Advertisement

ಭಾರತ ಬದಲಾಗಿದೆ, ಭೂಪಟವೂ ಬದಲಾಗಲಿದೆ: ಡಾ|ತೇಜಸ್ವಿನಿ ಗೌಡ

09:07 PM Sep 29, 2019 | Team Udayavani |

ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾಗಿದೆ. ಭಾರತದ ಭೂಪಟವೂ ಬದಲಾಗಲಿದೆ. ಈ ಹಿಂದೆ ಮತಬ್ಯಾಂಕಿನ ತುಷ್ಟೀಕರಣಕ್ಕಾಗಿ ಭಾರತದ ಭೂಭಾಗಗಳನ್ನು ಮನಬಂದಂತೆ ಹಂಚಿದಂತೆ ಇನ್ನು ಮುಂದೆ ನಡೆಯುವುದಿಲ್ಲ. ನಮ್ಮ ದೇಶದ ಭೂಭಾಗಗಳು ನಮ್ಮ ಕೈಯಲ್ಲೇ ಇರಲಿವೆ ಎಂದು ವಿಧಾನ ಪರಿಷತ್‌ ಸದಸ್ಯೆ ಡಾ| ತೇಜಸ್ವಿನಿ ಗೌಡ ಹೇಳಿದರು.

Advertisement

ರವಿವಾರ ಇಲ್ಲಿನ ಹರಿಪ್ರಸಾದ್‌ ಹೋಟೆಲ್‌ನ ಅತಿಥಿ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಒಂದು ದೇಶ ಒಂದು ಸಂವಿಧಾನ; 370 ವಿಧಿ ರದ್ದತಿ ಕುರಿತು ಜಾಗೃತಿ ಅಭಿಯಾನದಲ್ಲಿ ಉಪನ್ಯಾಸ ನೀಡಿದರು.

ಭಾರತದ ಭಾಗಗಳನ್ನು ಚೀನಾ ಹಾಗೂ ಪಾಕ್‌ ಆಕ್ರಮಿಸಿಕೊಂಡಿವೆ. ನಮ್ಮ ಸೈನಿಕರ ಮೇಲೆ ನಮ್ಮವರೇ ಆಕ್ರಮಣ ಮಾಡುವಂತೆ ಪ್ರಚೋದಿಸುವಾಗ ಕೈಕಟ್ಟಿ ಕೂರುವುದು ಸಾಧ್ಯವೇ ಇಲ್ಲ. ಪಾಕ್‌ ನಮಗೆ ಸಮ ಅಲ್ಲ. ನಮಗೆ ಸವಾಲು ಚೀನಾ. ಆದ್ದರಿಂದ ರಾಜತಾಂತ್ರಿಕವಾಗಿ ಹೆಜ್ಜೆ ಇಡುವಾಗ ಪ್ರಪಂಚದ ಇತರ ರಾಷ್ಟ್ರಗಳ ಕಡೆಗೂ ಎಚ್ಚರಿಕೆ ಇರಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಮೋದಿಯವರು ಹತ್ತಾರು ದೇಶ ಸುತ್ತಿದರು. ಇದರ ಫ‌ಲವಾಗಿ 54 ಇಸ್ಲಾಂ ರಾಷ್ಟ್ರಗಳು ನಮ್ಮ ಯೋಧ ಅಭಿನಂದನ್‌ ಸೆರೆ ಸಂದರ್ಭವೂ ಸೇರಿದಂತೆ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಲು ಬೆಂಬಲ ನೀಡಿದವು. ನಮ್ಮ ತಾಳ್ಮೆಗೂ ಮಿತಿ ಇದೆ. ಕಣ್ಣೆದುರೇ ಇದ್ದರೂ ನಮ್ಮಲ್ಲಿ ಸಾಕಷ್ಟು ವ್ಯವಸ್ಥೆ ಇದ್ದರೂ ದಾಳಿ ಮಾಡಿದ ಶತ್ರು ದೇಶದವರನ್ನು ಕೊಲ್ಲು ಎನ್ನದ ಸರಕಾರ ನಮಗೆ ಬೇಕಾಗಿಲ್ಲ. ಆದ್ದರಿಂದ ಜನತೆ ನೀಡಿದ ಬಹುಮತವನ್ನು ಮೋದಿ ಸರಕಾರ ಜಾಣ್ಮೆಯಿಂದ ಬಳಸಿಕೊಂಡು ಚುನಾವಣಾ ಪ್ರಣಾಳಿಕೆಯನ್ನು ಈಡೇರಿಸಿದೆ ಎಂದರು.

ನಮ್ಮ ದೇಶದ ಜನರಿಗೇ ಜಮ್ಮುವಿನಲ್ಲಿ ಏನು ನಡೆಯುತ್ತದೆ, ಕಾಶ್ಮೀರದಲ್ಲಿ ವಾತಾವರಣ ಹೇಗೆ ಇದೆ ಎಂದು ಗೊತ್ತಿಲ್ಲ. 50 ಸಾವಿರ ದೇಗುಲಗಳನ್ನು ಜಮ್ಮು ಕಾಶ್ಮೀರದಲ್ಲಿ ಪುನಶ್ಚೇತನ ಮಾಡಲು ನಿರ್ಧರಿಸಲಾಗಿದೆ. ಅಷ್ಟೊಂದು ಪ್ರಮಾಣದ ದೇಗುಲಗಳು ಅಲ್ಲಿರುವುದೇ ತಿಳಿದಿಲ್ಲ. ಕೇವಲ ಬೆರಳೆಣಿಕೆಯ ಜನರ ಕೈಯಲ್ಲಿದ್ದ ಅಲ್ಲಿನ ಸಂಪನ್ಮೂಲ, ಸರಕಾರದಿಂದ ಬಿಡುಗಡೆಯಾದ ಅನುದಾನ ಕೆಲವರಿಗಷ್ಟೇ ಸೇರುತ್ತಿದ್ದುದು ಮುಂದಿನ ದಿನಗಳಲ್ಲಿ ಸಮಾನತಾ ನ್ಯಾಯವಾಗಲಿದೆ ಎಂದರು.

ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ ಶೆಟ್ಟಿ ಪ್ರಸ್ತಾವಿಸಿ, ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ದೇಶಧ್ವಜ ಸಾಧ್ಯವಿಲ್ಲ ಎಂದು ಹೇಳಿದ ಬಿಜೆಪಿ ಸಂಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ಸಾರ್ಥಕವಾಗಿದೆ ಎಂದರು.

Advertisement

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಯಾನ ಉದ್ಘಾಟಿಸಿದರು.

ಅಭಿಯಾನ ಜಿಲ್ಲಾ ಸಹ ಸಂಚಾಲಕಿ ಪೂರ್ಣಿಮಾ ಎಸ್‌. ನಾಯಕ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಅಂಕದಕಟ್ಟೆ, ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.
ಸದಾನಂದ ಬಳ್ಕೂರು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next