Advertisement

ಭಾರತ: ಕೊರೊನಾ ಭೀತಿ

10:22 AM Jan 27, 2020 | Team Udayavani |

ಹೊಸದಿಲ್ಲಿ/ಬೀಜಿಂಗ್‌: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ದೇಶದ ನೂರಾರು ಮಂದಿಯ ಮೇಲೆ ನಿಗಾ ವಹಿಸಲಾಗಿದ್ದು, ಮುಂಬರುವ ಸನ್ನಿವೇಶಗಳನ್ನು ಎದುರಿಸಲು ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದೆ. ಈ ನಡುವೆ ಚೀನದಲ್ಲಿ ಇದರ ಪ್ರಕೋಪ ಹೆಚ್ಚಾಗುತ್ತಲೇ ಇದೆ. ನೂರಾರು ಮಂದಿಯ ಮೇಲೆ ನಿಗಾ ವಹಿಸಿರುವ ವಿಚಾರ ತಿಳಿಯುತ್ತಿದ್ದಂತೆ ಶನಿವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಪ್ರಧಾನಿ ಕಾರ್ಯಾಲಯಕ್ಕೆ ಧಾವಿಸಿದ್ದು, ವೈರಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿದ್ದಾರೆ.

Advertisement

ಈಗಾಗಲೇ ಸಚಿವಾಲಯವು 24ಗಿ7 ಕಾಲ್‌ ಸೆಂಟರ್‌ ಆರಂಭಿಸಿದ್ದು, ಕೊರೊನಾ ವೈರಸ್‌ಗೆ ಸಂಬಂಧಿಸಿ ಯಾವುದೇ ಪ್ರಶ್ನೆಗಳಿದ್ದರೂ ಅದಕ್ಕೆ ಉತ್ತರಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಇಲ್ಲಿನ ಸಿಬಂದಿಗೆ ವಹಿಸಿದೆ.

11 ಮಂದಿ ಆಸ್ಪತ್ರೆಯಲ್ಲಿ
ಬೆಂಗಳೂರು, ಹೈದರಾಬಾದ್‌, ಕೇರಳ ಸಹಿತ ವಿವಿಧ ರಾಜ್ಯಗಳಲ್ಲಿ ಒಟ್ಟು 11 ಮಂದಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ದಲ್ಲಿಡಲಾಗಿದೆ. ಇತರ ನೂರಾರು ಮಂದಿಯ ಆರೋಗ್ಯದ ಮೇಲೆಯೂ ಸಂಶಯ ಹೊಂದಿರುವುದರಿಂದ ನಿಗಾ ವಹಿಸಲಾಗಿದೆ. ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಗುತ್ತಿರುವ ದೇಶದ 7 ವಿಮಾನ ನಿಲ್ದಾಣಗಳಿಗೆ ಕೇಂದ್ರ ತಂಡವನ್ನು ಕಳುಹಿಸಲು ಆರೋಗ್ಯ ಸಚಿವಾಲಯ ಸೂಚಿಸಿದೆ.

ಸಿಎಂ ಜತೆ ಚರ್ಚೆ
ನೇಪಾಲದಲ್ಲಿ ಒಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಗಡಿಯಲ್ಲೂ ಸ್ಕ್ರೀನಿಂಗ್‌ ಕೈಗೊಳ್ಳು ವಂತೆ ನೇಪಾಲದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರಾ ಖಂಡದ ಸಿಎಂಗೆ ಸಚಿವ ಹರ್ಷವರ್ಧನ್‌ ಸೂಚಿಸಿದ್ದಾರೆ.

