Advertisement

India-England ಟೆಸ್ಟ್‌ ಸರಣಿ: ಸ್ಪಿನ್‌ಬಾಲ್‌ ವರ್ಸಸ್‌ ಬಾಝ್ ಬಾಲ್‌

12:40 AM Jan 25, 2024 | Team Udayavani |

ಹೈದರಾಬಾದ್‌: ಕಳೆದ 12 ವರ್ಷಗಳಿಂದ ತವರು ನೆಲದಲ್ಲಿ ಅಜೇಯ ದಾಖಲೆ ಹೊಂದಿರುವ ಭಾರತ ತಂಡ, ಕ್ರಿಕೆಟ್‌ ಜನಕರಾದ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸುದೀರ್ಘ‌ ಟೆಸ್ಟ್‌ ಸರಣಿಗೆ ಅಣಿಯಾಗಿದೆ. ಹೈದರಾಬಾದ್‌ನ “ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ’ನಲ್ಲಿ ಗುರುವಾರ ಮೊದಲ ಟೆಸ್ಟ್‌ ಆರಂಭವಾಗಲಿದ್ದು, ಎರಡೂ ತಂಡಗಳು ಜಿದ್ದಾಜಿದ್ದಿ ಕದನಕ್ಕೆ ಮುನ್ನುಡಿ ಬರೆಯಲಿವೆ.

Advertisement

ಭಾರತ ಸ್ಪಿನ್‌ ಆಕ್ರಮಣವನ್ನು ನೆಚ್ಚಿಕೊಂಡರೆ, ಇಂಗ್ಲೆಂಡ್‌ ಟೆಸ್ಟ್‌ ಶೈಲಿಗೆ ವ್ಯತಿರಿಕ್ತವಾದ “ಬಾಝ್ಬಾಲ್‌’ ಆಟಕ್ಕೆ ಮುಂದಾಗುವ ಸೂಚನೆ ನೀಡಿದೆ. ಅಂದರೆ ಸಾಂಪ್ರದಾಯಿಕ ರೀತಿಯ ಬ್ಯಾಟಿಂಗ್‌ ಬದಲು ಆಕ್ರಮಣಕಾರಿ ಆಟವಾಡುವುದು. ಹೀಗೇನಾದರೂ ಆಡಿದರೆ ಎರಡೇ ದಿನಗಳಲ್ಲಿ ನೀವು ಸೋಲುವುದು ಖಚಿತ ಎಂದು ಮೊಹಮ್ಮದ್‌ ಸಿರಾಜ್‌ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇದು ಸ್ಪಿನ್‌ಬಾಲ್‌ ವರ್ಸಸ್‌ ಬಾಝ್ಬಾಲ್‌ ಸರಣಿ ಎಂದೇ ಸುದ್ದಿಯಾಗಿದೆ.

ಸತತ 16 ಸರಣಿ ಜಯ
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸಿ ಬಂದಿರುವ ಸ್ಫೂರ್ತಿ ಭಾರತ ತಂಡದ್ದಾಗಿದೆ. 2012ರಿಂದೀಚೆ ತವರಲ್ಲಿ ಸರಣಿಯನ್ನೇ ಸೋಲದ ಅಮೋಘ ದಾಖಲೆ ಕೂಡ ಟೀಮ್‌ ಇಂಡಿಯಾ ಹೆಸರಲ್ಲಿದೆ. ಅಂದು ಅಲಸ್ಟೇರ್‌ ಕುಕ್‌ ನೇತೃತ್ವದ ಇಂಗ್ಲೆಂಡ್‌ ತಂಡದ ವಿರುದ್ಧ 1-2ರಿಂದ ಸರಣಿ ಕಳೆದುಕೊಂಡ ಭಾರತ, ಅನಂತರ ಹಿಂದಿರುಗಿ ನೋಡಿದ್ದಿಲ್ಲ. ಸತತ 16 ಸರಣಿಗಳನ್ನು ಗೆದ್ದು ಬೀಗಿದೆ. ಇದರಲ್ಲಿ 7 ಸರಣಿಗಳನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

ಇದೇ ಅಂಕಿಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಅವಧಿಯಲ್ಲಿ ಆಡಿದ 44 ಟೆಸ್ಟ್‌ಗಳಲ್ಲಿ ಭಾರತ ಕೇವಲ ಮೂರರಲ್ಲಿ ಸೋತಿದೆ.

