Advertisement

ದೇಶದ GDPಗೆ ಕೋವಿಡ್ 19 ಆಘಾತ : ಮೊದಲ ತ್ತೈಮಾಸಿಕದಲ್ಲಿ ಶೇ.23.9ರಷ್ಟು ಕುಸಿದ ಪ್ರಗತಿ

08:28 AM Sep 01, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಸೋಂಕು ಭಾರತದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ.

Advertisement

ಎಪ್ರಿಲ್‌ನಿಂದ ಜೂನ್‌ವರೆಗಿನ ತ್ತೈಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು, ಶೇ.23.9ರ ಕುಸಿತ ಕಂಡಿದೆ.

ಈ ಮೂಲಕ ಭಾರತ ಅಧಿಕೃತವಾಗಿ ಆರ್ಥಿಕ ಹಿಂಜರಿತದ ಹಂತಕ್ಕೆ ಕಾಲಿಟ್ಟಂತಾಗಿದೆ.

ಸೋಂಕು ವ್ಯಾಪಿಸುವಿಕೆ ತಡೆಯಲು ಹೇರಿದ ಲಾಕ್‌ಡೌನ್‌ನಿಂದಾಗಿ ಎಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಪ್ರಮುಖ ಉದ್ದಿಮೆಗಳು, ಕೈಗಾರಿಕಾ ಚಟುವಟಿಕೆಗಳು ಸ್ತಬ್ಧವಾಗಿ, ಗ್ರಾಹಕರ ಬೇಡಿಕೆಯಲ್ಲೂ ತೀವ್ರ ಕುಸಿತ ಕಂಡು ಬಂದಿತ್ತು.

ಉತ್ಪಾದನೆ, ನಿರ್ಮಾಣ, ಸೇವಾ ಕ್ಷೇತ್ರಗಳೂ ಸ್ಥಗಿತಗೊಂಡಿದ್ದವು. ಇವೆಲ್ಲದರ ಪರಿಣಾಮವೆಂಬಂತೆ ಜಿಡಿಪಿ ದೊಡ್ಡ ಮಟ್ಟದ ಆಘಾತ ಎದುರಿಸುವಂತಾಗಿದೆ.

Advertisement

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ (ಎಪ್ರಿಲ್‌ – ಜೂನ್‌) ದೇಶದ ಆರ್ಥಿಕತೆಯು ಶೇ.5.2ರಷ್ಟು ಪ್ರಗತಿ ಕಂಡಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಹೇಳಿದೆ.

ದಾಖಲೆ ಕುಸಿತ
ಭಾರತ ಸರಕಾರವು ತ್ತೈಮಾಸಿಕ ಜಿಡಿಪಿ ದರವನ್ನು ಘೋಷಿಸಲು ಆರಂಭಿಸಿದ್ದು 1996ರಲ್ಲಿ. ಅಂದಿನಿಂದ ಇಂದಿನವರೆಗೆ ಜಿಡಿಪಿ ಇಷ್ಟರ ಮಟ್ಟಿಗೆ ಕುಸಿತ ಕಂಡದ್ದು ಇದೇ ಮೊದಲು ಎಂದು ಎನ್‌ಎಸ್‌ಒ ತಿಳಿಸಿದೆ. ಅಲ್ಲದೆ ಜಿ20 ರಾಷ್ಟ್ರಗಳ ಪೈಕಿ ಅತ್ಯಂತ ಹೆಚ್ಚಿನ ಜಿಡಿಪಿ ಕುಸಿತ ಕಂಡ ದೇಶ ಎಂಬ ಅಪಖ್ಯಾತಿಗೂ ಭಾರತ ಪಾತ್ರವಾಗಿದೆ.

ಕೋವಿಡ್ 19 ಕಾರಣ
ಕೋವಿಡ್ 19 ಹಿನ್ನೆಲೆಯಲ್ಲಿ ಮಾ. 25ರಿಂದ ದೇಶವ್ಯಾಪಿ ಲಾಕ್‌ಡೌನ್‌ ಇತ್ತು. ಸತತ 3 ತಿಂಗಳ ಕಾಲ ಆರ್ಥಿಕ ಚಟುವಟಿಕೆಗಳು ನಡೆಯದಿದ್ದ ಕಾರಣ ಆರ್ಥಿಕತೆಯ ಎಲ್ಲ ಕ್ಷೇತ್ರಗಳ ಮೇಲೂ ಪ್ರತಿಕೂಲ ಪರಿಣಾಮ ಉಂಟಾಯಿತು. ಅನಂತರ ನಿರ್ಬಂಧಗಳನ್ನು ತೆರವುಗೊಳಿಸಲಾಯಿತಾದರೂ ಹಲವು ಕ್ಷೇತ್ರಗಳಿಗೆ ಹಿನ್ನಡೆಯ ಆಘಾತದಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ.

ಉತ್ಪಾದನೆ ಕ್ಷೇತ್ರ
2020-21ರ ಮೊದಲ ತ್ತೈಮಾಸಿಕದಲ್ಲಿ ಉತ್ಪಾದನ ಕ್ಷೇತ್ರದ ಒಟ್ಟಾರೆ ಮೌಲ್ಯವರ್ಧಿತ ಪ್ರಗತಿ (ಜಿವಿಎ) ಶೇ. 39.3ರಷ್ಟು ಕುಸಿತ ಕಂಡಿದೆ. ವರ್ಷದ ಹಿಂದೆ ಶೇ. 3ರಷ್ಟು ಪ್ರಗತಿ ದಾಖಲಿಸಿತ್ತು.

ಇತರ ಕ್ಷೇತ್ರ
ಕಳೆದ ವರ್ಷ ಶೇ. 5.2ರಷ್ಟು ಏರಿಕೆ ಕಂಡಿದ್ದ ನಿರ್ಮಾಣ ವಲಯದ ಜಿವಿಎ ಈ ಬಾರಿ ಶೇ. 50.3ರಷ್ಟು ಕುಸಿತ ದಾಖಲಿಸಿದೆ. ಗಣಿ ಕ್ಷೇತ್ರ ಶೇ.23.3, ವಿದ್ಯುತ್‌, ಗ್ಯಾಸ್‌, ನೀರಿನ ಪೂರೈಕೆ ಮತ್ತಿತರ ಸೇವಾ ವಲಯ ಶೇ. 7, ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಮತ್ತಿತರ ಸೇವೆಗಳ ಪ್ರಗತಿ ಶೇ. 47ರಷ್ಟು ಕುಸಿತ ಕಂಡಿದೆ.

ರಿಯಲ್‌ ಎಸ್ಟೇಟ್‌, ಹಣಕಾಸು, ವೃತ್ತಿಪರ ಸೇವೆಗಳ ಪ್ರಗತಿಯಲ್ಲೂ ಶೇ. 5.3ರಷ್ಟು ಇಳಿಕೆಯಾಗಿದೆ. ಜನವರಿ-ಮಾರ್ಚ್‌ ಅವಧಿಯಲ್ಲಿ ಶೇ. 6.8ರಷ್ಟು ಕುಸಿತ ದಾಖಲಿಸಿದ್ದ ನೆರೆ ರಾಷ್ಟ್ರ ಚೀನದ ಜಿಡಿಪಿಯು ಎಪ್ರಿಲ್‌ – ಜೂನ್‌ ಅವಧಿಯಲ್ಲಿ ಶೇ.3.2ರಷ್ಟು ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next