400 ಸೇನಾ ವೈದ್ಯರ ನಿಯೋಜನೆ
ಚೀನದ ವುಹಾನ್‌ ನಗರದಲ್ಲಿ ಅತೀ ಹೆಚ್ಚಿನ ಸೋಂಕಿತರು ಕಂಡುಬಂದಿದ್ದು, ಭಾರೀ ಸಂಖ್ಯೆಯ ಜನರಿಗೆ ಚಿಕಿತ್ಸೆ ನೀಡಬೇಕಾಗಿರುವ ಕಾರಣ ಇಲ್ಲಿ ವೈದ್ಯ ಕೀಯ ಸಂಪನ್ಮೂಲಗಳ ಕೊರತೆ ಕಂಡುಬಂದಿದೆ. ಇಲ್ಲಿರುವ ಎಲ್ಲ ಆಸ್ಪತ್ರೆಗಳಲ್ಲೂ ಪರೀಕ್ಷಾ ಕಿಟ್‌ಗಳು ಸಹಿತ ಪ್ರಮುಖ ವೈದ್ಯಕೀಯ ಪರಿಕರಗಳ ಅಭಾವ ತಲೆದೋರಿದ್ದು, ಆದ್ಯತೆಯ ಮೇರೆಗೆ ರೋಗಿಗಳಿಗೆ ಚಿಕಿತ್ಸೆ ನೀಡುವಂಥ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚೀನ ಸೇನೆ(ಪೀಪಲ್ಸ್‌ ಲಿಬರೇಶನ್‌ ಆರ್ಮಿ)ಯ 450 ವೈದ್ಯರನ್ನು ಸರಕಾರ ನಿಯೋಜಿ ಸಿದೆ. ದೇಶದ ಮೂಲೆ ಮೂಲೆಗಳಿಂದಲೂ ವೈದ್ಯಕೀಯ ಸಿಬಂದಿಯನ್ನು ಕರೆಸಿಕೊಳ್ಳಲೂ ಆರಂಭಿಸಿದೆ. ಆಸ್ಪತ್ರೆಗಳಲ್ಲಿನ ವೈದ್ಯರು ಹಾಗೂ ಸಿಬಂದಿ ದಿನದ 24 ಗಂಟೆಯೂ ಬಿಡು ವಿಲ್ಲದೆ ಕೆಲಸ ಮಾಡುತ್ತಿದ್ದಾರೆ.

Advertisement

41ಕ್ಕೆ ಜಿಗಿದ ಮೃತರ ಸಂಖ್ಯೆ
ಮಾರಕ ಕೊರೊನಾ ವೈರಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಚೀನದಲ್ಲಿ ಹಲವು ನಗರಗಳನ್ನು ಲಾಕ್‌ಡೌನ್‌ ಮಾಡಲಾಗಿದ್ದರೂ ಶನಿವಾರ ಮೃತರ ಸಂಖ್ಯೆ ಏಕಾಏಕಿ 41ಕ್ಕೆ ಜಿಗಿದಿದೆ. 1,300ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಬಸ್‌, ರೈಲು, ವಿಮಾನಗಳು ಸಹಿತ ಎಲ್ಲೆಲ್ಲೂ ಸೋಂಕಿತರ ಪತ್ತೆಗೆ ದೇಶವ್ಯಾಪಿ ಕ್ರಮಕ್ಕೆ ಸೂಚಿಸಲಾಗಿದೆ. ಹಾಂಕಾಂಗ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 17 ನಗರಗಳಲ್ಲಿ ಜನರು ದಿಗ್ಬಂಧನಕ್ಕೊಳಗಾಗಿದ್ದು, ಒಳಗಿರುವವರು ಹೊರಗೆ ಹೋಗಲೂ ಸಾಧ್ಯವಾಗದೆ, ಹೊರಗಿನವರು ಒಳಗೆ ಬರಲೂ ಸಾಧ್ಯವಾಗದೆ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಭಾರತೀಯರನ್ನು ಬಿಡಲು ಮನವಿ
ಕೊರೊನಾ ವೈರಸ್‌ನ ಕೇಂದ್ರಬಿಂದು ವಾಗಿರುವ ವುಹಾನ್‌ ನಗರ ಸಹಿತ ಚೀನದ ಹಲವು ಭಾಗಗಳು ಲಾಕ್‌ಡೌನ್‌ ಆಗಿರುವ ಕಾರಣ ಅಲ್ಲಿರುವ ಭಾರತೀಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಭಾರತೀಯರನ್ನು ಅಲ್ಲಿಂದ ಹೊರ ಹೋಗಲು ಅವಕಾಶ ಕೊಡಿ ಎಂದು ಚೀನಕ್ಕೆ ಭಾರತ ಮನವಿ ಮಾಡಿದೆ. ಆದರೆ ವೈರಸ್‌ ವ್ಯಾಪಿಸುವುದನ್ನು ತಡೆಯಲು ಹರಸಾಹಸಪಡುತ್ತಿರುವ ಚೀನ ಈ ಕೋರಿಕೆಗೆ ಸ್ಪಂದಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ. ಸುಮಾರು 300ರಷ್ಟು ಭಾರತೀಯರು ವುಹಾನ್‌ನಲ್ಲಿದ್ದು, ತಾವು ಗಂಭೀರ ವೈದ್ಯಕೀಯ ತುರ್ತುಸ್ಥಿತಿಯ ಮಧ್ಯೆ ಸಿಲುಕಿ ಅತಂತ್ರರಾಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next