Advertisement

ಭಾರತದ್ದು ವಿಶ್ವದಲ್ಲೇ ಅತೀ ದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ: ಚೀನಾ ಬಹುಪರಾಕ್!

03:12 PM Jun 18, 2020 | Hari Prasad |

ಬೀಜಿಂಗ್: ಡೋಕ್ಲಾಂ ಭಾಗದಲ್ಲಿರುವ ಎರಡೂ ದೇಶಗಳ ನೈಜ ನಿಯಂತ್ರಣ ರೇಖೆಯ ಬಳಿ ಕಾಲುಗೆದರಿ ಜಗಳಕ್ಕೆ ಬಂದು ಬಳಿಕ ತಣ್ಣಗಾಗಿದ್ದ ಚೀನಾ ಇದೀಗ ಭಾರತದ ಪರ್ವತ ಸೇನಾ ತುಕಡಿಯನ್ನು ಪ್ರಶಂಸಿಸುವ ಕೆಲಸ ಮಾಡಿದ್ದ ಘಟನೆ ನೆನಪಿಸಿಕೊಳ್ಳಬಹುದಾಗಿದೆ.

Advertisement

ಭಾರತದ ಬಳಿಯಲ್ಲಿ ವಿಶ್ವದಲ್ಲೇ ಅತೀ ದೊಡ್ಡದಾಗಿರುವ ಮತ್ತು ಅನುಭವಿ ಪರ್ವತ ಸೇನಾ ಪಡೆ ಇದೆ ಮತ್ತು ಈ ಸೈನಿಕರು ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಎಂತಹುದೇ ದುರ್ಗಮ ಬೆಟ್ಟ ಗುಡ್ಡಗಳಲ್ಲಿ ಶತ್ರುಪಡೆಯ ವಿರುದ್ಧ ಹೋರಾಡಬಲ್ಲ ಛಾತಿಯನ್ನು ಹೊಂದಿದ್ದಾರೆ ಎಂದು ಚೀನಾದ ಮಿಲಿಟರಿ ತಜ್ಞರೊಬ್ಬರು ಪ್ರಶಂಸಿಸಿರುವುದನ್ನು ಹಿಂದೂಸ್ತಾನ್ ಟೈಮ್ಸ್  ವರದಿ ಮಾಡಿತ್ತು.

ಭಾರತದ ಪರ್ವತ ಸೇನಾ ದಳವನ್ನು ಈ ರೀತಿಯಾಗಿ ಪ್ರಶಂಸಿರುವ ವ್ಯಕ್ತಿ ಸಾಮಾನ್ಯದವರೇನಲ್ಲ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ (PLA) ಯುದ್ಧೋಪಕರಣಗಳನ್ನು ತಯಾರಿಸಿಕೊಡುವ ಬಹುದೊಡ್ಡ ಸಂಸ್ಥೆಯ ಮಿಲಿಟರಿ ತಜ್ಞನಾಗಿರುವ ಹುಯಾಂಗ್ ಗ್ಯೂಝಿ ಎಂಬವರೇ ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದವರಾಗಿದ್ದಾರೆ.

‘ಪ್ರಸ್ತುತ ಸನ್ನಿವೇಶದಲ್ಲಿ ಪರ್ವತ ಶ್ರೇಣಿ ಹಾಗೂ ಕಡಿದಾದ ಬೆಟ್ಟ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಸೇನಾ ಪಡೆ ಅಮೆರಿಕಾ, ರಷ್ಯಾ ಅಥವಾ ಇನ್ಯಾವುದೇ ಯುರೋಪಿಯನ್ ರಾಷ್ಟ್ರಗಳದ್ದಲ್ಲ ಬದಲಾಗಿ ಅದು ನಮ್ಮ ನೆರೆಯ ರಾಷ್ಟ್ರ ಭಾರತದ್ದೇ ಆಗಿದೆ’ ಎಂದು ಗ್ಯೂಝಿ ಈ ಮಿಲಿಟರಿ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.

