Advertisement
ಈ ಸರಣಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವ್ಯಾಪ್ತಿಗೆ ಬರುವುದರಿಂದ ಭಾರತಕ್ಕೆ ಹೆಚ್ಚು ಮಹತ್ವದ್ದಾಗಿದೆ. ಭಾರತ ದ್ವಿತೀಯ ತಂಡವಾಗಿ ಫೈನಲ್ ಪ್ರವೇಶಿಸುವ ಹೆಚ್ಚಿನ ಅವಕಾಶ ಹೊಂದಿರುವುದೇ ಇದಕ್ಕೆ ಕಾರಣ. ಹಾಗೆಯೇ ಇದು ಸುದೀರ್ಘ ಕೋವಿಡ್-19 ಬ್ರೇಕ್ ಬಳಿಕ ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯೆಂಬ ಕಾರಣಕ್ಕೆ ಎಲ್ಲರನ್ನೂ ತುದಿಗಾಗಲಲ್ಲಿ ನಿಲ್ಲಿಸಿದೆ.
ವಿಶ್ವದ ಯಾವುದೇ ಟ್ರ್ಯಾಕ್‌ಗಳಿಗೂ ಒಗ್ಗಿಕೊಳ್ಳಬಲ್ಲ ಸಾಕಷ್ಟು ಮಂದಿ ವಿಶ್ವ ದರ್ಜೆಯ ಕ್ರಿಕೆಟಿಗರು ಇಂಗ್ಲೆಂಡ್ ತಂಡ ದಲ್ಲಿದ್ದಾರೆ. ರೂಟ್, ಸ್ಟೋಕ್ಸ್, ಬಟ್ಲರ್, ಆ್ಯಂಡರ್ಸನ್ ಮತ್ತು ಬ್ರಾಡ್ ಇವರಲ್ಲಿ ಪ್ರಮುಖರು. ಮೊಯಿನ್ ಅಲಿ, ಆರ್ಚರ್ ಕೂಡ ಅಪಾಯಕಾರಿಗಳು. ಉಳಿದವರೆಲ್ಲ “ಯಂಗ್ ಗನ್ಸ್’. ಪೋಪ್, ಲಾರೆನ್ಸ್, ಲಂಕೆಯಲ್ಲಿ ಮಿಂಚಿದ ಸ್ಪಿನ್‌ದ್ವಯರಾದ ಲೀಚ್ ಮತ್ತು ಬೆಸ್ ಭಾರತದ ಟರ್ನಿಂಗ್ ಟ್ರ್ಯಾಕ್‌ಗಳಲ್ಲೂ ಮ್ಯಾಜಿಕ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಇಂಗ್ಲೆಂಡಿನ ಓಪನಿಂಗ್ ಮಾತ್ರ ದುರ್ಬಲ. ಏನೇ ಆದರೂ ಕೊಹ್ಲಿ ಪಡೆ ಆಂಗ್ಲ ರನ್ನು ತೀವ್ರ ಎಚ್ಚರಿಕೆಯಿಂದ ನಿಭಾಯಿಸಬೇಕಾದುದು ಅಗತ್ಯ.
Related Articles
ಈ ಸರಣಿಯಲ್ಲಿ ಭಾರತದ ಟೀಮ್ ಕಾಂಬಿನೇಶನ್‌ನಲ್ಲಿ ಕೆಲವು ಬದಲಾವಣೆ ಕಂಡುಬರಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ತಲೆ ಕೆಡಿಸಿಕೊಳ್ಳಬೇಕಿಲ್ಲ.ರೋಹಿತ್-ಗಿಲ್, ಪೂಜಾರ, ಕೊಹ್ಲಿ, ರಹಾನೆ, ಪಂತ್… ಈ 6 ಸ್ಥಾನಕ್ಕೆ ಸಿಮೆಂಟ್ ಹಾಕಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಅಶ್ವಿನ್, ಇಶಾಂತ್, ಬುಮ್ರಾ ಅನಿವಾರ್ಯ. ಉಳಿದೆರಡು ಸ್ಥಾನಗಳಿಗೆ ದೊಡ್ಡ ಸ್ಪರ್ಧೆಯೇ ಇದೆ. ಪಾಂಡ್ಯ, ಸುಂದರ್, ಠಾಕೂರ್, ಸಿರಾಜ್, ಪಟೇಲ್, ಕುಲದೀಪ್ ಅವರಲ್ಲಿ ಯಾರಿಗೆ ಲಕ್ ಹೊಡೆಯುತ್ತದೋ ನೋಡಬೇಕು. ಆಡುವ ಬಳಗದಿಂದ ಖಂಡಿತ ವಾಗಿಯೂ ಬೇರ್ಪಡುವವರೆಂದರೆ ರಾಹುಲ್, ಅಗರ್ವಾಲ್ ಮತ್ತು ಸಾಹಾ.
