ನವದೆಹಲಿ: ಇತ್ತೀಚೆಗೆ ಅಸ್ಸಾಂನ ಸ್ಪೆಷಲ್ ಟಾಸ್ಕ್ ಫೋರ್ಸ್ ನಿಂದ ಬಂಧಿಸಲ್ಪಟ್ಟ ಭಾರತದ ಐಸಿಸ್ ಮುಖ್ಯಸ್ಥ ಹ್ಯಾರಿಸ್ ಫಾರೂಖಿ ಕೋಮು ದಳ್ಳುರಿಯನ್ನು ಹರಡಿಸುವ ಉದ್ದೇಶದಿಂದ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ್ದ ಎಂಬ ಅಂಶ ವಿಚಾರಣೆಯಿಂದ ಬಹಿರಂಗವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Vijayapura; ತಾಯಿಯ ಅನೈತಿಕ ಸಂಬಂಧ ಕಾರಣಕ್ಕೆ ಮಗನಿಂದ ಜೋಡಿ ಕೊಲೆ; ಮೂವರ ಬಂಧನ
ಐಸಿಸ್ ಸಹಚರರಾದ ಜಾರ್ಖಂಡ್ ನ ಶಹನವಾಜ್, ಅಲಿಗಢ್ ಪ್ರೊಫೆಸರ್ ವಾಜಿದುದ್ದೀನ್ ನೆರವಿನೊಂದಿಗೆ ಫಾರೂಖಿ ಉತ್ತರ ಭಾರತದ ರಾಜ್ಯಗಳಲ್ಲಿ ಭಯೋತ್ಪಾದನೆಯ ಕೃತ್ಯಗಳ ಮೂಲಕ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಅಸ್ಸಾಂ ಪೊಲೀಸ್ ಮೂಲಗಳು ತಿಳಿಸಿವೆ.
ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ನಿಟ್ಟಿನಲ್ಲಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಹಿಂದೂ-ಮುಸ್ಲಿಮ್ ಬಾಹುಳ್ಯ ಇರುವ ಜನನಿಬಿಢ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನು ಫಾರೂಖಿ ರೂಪಿಸಿದ್ದ ಎಂದು ಮೂಲಗಳು ಹೇಳಿವೆ.
ಈ ಹಿನ್ನೆಲೆಯಲ್ಲಿ ಫಾರೂಖಿ ಹಲ್ದ್ವಾನಿ ರೈಲು ನಿಲ್ದಾಣದಲ್ಲಿ ಐಇಡಿ ಬಳಸುವ ಮೂಲಕ ಪ್ರಯೋಗ ನಡೆಸಿದ್ದು, ಇದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ಭಯ, ಭೀತಿ ಮೂಡಿಸುವ ಗುರಿ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಅಸ್ಸಾಂನ ಸ್ಪೆಷಲ್ ಟಾಸ್ಕ್ ಫೋರ್ಸ್ ಹ್ಯಾರಿಸ್ ಫಾರೂಖಿ ಮತ್ತು ಆತನ ನಿಕಟವರ್ತಿ ಹ್ಯಾರಿಸ್ ಅಜ್ಮಲ್ ಫಾರೂಖಿಯನ್ನು ಬಂಧಿಸಿತ್ತು. 15 ದಿನಗಳ ಹಿಂದೆ ಗುಪ್ತಚರ ಇಲಾಖೆಯ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಗುವಾಹಟಿ ಐಜಿಪಿ ಮಹಾಂತ್ ಅವರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.