ನವದೆಹಲಿ: ಕೋವಿಡ್ ವೈರಸ್ ರೂಪಾಂತರ ಹೊಂದುತ್ತಿದ್ದು, ಡೆಲ್ಟಾ ಪ್ರಭೇದದ ಬಳಿಕ ಇದೀಗ ಸುಮಾರು 30 ದೇಶಗಳಲ್ಲಿ ಕಳೆದ ನಾಲ್ಕು ವಾರಗಳಲ್ಲಿ “ಲಾಂಬ್ಡಾ” ಎಂಬ ರೂಪಾಂತರಿ ತಳಿ ಹರಡತೊಡಗಿದೆ. ಭಾರತಕ್ಕೆ ತುಸು ನಿರಾಳ ಎಂಬಂತೆ ದೇಶದಲ್ಲಿ ಈವರೆಗೆ ಕೋವಿಡ್ ರೂಪಾಂತರಿ ಲಾಂಬ್ಡಾ ತಳಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:“ಮನೆ ಬಾಗಿಲಿಗೆ ವ್ಯಾಕ್ಸಿನೇಶನ್’ ಬಿಎಂಸಿ ಅಭಿಯಾನಕ್ಕೆ ಹಲವು ಸವಾಲುಗಳು
ಕೋವಿಡ್ ರೂಪಾಂತರಿ ಲಾಂಬ್ಡಾ ಈವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ. ಗರಿಷ್ಠ ಕಂಟೈನ್ ಮೆಂಟ್ ವ್ಯವಸ್ಥೆಯ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿಯ ಮುಖ್ಯಸ್ಥ ಡಾ.ಪ್ರಜ್ಞಾ ಯಾದವ್ ಕೂಡಾ, ಈವರೆಗೆ ಭಾರತದಲ್ಲಿ ಲಾಂಬ್ಡಾ ರೂಪಾಂತರದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಈ ನೂತನ ರೂಪಾಂತರಿ ಲಾಂಬ್ಡಾ ಸೋಂಕು ಶೀಘ್ರವಾಗಿ ಹರಡಬಲ್ಲದು, ಅಲ್ಲದೇ ಈಗಾಗಲೇ 30 ದೇಶಗಳಲ್ಲಿ ಲಾಂಬ್ಡಾ ಪ್ರಕರಣ ಪತ್ತೆಯಾಗಿದೆ ಎಂದು ಯಾದವ್ ಹೇಳಿದರು. 2020ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಪೆರು ದೇಶದಲ್ಲಿ ಲಾಂಬ್ಡಾ ಪ್ರಕರಣ ಪತ್ತೆಯಾಗಿತ್ತು.
ಜಗತ್ತಿನ ವಿವಿಧ ದೇಶಗಳಲ್ಲಿ ಲಾಂಬ್ಡಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗತೊಡಗಿದೆ. ಈಗಾಗಲೇ ಅಮೆರಿಕ, ಬ್ರಿಟನ್, ಜರ್ಮನಿ, ಇಟಲಿ ಸೇರಿದಂತೆ 30 ದೇಶಗಳಲ್ಲಿ ಲಾಂಬ್ಡಾ ರೂಪಾಂತರಿ ಪ್ರಕರಣ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.