Advertisement
ಮೈಮರೆತರೆ ಅಪಾಯ!ಅನುಮಾನವೇ ಇಲ್ಲ, ಭಾರತೀಯರು ಕಾಂಗರೂ ನೆಲದಲ್ಲಿ ತೋರ್ಪಡಿಸಿದ ಪರಾಕ್ರಮ ಈ ಸರಣಿಗೂ ಸ್ಫೂರ್ತಿಯಾಗಲಿದೆ. ಜತೆಗೆ ತವರಿನಂಗಳದ ಲಾಭವೂ ಇದೆ. ಆದರೆ ಯಾವುದೇ ಕಾರಣಕ್ಕೂ ಈ ಎರಡು ಅಂಶಗಳನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ, ಮೈಮರೆಯುವಂತಿಲ್ಲ. ಆಗ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಇದು ನೂತನ ಆರಂಭ, ನೂತನ ಸವಾಲು. ಇಲ್ಲಿ ಭಾರತದ ಟೀಮ್ ಕಾಂಬಿನೇಶನ್ ಬದಲಾಗಲಿದೆ. ಕೊಹ್ಲಿ, ಇಶಾಂತ್ ತಂಡಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಬಹಳ ಜಾಣ್ಮೆ ಹಾಗೂ ಅಷ್ಟೇ ಪ್ರಬುದ್ಧ ನಾಯಕತ್ವ ನಿಭಾಯಿಸಿದ ರಹಾನೆ ಇಲ್ಲಿ ಕೇವಲ ಬ್ಯಾಟ್ಸ್‌ಮನ್ ಹಾಗೂ ಉಪನಾಯಕರಾಗಿ ಇರುತ್ತಾರೆ. ಅವರೇ ಹೇಳಿದಂತೆ, ಆಸ್ಟ್ರೇಲಿಯ ಸರಣಿ ಈಗ ಇತಿಹಾಸ. ಭಾರತವೀಗ ಇಂಗ್ಲೆಂಡ್ ತಂಡಕ್ಕೆ ಗೌರವ ನೀಡಬೇಕಿದೆ. ಹೌದು, ಆಸ್ಟ್ರೇಲಿಯಕ್ಕೆ ಹೋಲಿಸಿದರೆ ಇಂಗ್ಲೆಂಡ್ ಹೆಚ್ಚು ಬಲಿಷ್ಠ ಪಡೆ. ಶಿಸ್ತಿನ ಆಟಕ್ಕೆ ಹೆಸರುವಾಸಿ. ಕಾಂಗರೂಗಳಂತೆ ನಿಂದಿಸುವುದು, ಎದುರಾಳಿ ಆಟಗಾರರನ್ನು ಕೀಳಾಗಿ ಕಾಣುವುದು, ಹೇಗಾದರೂ ಮಾಡಿ ಗೆಲ್ಲಲು ವಾಮಮಾರ್ಗ ಹಿಡಿಯುವುದು ಇವರಿಗೆ ತಿಳಿದಿಲ್ಲ. ಆಂಗ್ಲರದ್ದೇನಿದ್ದರೂ ಸೀದಾ, ಸ್ವತ್ಛ ಆಟ.