Advertisement
ಭಾರತ ಮತ್ತು ಕೆನಡ ನಡುವಣ ಈ ಹೋರಾಟ ಯುವ ಆಟಗಾರರ ಜತೆ ನಡೆಯುವುದು ವಿಶೇಷವಾಗಿದೆ. ಹಾಗಾಗಿ ಎಲ್ಲ ಪಂದ್ಯಗಳು ತೀವ್ರ ಪೈಪೋಟಿಯಿಂದ ಸಾಗುವ ನಿರೀಕ್ಷೆ ಮಾಡಲಾಗಿದೆ. ಡೆನಿಸ್ ಶಪೋವಾಲೋವ್ ನೇತೃತ್ವದ ಕೆನಡ ತಂಡ ಬಲಿಷ್ಠವಾಗಿದೆ. 18 ಹರೆಯದ ವಿಶ್ವದ 51ನೇ ರ್‍ಯಾಂಕಿನ ಶಪೋವಾಲೋವ್ ಮಾಂಟ್ರಿಯಲ್ ಮಾಸ್ಟರ್ ಟೆನಿಸ್ ಕೂಟದಲ್ಲಿ ರಫೆಲ್ ನಡಾಲ್ ಅವರನ್ನು ಸೋಲಿಸಿದ ಸಾಧನೆ ಮಾಡಿದ್ದಾರೆ. ಆಬಳಿಕ ಯುಎಸ್ ಓಪನ್ ಕೂಟ ದಲ್ಲಿ ನಾಲ್ಕನೇ ಸುತ್ತಿಗೇರಿದ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡಿದ್ದಾರೆ. ಇದು ಅವರ ಕೇವಲ ಎರಡನೇ ಗ್ರ್ಯಾನ್ ಸ್ಲಾಮ್ ಕೂಟವಾಗಿತ್ತು.
Related Articles
ಕೆನಡ ತಂಡದ ಇನ್ನೋರ್ವ ಸಿಂಗಲ್ಸ್ ಆಟಗಾರ ವಾಸೆಕ್ ಪಾಸ್ಪಿಸಿಲ್ ಭಾರತೀಯ ಆಟಗಾರರಿಗಿಂತ ಉನ್ನತ ರ್‍ಯಾಂಕ್ ಹೊಂದಿದ್ದರೂ (82ನೇ ರ್‍ಯಾಂಕ್) ಅವರನ್ನು ಎದುರಿಸುವುದು ಯೂಕಿ ಮತ್ತು ರಾಮ್‌ಕುಮಾರ್ ಅವರಿಗೆ ಅಷ್ಟೊಂದು ಕಷ್ಟವಾಗಲಿಕ್ಕಿಲ್ಲ. ಯಾಕೆಂದರೆ ಅವರು ಯುಎಸ್ ಓಪನ್‌ನ ಮೊದಲ ಸುತ್ತು ಸಹಿತ ಎಟಿಪಿ ಟೂರ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ಸೋತು ಇಲ್ಲಿಗೆ ಬಂದಿದ್ದಾರೆ. 2014ರಲ್ಲಿ ಯೂಕಿ ಅವರು ಪಾಸ್ಪಿಸಿಲ್ ಅವರನ್ನು ಎದುರಿಸಿದ್ದರು. ಚೆನ್ನೈ ಓಪನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಯೂಕಿ ಅವರು ಪಾಸ್ಪಿಸಿಲ್‌ಗೆ ಶರಣಾಗಿದ್ದರು. ಆದರೆ ರಾಮ್‌ಕುಮಾರ್ ಒಮ್ಮೆಯೂ ಪಾಸ್ಪಿಸಿಲ್ ಅವರನ್ನು ಎದುರಿಸಿಲ್ಲ. ಮೊದಲ ದಿನದ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಒಂದು ವೇಳೆ ಭಾರತ ಒಂದು ಪಂದ್ಯ ಗೆದ್ದರೆ ಫಲಿತಾಂಶ ಯಾವ ರೀತಿ ಕೂಡ ಸಾಗಬಹುದು. ಡಬಲ್ಸ್‌ನಲ್ಲಿ ಭಾರತೀಯ ಆಟಗಾರರಾದ ಬೋಪಣ್ಣ ಮತ್ತು ಮೈನೇನಿ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ.
Advertisement
ವಿಶ್ವ ಬಣಕ್ಕೇರಲು ಉತ್ತಮ ಅವಕಾಶವಿಶ್ವದ 11ನೇ ರ್‍ಯಾಂಕಿನ ಮಿಲೋಸ್ ರಾನಿಕ್ ಅವರ ಅನುಪಸ್ಥಿತಿಯಿಂದಾಗಿ ಭಾರತಕ್ಕೆ ಕೆನಡ ವಿರುದ್ಧ ಗೆಲುವು ಸಾಧಿಸಿ ವಿಶ್ವ ಬಣಕ್ಕೇರಲು ಉತ್ತಮ ಅವಕಾಶ ಸಿಕ್ಕಿದೆ ಎಂದು ನಂಬಲಾಗಿದೆ. ಭಾರತ ಸತತ 4ನೇ ವರ್ಷ ವಿಶ್ವಬಣಕ್ಕೆ ತೇರ್ಗಡೆ ಯಾಗಲು ಪ್ರಯತ್ನಿಸುತ್ತಿದೆ. ಕಳೆದ ಮೂರು ವರ್ಷ ನಡೆದ ಪ್ಲೇ ಆಫ್ ಹೋರಾಟಗಳಲ್ಲಿ ಭಾರತ ಸರ್ಬಿಯಾ (2014-ಬೆಂಗಳೂರು), ಜೆಕ್ ಗಣರಾಜ್ಯ (2015-ಹೊಸದಿಲ್ಲಿ) ಮತ್ತು ಸ್ಪೇನ್ (2016-ಹೊಸದಿಲ್ಲಿ)ಗೆ ಶರಣಾಗಿತ್ತು. ಭಾರತ ಈ ಹಿಂದೆ 2011ರಲ್ಲಿ ವಿಶ್ವಬಣದಲ್ಲಿ ಆಡಿದೆ. ಆದರೆ ಹಾಲಿ ಚಾಂಪಿಯನ್ ಸರ್ಬಿಯಾ ವಿರುದ್ಧ 1-4 ಅಂತರದಿಂದ ಸೋತಿತ್ತು.