Advertisement

India-Greece ದುಪ್ಪಟ್ಟಾಗಲಿದೆ ವ್ಯಾಪಾರ; ಮಿಟ್ಸೋಟಾಕಿಸ್ ಜತೆ ಮಾತುಕತೆ ವೇಳೆ ಮೋದಿ ಘೋಷಣೆ

09:26 PM Aug 25, 2023 | Team Udayavani |

ಅಥೆನ್ಸ್‌: “2030ರೊಳಗೆ ಭಾರತ ಮತ್ತು ಗ್ರೀಸ್‌ ನಡುವಿನ ವ್ಯಾಪಾರ ವಹಿವಾಟು ಪ್ರಮಾಣ ದುಪ್ಪಟ್ಟಾಗಲಿದೆ. ಎರಡೂ ದೇಶಗಳ ನಡುವೆ “ಕೌಶಲ್ಯಯುತ ವಲಸೆ’ಯನ್ನು ಹೆಚ್ಚಿಸುವ ಗುರಿ ನಮ್ಮದಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬ್ರಿಕ್ಸ್‌ ಶೃಂಗಸಭೆ ಮುಗಿಸಿ ಶುಕ್ರವಾರ ಗ್ರೀಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ಗ್ರೀಸ್‌ ಪ್ರಧಾನಮಂತ್ರಿ ಕೈರಿಯಾಕೋಸ್‌ ಮಿಟ್ಸೋಟಾಕಿಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಈ ಘೋಷಣೆ ಮಾಡಿದ್ದಾರೆ.

Advertisement

ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಭೇಟಿ ನೀಡುತ್ತಿರುವುದು ಕಳೆದ 40 ವರ್ಷಗಳಲ್ಲಿ ಇದೇ ಮೊದಲು. ಈ ಹಿಂದೆ 1983ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಗ್ರೀಸ್‌ ಪ್ರವಾಸ ಕೈಗೊಂಡಿದ್ದರು.

ಗ್ರೀಸ್‌ ಪ್ರಧಾನಿ ಜತೆಗಿನ ಭೇಟಿ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ಈಗ ನಮ್ಮ ದೇಶಗಳ ಬಾಂಧವ್ಯವು ವ್ಯೂಹಾತ್ಮಕ ಪಾಲುದಾರಿಕೆಯ ಮಟ್ಟಕ್ಕೆ ಏರಿಕೆಯಾಗಿದೆ. ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಉಭಯ ದೇಶಗಳ ಬಾಂಧವ್ಯ ವೃದ್ಧಿಯಾಗುತ್ತಿದೆ. ಭಾರತ-ಗ್ರೀಸ್‌ ವ್ಯಾಪಾರವು ಮುಂದಿನ 7 ವರ್ಷಗಳಲ್ಲೇ ದುಪ್ಪಟ್ಟಾಗಲಿದೆ’ ಎಂದಿದ್ದಾರೆ.

ಭಯೋತ್ಪಾದನೆ ನಿಗ್ರಹ ನಿಟ್ಟಿನಲ್ಲಿಯೂ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಗಿದೆ. ಸೇನಾ ಒಪ್ಪಂದಗಳ ಜೊತೆಗೆ ರಕ್ಷಣಾ ಉದ್ಯಮದಲ್ಲೂ ಸಹಕಾರ ವೃದ್ಧಿಗೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿ ಭಾರತ ಮತ್ತು ಗ್ರೀಸ್‌ ನಡುವೆ ಸಾಂಸ್ಥಿಕ ಮಾತುಕತೆ ಆಯೋಜಿಸುವ ಕುರಿತೂ ನಿರ್ಧರಿಸಲಾಗಿದೆ ಎಂದೂ ಮೋದಿ ತಿಳಿಸಿದ್ದಾರೆ.

ಯುದ್ಧ ಸ್ಮಾರಕಕ್ಕೆ ಭೇಟಿ: ಇದಕ್ಕೂ ಮುನ್ನ, ಅಥೆನ್ಸ್‌ ವಿಮಾನನಿಲ್ದಾಣದಲ್ಲಿ ಗ್ರೀಸ್‌ ವಿದೇಶಾಂಗ ಸಚಿವ ಜಾರ್ಜ್‌ ಗೆರಾಪೆಟ್ರಿಟಿಸ್‌ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು. ಅಲ್ಲಿಂದ ನೇರವಾಗಿ ಮೋದಿಯವರು ಸಿಂಟಗ್ಮಾ ಸ್ಕ್ವೇರ್‌ನಲ್ಲಿರುವ “ಯುದ್ಧಸ್ಮಾರಕ’ಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ನಂತರ ಅಥೆನ್ಸ್‌ನ ಹೋಟೆಲ್‌ಗೆ ಬಂದಾಗ ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಭಾರತೀಯ ಸಮುದಾಯವು “ವಂದೇ ಮಾತರಂ’ ಎಂದು ಘೋಷಣೆ ಕೂಗುತ್ತಾ ಮೋದಿಯವರನ್ನು ಸ್ವಾಗತಿಸಿತು.