ತ್ರಿವಳಿ ಸ್ಪಿನ್‌ ದಾಳಿ
ಇಲ್ಲಿನ ಸ್ಪಿನ್‌ ಟ್ರ್ಯಾಕ್‌ಗಳು ಏಷ್ಯಾದ ಆಚೆಯ ಪ್ರತಿಯೊಂದು ತಂಡಕ್ಕೂ ಬಿಡಿಸಲಾಗದ ಒಗಟಾಗಿ ಪರಿಣಮಿಸಿವೆ. ಭಾರತದ ಸತತ ಸರಣಿ ಗೆಲುವಿನಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿದೆ. ಈ ಸರಣಿ ಕೂಡ ಇದಕ್ಕೆ ಹೊರತಲ್ಲ. ಹೈದರಾಬಾದ್‌ ಟ್ರ್ಯಾಕ್‌ ಸ್ಪಿನ್ನರ್‌ಗಳ ಸ್ವರ್ಗ ಎಂದು ಈಗಾಗಲೇ ಬಿಂಬಿತವಾಗಿದೆ. ಹೀಗಾಗಿ ಆಫ್ಸ್ಪಿನ್ನರ್‌ ಆರ್‌. ಅಶ್ವಿ‌ನ್‌, ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ, ಚೈನಾಮನ್‌ ಕುಲದೀಪ್‌ ಯಾದವ್‌ ಅವರ ತ್ರಿವಳಿ ಸ್ಪಿನ್‌ ದಾಳಿಯನ್ನು ಆಂಗ್ಲರು ಹೇಗೆ ನಿಭಾಯಿಸಲಿದ್ದಾರೆ ಎಂಬುದೊಂದು ಕುತೂಹಲ.

Advertisement

ಈ ಕಾರಣಕ್ಕಾಗಿಯೇ ಇಂಗ್ಲೆಂಡ್‌ ಕೂಡ ತ್ರಿವಳಿ ಸ್ಪಿನ್ನರ್‌ಗಳಿಗೆ ಮಣೆ ಹಾಕಿದೆ. ಜಾಕ್‌ ಲೀಚ್‌ ಪ್ರಧಾನ ಸ್ಪಿನ್ನರ್‌ ಆಗಿದ್ದಾರೆ. ಉಳಿದಿಬ್ಬರೆಂದರೆ ಲೆಗ್‌ಸ್ಪಿನ್ನರ್‌ ರೇಹಾನ್‌ ಅಹ್ಮದ್‌ ಮತ್ತು ಎಡಗೈ ಸ್ಪಿನ್ನರ್‌ ಟಾಮ್‌ ಹಾರ್ಟ್ಲಿ. ಇವರಲ್ಲಿ ಹಾರ್ಟ್ಲಿ ಪಾಲಿಗೆ ಇದು ಪದಾರ್ಪಣ ಟೆಸ್ಟ್‌ ಆಗಿದೆ.
ಇಂಗ್ಲೆಂಡ್‌ ಆಡುವ ಬಳಗದಲ್ಲಿರುವ ಏಕೈಕ ಸ್ಪೆಷಲಿಸ್ಟ್‌ ವೇಗಿ ಮಾರ್ಕ್‌ ವುಡ್‌. ಅನುಭವಿ ಜೇಮ್ಸ್‌ ಆ್ಯಂಡರ್ಸನ್‌ ಅವರನ್ನೂ ಆರಿಸದಿರುವುದು ಅಚ್ಚರಿ ಮೂಡಿಸಿದೆ.

ಐನೂರರತ್ತ ಅಶ್ವಿ‌ನ್‌
2012ರ ಬಳಿಕ ತವರಲ್ಲಿ 46 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಆರ್‌. ಅಶ್ವಿ‌ನ್‌ 283 ವಿಕೆಟ್‌ ಉರುಳಿಸಿ ಭಾರತದ ಜಯಭೇರಿಯ ಪ್ರಮುಖ ಪಾತ್ರಧಾರಿಯಾಗಿದ್ದಾರೆ. 95 ಟೆಸ್ಟ್‌ ಗಳಿಂದ ಇವರ ವಿಕೆಟ್‌ ಗಳಿಕೆ 490ಕ್ಕೆ ಬಂದು ನಿಂತಿದೆ. ಐನೂರರ ಕ್ಲಬ್‌ಗ ಸೇರಲು ಬರೀ 10 ವಿಕೆಟ್‌ ಬೇಕಿದೆ. ಈ ಸರಣಿಯಲ್ಲೇ ಅಶ್ವಿ‌ನ್‌ ನೂತನ ಎತ್ತರ ತಲುಪುವುದು ಖಂಡಿತ.

