ಕೋಲ್ಕತಾ: ಭಾರತದ ಫುಟ್ಬಾಲ್ ದಂತಕತೆ, ಖ್ಯಾತ ಆಟಗಾರ ಚುನಿ ಗೋಸ್ವಾಮಿ(82ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ಕೋಲ್ಕತಾದಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
1962ರಲ್ಲಿ ಏಷಿಯನ್ ಗೇಮ್ಸ್ ನಲ್ಲಿ ಗೋಸ್ವಾಮಿ ನೇತೃತ್ವದ ಭಾರತದ ಫುಟ್ಬಾಲ್ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕ ಗಳಿಸಿತ್ತು.
ನರಸಂಬಂಧಿ ರೋಗ, ಡಯಾಬಿಟೀಸ್ ನಿಂದ ಬಳಲುತ್ತಿದ್ದ ಫುಟ್ಬಾಲ್ ಖ್ಯಾತ ಆಟಗಾರ ಗೋಸ್ವಾಮಿ ಅವರು ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಚುನಿ ಗೋಸ್ವಾಮಿ ಅವರು ನಿಧನರಾಗಿರುವುದಾಗಿ ಕುಟುಂಬದ ಸದಸ್ಯರು ಖಚಿತಪಡಿಸಿದ್ದಾರೆ.
ದೀರ್ಘಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋಸ್ವಾಮಿ ಅವರು ಹೃದಯ ಸ್ತಂಭನದಿಂದ ಗುರುವಾರ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗೋಸ್ವಾಮಿ 50 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸುಮಾರು 200 ಗೋಲುಗಳನ್ನು ಗಳಿಸಿದ್ದ ಕೀರ್ತಿ ಚುನಿ ಗೋಸ್ವಾಮಿ ಅವರದ್ದು. 25 ಗೋಲು, ಐಎಫ್ ಎ ಪದಕ, ದುರಾಂಡ್ ಕಪ್ ನಲ್ಲಿ 18 ಗೋಲು, ರೋವರ್ಸ್ ಕಪ್ ನಲ್ಲಿ 11 ಗೋಲು ಹಾಗೂ ಡಾ.ಎಚ್ ಕೆ ಮುಖರ್ಜಿ ಶೀಲ್ಡ್ ನಲ್ಲಿ ಒಂದು ಗೋಲು ಗಳಿಸಿದ್ದ ಕೀರ್ತಿ ಗೋಸ್ವಾಮಿ ಅವರದ್ದಾಗಿದೆ.
ತಮ್ಮ 8ನೇ ವಯಸ್ಸಿಗೆ ಜ್ಯೂನಿಯರ್ ತಂಡದಲ್ಲಿ ಫುಟ್ಬಾಲ್ ಆಟಕ್ಕೆ ಸೇರಿಕೊಂಡಿದ್ದರು. ಕ್ರಿಕೆಟ್ ಕ್ಷೇತ್ರದಲ್ಲಿಯೂ ಕೂಡಾ ಹಲವು ಸಾಧನೆಗೈದ ಹೆಗ್ಗಳಿಕೆ ಗೋಸ್ವಾಮಿಯದ್ದಾಗಿದೆ. ಬಂಗಾಳದ ಅವಿಭವಿತ (ಈಗಿನ ಬಾಂಗ್ಲಾದೇಶ್) ಕಿಶೋರ್ ಗಂಜ್ ನಲ್ಲಿ ಜನಿಸಿದ್ದ ಗೋಸ್ವಾಮಿ ಅವರು 1971-72ರಲ್ಲಿ ಬಂಗಾಳದ ರಣಜಿ ಸೀಸನ್ ಕ್ಯಾಪ್ಟನ್ ಆಗಿದ್ದರು. 1963ರಲ್ಲಿ ಗೋಸ್ವಾಮಿ ಅರ್ಜುನ್ ಪ್ರಶಸ್ತಿಯನ್ನು ಡಿಗೇರಿಸಿಕೊಂಡಿದ್ದರು. ಅಷ್ಟೇ ಅಲ್ಲ 1983ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.