ವಾಷಿಂಗ್ಟನ್ : ಮತ್ತೆ ಅಧಿಕಾರದ ಗದ್ದುಗೆ ಏರುವ ಯತ್ನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಇದೀಗ ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಈ ನಿರ್ಣಾಯಕ ಕಾಲಘಟ್ಟದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂ ಎಫ್), ‘ಭಾರತ ವಿಶ್ವದಲ್ಲೇ ಅತೀ ವೇಗದ ಬೆಳವಣಿಗೆ ಕಾಣುತ್ತಿರುವ ಬೃಹತ್ ಆರ್ಥಿಕತೆಯಾಗಿದೆ’ ಎಂಬ ಪ್ರಶಂಸೆ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತನ್ನ ಕಳೆದ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಹಲವು ದಿಟ್ಟ ಹಾಗೂ ಕ್ರಾಂತಿಕಾರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿರುವ ಕಾರಣ ಭಾರತವು ವಿಶ್ವದಲ್ಲೇ ಅತೀ ವೇಗದ ಬೆಳವಣಿಗೆ ಕಾಣುತ್ತಿರುವ ಬೃಹತ್ ಆರ್ಥಿಕತೆಯಾಗಿ ಮೂಡಿಬರಲು ಸಾಧ್ಯವಾಗಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.
ಈ ವಿಷಯವನ್ನು ಐಎಂಎಫ್ ಸಂವಹನ ನಿರ್ದೇಶಕರಾಗಿರುವ ಗೆರಿ ರೈಸ್ ಅವರು ತಮ್ಮ ಪಾಕ್ಷಿಕ ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗಪಡಿಸಿದರು.
‘ಭಾರತದ ಆರ್ಥಿಕ ಪ್ರಗತಿ ಕಳೆದ ಐದು ವರ್ಷಗಳಿಂದ ಶೇ.7ರ ಆಸುಪಾಸಿನಲ್ಲಿದೆ. ಆದುದರಿಂದ ಅದು ವಿಶ್ವದ ಅತೀ ವೇಗದ ಬೆಳವಣಿಗೆಯನ್ನು ಕಾಣುತ್ತಿರುವ ಬೃಹತ್ ಆರ್ಥಿಕತೆಯಾಗಿ ಮೂಡಿ ಬರುತ್ತಿದೆ’ ಎಂದು ಗೆರಿ ರೈಸ್ ಹೇಳಿದರು.
ಭಾರತದ ನಾಗಲೋಟದ ಆರ್ಥಿಕ ಪ್ರಗತಿಯ ವಿವರಗಳು, ಅಂಕಿ ಅಂಶಗಳನ್ನು ಮುಂಬರುವ ವಿಶ್ವ ಆರ್ಥಿಕ ನೋಟ (ಡಬ್ಯುಇಓ) ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಲಿದೆ; ಮುಂದಿನ ತಿಂಗಳಲ್ಲಿ ನಡೆಯಲಿರುವ ವಿಶ್ವ ಬ್ಯಾಂಕ್ ಜತೆಗಿನ ವಾರ್ಷಿಕ ವಸಂತ ಮಾಸದ ಸಭೆಯಲ್ಲಿ ಐಎಂಎಫ್ ಈ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಿದೆ ಎಂದು ರೈಸ್ ಹೇಳಿದರು.