ಇದೇ ಅವಧಿಯಲ್ಲಿ ರವೀಂದ್ರ ಜಡೇಜ ತವರಿನ 39 ಟೆಸ್ಟ್‌ಗಳಲ್ಲಿ 191 ವಿಕೆಟ್‌ ಕೆಡವಿದ್ದಾರೆ. ಅಶ್ವಿ‌ನ್‌-ಜಡೇಜ ಒಟ್ಟು ಸೇರಿ 474 ವಿಕೆಟ್‌ ಉರುಳಿಸಿರುವುದು ಅಮೋಘ ಸಾಹಸವೇ ಸರಿ. ಹೀಗಾಗಿ ಈ ಸರಣಿಯಲ್ಲೂ ಈ ಸ್ಪಿನ್‌ ಜೋಡಿಯೇ ಭಾರತದ ಪಾಲಿನ “ಸೂಪರ್‌ ಪವರ್‌’ ಎನಿಸಲಿದೆ.

ಬ್ಯಾಟಿಂಗ್‌ ದುರ್ಬಲ
ಇಂಗ್ಲೆಂಡ್‌ನ‌ ಅನುಭವಿ ಬ್ಯಾಟರ್‌ಗಳಿಗೆ ಹೋಲಿಸಿದರೆ ಭಾರತದ ಬ್ಯಾಟಿಂಗ್‌ ವಿಭಾಗ ಬಹಳ ದುರ್ಬಲವಾಗಿ ಗೋಚರಿಸುತ್ತದೆ. ಅದರಲ್ಲೂ ವಿರಾಟ್‌ ಕೊಹ್ಲಿ ಗೈರು ದೊಡ್ಡ ಹೊಡೆತ ನೀಡುವುದು ಖಂಡಿತ. ನಮ್ಮಲ್ಲಿ ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟರ್‌ಗಳೇ ಇಲ್ಲ. ನಿಂತು ಆಡುವವರ, ಸುದೀರ್ಘ‌ ಜತೆಯಾಟ ನಡೆಸುವವರ ಕೊರತೆ ಇದೆ. ಹೀಗಾಗಿ ಇದು ಖಂಡಿತವಾಗಿಯೂ ವಿಶ್ವ ದರ್ಜೆಯ ಬ್ಯಾಟಿಂಗ್‌ ಲೈನ್‌ಅಪ್‌ ಅಲ್ಲ. ರೋಹಿತ್‌, ಅಯ್ಯರ್‌, ರಾಹುಲ್‌ ಮೇಲೆ ಬ್ಯಾಟಿಂಗ್‌ ಒತ್ತಡ ಬೀಳುವುದರಲ್ಲಿ ಅನುಮಾನವಿಲ್ಲ. ಜೈಸ್ವಾಲ್‌, ಗಿಲ್‌, ಭರತ್‌ ಕ್ರೀಸ್‌ ಆಕ್ರಮಿಸಿಕೊಳ್ಳಬೇಕಾದುದು ಅತ್ಯಗತ್ಯ. ಕೊಹ್ಲಿ ಬದಲು ಬಂದ ರಜತ್‌ ಪಾಟಿದಾರ್‌ ಅವಕಾಶ ಪಡೆಯುವ ಸಾಧ್ಯತೆ ಇಲ್ಲ.

ಇಂಗ್ಲೆಂಡ್‌ ಬ್ಯಾಟಿಂಗ್‌ ಸರದಿ ಅತ್ಯಂತ ಬಲಿಷ್ಠ. ಸ್ಟೋಕ್ಸ್‌, ಬೇರ್‌ಸ್ಟೊ, ರೂಟ್‌, ಪೋಪ್‌, ಕ್ರಾಲಿ, ಫೋಕ್ಸ್‌, ಡಕೆಟ್‌ ಅವರನ್ನೊಳಗೊಂಡಿದೆ. ಆದರೆ ಇವರು ಸ್ಪಿನ್‌ ಆಕ್ರಮಣವನ್ನು ನಿಭಾಯಿಸಿ ನಿಲ್ಲುವುದು ಮುಖ್ಯ!

ತಂಡಗಳು
ಭಾರತ
ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಕೆ.ಎಸ್‌. ಭರತ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌
ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ರೇಹಾನ್‌ ಅಹ್ಮದ್‌, ಮಾರ್ಕ್‌ ವುಡ್‌, ಟಾಮ್‌ ಹಾರ್ಟ್ಲಿ, ಜಾಕ್‌ ಲೀಚ್‌.

 ಆರಂಭ: ಬೆಳಗ್ಗೆ 9.30  ಪ್ರಸಾರ: ಸ್ಪೋರ್ಟ್ಸ್ 18

Advertisement

Udayavani is now on Telegram. Click here to join our channel and stay updated with the latest news.

Next