಾಕಿಸ್ಥಾನವು ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿತ್ತು. ಆದರೆ ಅದನ್ನು ಚೀನಾ, ಮಲೇಷ್ಯಾ ಮತ್ತು ಟರ್ಕಿ ಬಚಾವು ಮಾಡಿದವು. ಈ ವಿಚಾರದಲ್ಲಿ ಮಲೇಷ್ಯಾದ ನಡೆಯೂ ಭಾರತದ ಅಸಮಾಧಾನಕ್ಕೆ ಕಾರಣವಾಗಿದ್ದು, ಮಲೇಷ್ಯಾಕ್ಕೆ ಈಗಾಗಲೇ ಭಾರತ ಬಿಸಿ ಮುಟ್ಟಿಸಲಾರಂಭಿಸಿದೆ.
ಭಾರತವು ಮಲೇಷ್ಯಾದ ಅತಿದೊಡ್ಡ ಪಾಮ್ ಆಯಿಲ್ ಖರೀದಿದಾರ ದೇಶವಾಗಿದ್ದು, ಈಗ ಭಾರತ ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ, ಮಲೇಷ್ಯಾ ಸರ್ಕಾರ ಈ ವಿಚಾರದಲ್ಲಿ ಬೆಚ್ಚಿಬಿದ್ದಿರುವುದಂತೂ ಸುಳ್ಳಲ್ಲ. ಭಾರತದೊಂದಿಗಿನ ವ್ಯಾಪಾರ “ಜಟಿಲತೆ’ಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಮಹಾತೀರ್ ಮೊಹಮ್ಮದ್ ಸರ್ಕಾರ ಹೇಳುತ್ತಿದೆ.
ಇನ್ನು ಟರ್ಕಿಯ ರಕ್ಷಣಾ ಕಂಪನಿ ಅನೌಡೋಲು ಶಿಪ್‌ಯಾರ್ಡ್‌ಗೂ ಈಗಾಗಲೇ ಭಾರತ ಪೆಟ್ಟುಕೊಟ್ಟಿದೆ. ಈ ಕಂಪನಿ ಭಾರತೀಯ ನೌಕಾದಳಕ್ಕೆ ಸಪೋರ್ಟ್ ದೋಣಿಗಳನ್ನು ನಿರ್ಮಿಸುತ್ತಿತ್ತು. ಈಗ ಇದನ್ನು ಭಾರತದ ರಕ್ಷಣಾ ಮಾರುಕಟ್ಟೆಯಿಂದ ಹೊರಗಿಡಲಾಗಿದೆ. ಬೇಸರದ ಸಂಗತಿಯೆಂದರೆ, ಇವೆರಡೂ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಣೆಗಾಗಿ ವರ್ಷಗಳಿಂದ ಭಾರತವೇ ಹೆಚ್ಚು ಪ್ರಯತ್ನಿಸುತ್ತಾ ಬಂದಿದೆ ಎನ್ನುವುದು. ಆದರೆ ಚೀನಾ ಮತ್ತು ಪಾಕಿಸ್ಥಾನದ ತಾಳಕ್ಕೋ ಅಥವಾ ಒತ್ತಡಕ್ಕೋ ತಕ್ಕಂತೆ ಕುಣಿಯುತ್ತಾ ಮಲೇಷ್ಯಾ ಮತ್ತು ಟರ್ಕಿ ಭಾರತಕ್ಕೆ ಪರೋಕ್ಷವಾಗಿ ತೊಂದರೆ ಒಡ್ಡಲಾರಂಭಿಸಿವೆ. ಈಗಲೂ ಇವೆರಡೂ ರಾಷ್ಟ್ರಗಳಿಗೆ ಭಾರತ ಪ್ರಮುಖ ವ್ಯಾಪಾರ ರಾಷ್ಟ್ರವಾಗಿದ್ದು, ಭಾರತದ ಈಗಿನ ನಡೆ ನಿಸ್ಸಂಶಯವಾಗಿಯೂ ಅವುಗಳಿಗೆ ಲುಕ್ಸಾನು ಮಾಡಲಿದೆ.