ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವುದನ್ನು ಖಂಡಿಸಿರುವ ಭಾರತೀಯ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಅವರು, ಇಡೀ ಜಗತ್ತೇ ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿದೆ. ಆದರೆ ನೆರೆಯ ದೇಶ ಮಾತ್ರ ಭಯೋತ್ಪಾದನೆಯನ್ನು ರಫ್ತು ಮಾಡುವುದರಲ್ಲಿ ಮಗ್ನವಾಗಿದೆ ಎಂದು ಆರೋಪಿಸಿದ್ದಾರೆ.
ಭಾರತ ದೇಶದ ಕೇವಲ ನಮ್ಮ ಪ್ರಜೆಗಳಿಗೆ ನೆರವು ನೀಡುವುದರಲ್ಲಿ ಮಾತ್ರ ಕಾರ್ಯೋನ್ಮುಖವಾಗಿಲ್ಲ, ಜಗತ್ತಿನ ಇತರ ಭಾಗಗಳಿಗೂ ವೈದ್ಯ ಸಿಬ್ಬಂದಿಗಳನ್ನು ಕಳುಹಿಸುವುದು, ಔಷಧ ರಫ್ತು ಮಾಡುವ ಕೆಲಸದಲ್ಲಿಯೂ ತೊಡಗಿದೆ. ಮತ್ತೊಂದು ಕಡೆ ಪಾಕಿಸ್ತಾನ ಭಯೋತ್ಪಾದಕರನ್ನು ರಫ್ತು ಮಾಡುವ ಕೆಲಸದಲ್ಲಿ ಮಾತ್ರ ನಿರತವಾಗಿದೆ. ಇದು ಒಳ್ಳೆಯ ಲಕ್ಷಣವಲ್ಲ ಎಂದು ಟೀಕಿಸಿದ್ದಾರೆ.
ಈವರೆಗೆ ಇಡೀ ಭಾರತೀಯ ಸೇನೆಯಲ್ಲಿ ಎಂಟು ಮಂದಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ. ಇದರಲ್ಲಿ ಇಬ್ಬರು ವೈದ್ಯರು ಮತ್ತು ಒಬ್ಬರು ವೈದ್ಯ ಸಿಬ್ಬಂದಿ ಸೇರಿದ್ದಾರೆ. ನಾಲ್ವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಒಂದು ಪ್ರಕರಣ ಲಡಾಖ್ ನಲ್ಲಿ ಪತ್ತೆಯಾಗಿದೆ. ಆ ವ್ಯಕ್ತಿಯೂ ಸಂಪೂರ್ಣ ಗುಣಮುಖರಾಗಿ ಸೇವೆಗೆ ಹಾಜರಾಗಿದ್ದಾರೆ ಎಂದು ನರಾವಣೆ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಸೇನೆಯ ಯಾವುದೇ ಯೋಧರಿಗೆ ಸೋಂಕು ತಗುಲಿದರೆ ಅವರನ್ನು ಕೂಡಲೇ ಶಿಬಿರಗಳಿಗೆ ವಾಪಸ್ ಕರೆಯಿಸಿಕೊಳ್ಳಲಾಗುತ್ತದೆ. ನಾವು ಈಗಾಗಲೇ ವಿಶೇಷವಾಗಿ ಎರಡು ರೈಲುಗಳನ್ನು ಸಿದ್ದಪಡಿಸಿದ್ದೇವೆ. ಒಂದು ಬೆಂಗಳೂರುನಿಂದ ಜಮ್ಮುವಿಗೆ, ಮತ್ತೊಂದು ಬೆಂಗಳೂರುನಿಂದ ಗುವಾಹಟಿಗೆ ಎಂದು ವಿವರಿಸಿದ್ದಾರೆ.
ಇತ್ತೀಚೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಅಲ್ಲದೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಕೂಡಾ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು ಎಂದು ತಿಳಿಸಿದ್ದಾರೆ.