Advertisement

ಭಾರತ –ಇಂಡೋನೇಶ್ಯಾ ಸಂಬಂಧ ವೃದ್ಧಿ: ಸಿರಿಂಗೋರಿಂಗೋ

12:23 PM Mar 25, 2017 | Team Udayavani |

ಮಂಗಳೂರು: ಹಲವುವರ್ಷಗಳಿಂದ ಭಾರತ ಹಾಗೂ ಇಂಡೋನೇಶ್ಯಾ ಸಂಬಂಧ ಅತ್ಯುತ್ತಮವಾಗಿದ್ದು, ಭಾರತದ ಅನೇಕ ಹೂಡಿಕೆದಾರರು ಇಂಡೋನೇಶ್ಯಾದಲ್ಲಿ ಹೂಡಿಕೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಟ್ರೇಡ್‌ ಎಕ್ಸ್‌ಪೋ ಇಂಡೋನೇಶ್ಯಾ ಆಯೋಜಿಸುತ್ತಿದ್ದು, ಇದರಲ್ಲಿ ಹೂಡಿಕೆದಾರರಿಗೆ ಇನ್ನಷ್ಟು ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಮುಂಬಯಿಯಲ್ಲಿರುವ ಇಂಡೋನೇಶ್ಯಾದ ರಾಜತಾಂತ್ರಿಕ ಪ್ರತಿನಿಧಿ ಸಾಟ್‌ ಸಿರಿಂಗೋರಿಂಗೋ ಹೇಳಿದರು.

Advertisement

ನಗರದ ಕೆನರಾ ಚೇಂಬರ್‌ ಆಫ್ ಕಾಮರ್ಸ್‌ ವತಿಯಿಂದ ಶುಕ್ರವಾರ ಕೆನರಾ ಚೇಂಬರ್‌ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲೆಕ್ಟ್ರಾನಿಕ್‌, ವೆಹಿಕಲ್‌, ಜವುಳಿ, ರಬ್ಬರ್‌, ಆಯಿಲ್‌, ವುಡ್‌ ಮುಂತಾದ ಕ್ಷೇತ್ರಗಳಲ್ಲಿ ಇಂಡೋನೇಶ್ಯಾ ಅಪಾರ ಬೆಳವಣಿಗೆ ಕಂಡಿದ್ದು, ವಿದೇಶಗಳಿಗೆ ತನ್ನ ಉತ್ಪನ್ನ ರಫ್ತು ಮಾಡುತ್ತಿದೆ. ಪ್ರಸ್ತುತ ದೇಶದ ಒಟ್ಟು ಆಂತರಿಕ ಉತ್ಪಾದನೆ ಪ್ರಮಾಣ ಶೇ. 5ಕ್ಕಿಂತ ಹೆಚ್ಚಿದೆ. ಪ್ರವಾಸೋದ್ಯಮ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ದೇಶದ ಆರ್ಥಿಕ ಬೆಳವಣಿಗೆಗೆ ಈ ಕ್ಷೇತ್ರವೂ ದೊಡ್ಡ ಕೊಡುಗೆ ನೀಡಿದೆ ಎಂದು ಅವರು ತಿಳಿಸಿದರು.

ಹೂಡಿಕೆಗೆ ಪ್ರಸಕ್ತ ದೇಶ
ಜನಸಂಖ್ಯೆಯಲ್ಲಿ ಇಂಡೋನೇಶ್ಯಾ ಏಷ್ಯಾದಲ್ಲಿ ಚೀನ ಮತ್ತು ಭಾರತದ ಬಳಿಕ ಅತಿ ಹೆಚ್ಚು ಹಾಗೂ ವಿಶ್ವದಲ್ಲಿ 5ನೇ ಸ್ಥಾನ ಪಡೆದಿದೆ. ವಿಶ್ವದ ಮುಸ್ಲಿಂ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಇಲ್ಲಿ ಎಲ್ಲ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಅನೇಕ ಹಿಂದೂ ದೇವಾಲಯಗಳು ಇಂದಿಗೂ ವಿಶ್ವವಿಖ್ಯಾತವಾಗಿದ್ದು, ಸಾವಿರಾರು ಭಕ್ತರನ್ನುಆಕರ್ಷಿಸುತ್ತಿವೆ. ವ್ಯಾಪಾರ ವಹಿವಾಟಿನಲ್ಲಿ ಅಮೆರಿಕ, ಚೀನ, ಭಾರತ, ಜರ್ಮನಿ, ಅರಬ್‌ ದೇಶಗಳು ಸೇರಿದಂತೆ ಬಹುತೇಕ ಮುಂದುವರಿದ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಹೂಡಿಕೆಗೆ ಪ್ರಸಕ್ತ ದೇಶವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ವ್ಯಾಪಾರ ವಹಿವಾಟು, ರಾಜಕೀಯ, ಪ್ರವಾಸೋದ್ಯಮ, ಶೈಕ್ಷಣಿಕವಲಯ ಸೇರಿದಂತೆ ಎಲ್ಲ ವಲಯಗಳಲ್ಲಿ ಇಂಡೋನೇಶ್ಯಾ ದೇಶ ಪ್ರಗತಿ ಕಾಣುತ್ತಿದೆ. ದೇಶದಲ್ಲಿ ಸುಸ್ಥಿರ ರಾಜಕೀಯ ಪರಿಸ್ಥಿತಿ ಹಾಗೂ ಸರ್ವಧರ್ಮ ಸಹಬಾಳ್ವೆಯಿಂದ ದೇಶ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.

Advertisement

ಕೆನರಾ ಚೇಂಬರ್‌ ಅಧ್ಯಕ್ಷ ಜೀವನ್‌ ಸಲ್ದಾನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಾತಿಕಾ ಪೈ ಅತಿಥಿಗಳನ್ನು ಪರಿಚಯಿಸಿದರು. ಕೆಸಿಸಿಐ ಕಾರ್ಯದರ್ಶಿಗಳಾದ ಪ್ರವೀಣ್‌ ಕುಮಾರ್‌ ಕಲಾºವಿ, ಪಿ.ಬಿ. ಅಬ್ದುಲ್‌ ಹಮೀದ್‌ ಮೊದಲಾ ದವರು ಉಪಸ್ಥಿತರಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next