Advertisement

ಚಂದ್ರಯಾನ-3 ಮನುಕುಲಕ್ಕೆ ಸಂದ ಜಯ
ಗ್ರೀಸ್‌ ಪ್ರವಾಸದ ವೇಳೆ ಅಲ್ಲಿನ ಅಧ್ಯಕ್ಷೆ ಕ್ಯಾಟರೀನಾ ಎನ್‌.ಸಕೆಲರೊಪೌಲೊ ಅವರೊಂದಿಗೂ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕ್ಯಾಟರೀನಾ ಅವರು, ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, “ಚಂದ್ರಯಾನ-3ರ ಯಶಸ್ಸು ಕೇವಲ ಭಾರತದ್ದಲ್ಲ, ಅದು ಇಡೀ ಮನುಕುಲಕ್ಕೆ ಸಂದ ಜಯ’ ಎಂದು ಹೇಳಿದರು. ಅಲ್ಲದೇ, ಚಂದ್ರಯಾನ-3 ಸಂಗ್ರಹಿಸುವಂಥ ದತ್ತಾಂಶಗಳು ಇಡೀ ವೈಜ್ಞಾನಿಕ ಲೋಕ ಮತ್ತು ಮಾನವತೆಗೆ ನೆರವಾಗಲಿದೆ ಎಂದೂ ತಿಳಿಸಿದರು. ಇದೇ ವೇಳೆ, ಭಾರತ-ಗ್ರೀಸ್‌ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತೂ ಉಭಯ ನಾಯಕರು ಚರ್ಚೆ ನಡೆಸಿದರು.

ಯುರೋಪ್‌ಗೆ ಭಾರತದ “ಪ್ರವೇಶದ್ವಾರ’ವಾಗಲು ಗ್ರೀಸ್‌ ಬಯಸುತ್ತದೆ. “ಗ್ರೀಸ್‌ 2.0 ಮಾಸ್ಟರ್‌ಪ್ಲ್ರಾನ್‌’ನಂತೆ ನಮ್ಮ ಬಂದರುಗಳು, ವಿಮಾನ ನಿಲ್ದಾಣಗಳು, ಸರಕು ಸಾಗಣೆ, ರಿಯಲ್‌ ಎಸ್ಟೇಟ್‌, ಮಾಹಿತಿ ತಂತ್ರಜ್ಞಾನ, ಕೃಷಿ, ಫಾರ್ಮಾ ಕ್ಷೇತ್ರಗಳಲ್ಲಿ ಭಾರತದ ವ್ಯೂಹಾತ್ಮಕ ಹೂಡಿಕೆಯನ್ನು ನಾವು ನಿರೀಕ್ಷಿಸುತ್ತೇವೆ.
– ಡಿಮಿಟ್ರಿಯೋಸ್‌ ಲೋನ್ನಾವ್‌, ದೆಹಲಿಯಲ್ಲಿರುವ ಗ್ರೀಸ್‌ ರಾಯಭಾರಿ

ಮೋದಿಗೆ ಗ್ರೀಸ್‌ನ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ
ಗ್ರೀಸ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ 2ನೇ ಅತ್ಯುಚ್ಚ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶುಕ್ರವಾರ ಗ್ರೀಸ್‌ ಅಧ್ಯಕ್ಷೆ ಕ್ಯಾಟರೀನಾ ಸಕೆಲರೊಪೌಲೊ ಅವರು ಮೋದಿಯವರಿಗೆ “ಗ್ರ್ಯಾಂಡ್‌ ಕ್ರಾಸ್‌ ಆಫ್ ದಿ ಆರ್ಡರ್‌ ಆಫ್ ಆನರ್‌’ ಅನ್ನು ಪ್ರದಾನ ಮಾಡಿದ್ದಾರೆ. 1975ರಲ್ಲಿ ಸ್ಥಾಪಿಸಲಾದ ಪ್ರಶಸ್ತಿ ಇದಾಗಿದ್ದು, ಪದಕದ ಮುಂಭಾಗದಲ್ಲಿ ಅಥೆನಾ ದೇವತೆಯ ಮುಖವನ್ನು ಕೆತ್ತಲಾಗಿದೆ. ಜತೆಗೆ, “ಅರ್ಹರನ್ನು ಮಾತ್ರವೇ ಗೌರವಿಸಬೇಕು’ ಎಂದು ಬರೆಯಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಗೌರವವನ್ನು ಪ್ರದಾನ ಮಾಡಿದ ಅಧ್ಯಕ್ಷರಾದ ಕ್ಯಾಟರೀನಾ, ಗ್ರೀಸ್‌ ಸರ್ಕಾರ ಮತ್ತು ಜನರಿಗೆ ನನ್ನ ಧನ್ಯವಾದಗಳು. ಇದು ಭಾರತದ ಬಗ್ಗೆ ಗ್ರೀಸ್‌ ಜನರಿಗೆ ಇರುವ ಗೌರವವನ್ನು ತೋರಿಸಿದೆ’ ಎಂದು ಹೇಳಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next