ಈ ‘ಮಾಡರ್ನ್ ವೆಪನರಿ ಮ್ಯಾಗಝಿನ್’ ಪಿ.ಎಲ್.ಎ.ಗೆ ಯಾಂತ್ರೀಕೃತ, ಡಿಜಿಟಲ್ ತಂತ್ರಜ್ಞಾಯುಕ್ತ ಹಾಗೂ ಬೌದ್ಧಿಕ ಸಾಮರ್ಥ್ಯಭರಿತ ಸಾಧನಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ವೇದಿಕೆಯಾಗಿಯೂ ಇದು ಕೆಲಸ ಮಾಡುತ್ತಿದೆ.

Advertisement

ಹುಯಾಂಗ್ ಗ್ಯೂಝಿ ಅವರ ಲೇಖನವನ್ನು ಚೀನಾದ ದಿ ಪೇಪರ್.ಸಿಎನ್ ನಲ್ಲಿ ಪ್ರಕಟಿಸಲಾಗಿದೆ. ‘ಪರ್ವತಾರೋಹಣ ಎಂಬುದು ಪ್ರತೀಯೊಬ್ಬ ಭಾರತೀಯ ಯೋಧನೂ ತನ್ನಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕಾಗಿರುವ ಒಂದು ಕೌಶಲವಾಗಿದೆ. ಮತ್ತು ಇಷ್ಟು ಮಾತ್ರವಲ್ಲದೇ ಭಾರತೀಯ ಸೇನೆಯು ಅಗಾಧ ಸಂಖ್ಯೆಯಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ಪರ್ವತಾರೋಹಿಗಳನ್ನು ನೇಮಿಸಿಕೊಂಡಿದೆ’ ಎಂದೂ ಹುಯಾಂಗ್ ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಭಾರತದ ಸೇನೆಯಲ್ಲಿ 2 ಲಕ್ಷ ಪರ್ವತಾರೋಹಿ ಸೈನಿಕರಿದ್ದು ಇವರೆಲ್ಲಾ 12 ಪಡೆಗಳಲ್ಲಿ ನಿಯುಕ್ತಿಗೊಂಡಿದ್ದಾರೆ. ಈ ಕಾರಣದಿಂದಾಗಿಯೇ ಭಾರತದ ಬಳಿ ಇರುವುದು ವಿಶ್ವದಲ್ಲೇ ಅತೀ ದೊಡ್ಡ ಹಾಗೂ ಪ್ರಬಲ ಪರ್ವತಾರೋಹಿ ಯೋಧರ ಪಡೆ ಎಂಬುದಾಗಿ ಚೀನಾ ಮಿಲಿಟರಿ ತಜ್ಞ ಹುಯಾಂಗ್ ಗ್ಯೂಝಿ ಅವರ ಅಭಿಮತವಾಗಿದೆ.

ಇವಿಷ್ಟಲ್ಲದೇ ಸದ್ಯಕ್ಕೆ ಭಾರತೀಯ ಸೇನೆಯು ಶಸ್ತ್ರಾಸ್ತ್ರಗಳ ವಿಷಯದಲ್ಲೂ ಬಲಿಷ್ಠವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಬಳಿ ಸದ್ಯಕ್ಕೆ ಅಮೆರಿಕಾ ನಿರ್ಮಿತ ಎಂ777, ವಿಶ್ವದ ಅತೀ ಹಗುರ 155 ಮಿಮಿಗಳ ಹೌಟ್ಜಿರ್ ಇನ್ನು ದುರ್ಗಮ ಪ್ರದೇಶಗಳನ್ನೂ ತಲುಪಬಲ್ಲ ಶಕ್ತಿಶಾಲಿ ಚಿನೂಕ್ ಹೆಲಿಕಾಪ್ಟರ್ ಗಳು ಇವೆ ಎಂಬುದನ್ನು ಅವರು ವಿಶೇಷವಾಗಿ ಬೊಟ್ಟು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next