Advertisement

ಟೆಸ್ಟ್‌ ಫ‌ಲಿತಾಂಶಕ್ಕಿಂತ ಪಿಚ್‌ ಕೌತುಕವೇ ಜಾಸ್ತಿ!ಭಾರತ-ಇಂಗ್ಲೆಂಡ್‌ ಅಂತಿಮ ಟೆಸ್ಟ್‌ ಪಂದ್ಯ

11:34 PM Mar 03, 2021 | Team Udayavani |

ಅಹ್ಮದಾಬಾದ್: ಆರಂಭದಲ್ಲಿ ವಿಶ್ವದ ದೈತ್ಯ ಸ್ಟೇಡಿಯಂ ಎಂದು ಸುದ್ದಿಯಾಗಿ, ಬಳಿಕ “ಡಸ್ಟ್‌ ಆಫ್ ಬೌಲ್‌’ ಎಂದು ಟೀಕೆಗೊಳಗಾದ ಅಹ್ಮದಾಬಾದ್‌ನಲ್ಲಿ ಭಾರತ-ಇಂಗ್ಲೆಂಡ್‌ ತಂಡಗಳು ಗುರುವಾರದಿಂದ ಮತ್ತೂಂದು ಟೆಸ್ಟ್‌ ಮುಖಾ ಮುಖೀಗೆ ಸಜ್ಜಾಗಿವೆ. ಈ ಪಂದ್ಯವನ್ನೂ ಗೆದ್ದು, ಇಲ್ಲವಾದರೆ ಕನಿಷ್ಠ ಡ್ರಾ ಮಾಡಿಕೊಂಡು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸ್ಥಾನವನ್ನು ಗಟ್ಟಿಗೊಳಿಸುವುದು ಟೀಮ್‌ ಇಂಡಿಯಾದ ಗುರಿ. ಭಾರತದ ಅವಕಾಶವನ್ನು ಹಾಳುಗೆಡವಿ, ಕೊನೆಯ ಲ್ಲೊಂದು ಜಯದೊಂದಿಗೆ ಗೌರವಯುತವಾಗಿ ಸರಣಿ ಮುಗಿಸುವುದು ಇಂಗ್ಲೆಂಡ್‌ ಯೋಜನೆ.

Advertisement

ಅಕಸ್ಮಾತ್‌ ಭಾರತ ಸೋತರೆ ಫೈನಲ್‌ ಅವಕಾಶ ಆಸ್ಟ್ರೇಲಿಯ ಪಾಲಾಗುತ್ತದೆಂಬುದು ಸದ್ಯದ ಲೆಕ್ಕಾಚಾರ. ಆದರೆ ಗೆದ್ದರೆ ಇಂಗ್ಲೆಂಡಿಗೂ ಅವಕಾಶ ಉಂಟೆಂಬುದು ಕುತೂಹಲದ ಸಂಗತಿ. ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸಿದ ಕಾರಣ ಆಸ್ಟ್ರೇಲಿಯದ ಗೆಲುವಿನ “ಪ್ರತಿಶತ ಅಂಕ’ ಕಡಿತಗೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಐಸಿಸಿ ಚಾವಡಿಯಿಂದ ಕೇಳಿ ಬಂದಿದೆ. ಹೀಗಾಗಿ ರೂಟ್‌ ಬಳಗವಿಲ್ಲಿ ಜಯ ಸಾಧಿಸಿದರೆ ಪ್ರಶಸ್ತಿ ಸುತ್ತಿಗೆ ನೆಗೆಯುವ ಸಾಧ್ಯತೆಯೂ ಇದೆ!

ಪಿಚ್‌ ವಿರುದ್ಧ ಆಕ್ರೋಶ
ಆದರೆ ಈ ಟೆಸ್ಟ್‌ ಚಾಂಪಿಯನ್‌ಶಿಪ್‌ ಲೆಕ್ಕಾಚಾರಕ್ಕಿಂತ ಮೊಟೆರಾ ಪಿಚ್‌ ಯಾವ ರೀತಿ ವರ್ತಿಸುತ್ತದೆ ಎಂಬ ಕುತೂಹಲವೇ ಜಾಸ್ತಿಯಾಗಿದೆ. ಇಲ್ಲೇ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯ ಎರಡೇ ದಿನ ಗಳಲ್ಲಿ ಮುಗಿದಾಗ ಮಾಜಿಗಳು, ಮಾಧ್ಯಮಗಳು, ಕ್ರಿಕೆಟ್‌ ವಿಶೇಷಜ್ಞರೆಲ್ಲ ಇಲ್ಲಿನ ಟ್ರ್ಯಾಕ್‌ ಅನ್ನು ಟೀಕಿಸಿದ್ದು ಅಷ್ಟಿಷ್ಟಲ್ಲ. ಇಂಗ್ಲೆಂಡಿಗರಿಗೆ ಸ್ಪಿನ್‌ ನಿಭಾವಣೆಯ ಕಲೆಗಾರಿಕೆ ತಿಳಿದಿಲ್ಲ ಎಂಬುದಕ್ಕಿಂತ ಮಿಗಿಲಾಗಿ ಐದು ದಿನದ ಟೆಸ್ಟ್‌ ದ್ವಿತೀಯ ದಿನವೇ ಮುಗಿದದ್ದೇ ದೊಡ್ಡ ಸುದ್ದಿಯಾಯಿತು.

ಟೆಸ್ಟ್‌ ಇತಿಹಾಸಲ್ಲಿ ಹಿಂದೆಯೂ ಪಂದ್ಯಗಳು ಎರಡು ದಿನದಲ್ಲಿ ಫ‌ಲಿತಾಂಶ ದಾಖಲಿಸಿದ್ದಿದೆ, ಇಂಥ ಸಾಕಷ್ಟು ಪಂದ್ಯಗಳು ಇಂಗ್ಲೆಂಡಿನಲ್ಲೇ ನಡೆದಿವೆ ಎಂಬ ಅಂಕಿಅಂಶವನ್ನು ಕೆದಕಲು ಯಾರೂ ಮುಂದಾಗಲಿಲ್ಲ ಎಂಬುದು ಮಾತ್ರ ವಿಪರ್ಯಾಸ.
ಮತ್ತೆ ಇಂಥ ಸ್ಥಿತಿ ಎದುರಾಗದಂತೆ, ಟೆಸ್ಟ್‌ ದ್ವಿತೀಯ ದಿನವೇ ಮುಗಿಯದಂತೆ ಬಿಸಿಸಿಐ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಮಾತ್ರ ಅನಿವಾರ್ಯ. ಇಲ್ಲವಾದರೆ ಇಲ್ಲಿನ ಪಿಚ್‌ ಐಸಿಸಿ ಕೆಂಗಣ್ಣಿಗೆ ಗುರಿಯಾಗುವ ಅಪಾಯ ತಪ್ಪಿದ್ದಲ್ಲ. ವಿಶ್ವದ ಬೃಹತ್‌ ಸ್ಟೇಡಿಯಂ ಇಂಥ ಸಂಕಟಕ್ಕೆ ಸಿಲುಕುವುದು ಯಾರಿಗೂ ಇಷ್ಟವಿಲ್ಲ.

3ನೇ ದಿನದಿಂದ ಸ್ಪಿನ್‌?
ತೃತೀಯ ಟೆಸ್ಟ್‌ಗೆಂದು ನಿರ್ಮಿಸಲಾದ ಟ್ರ್ಯಾಕ್‌ ಧೂಳುಮಯವಾಗಿತ್ತು. ಇಲ್ಲಿ ಭಾರತದ ಸ್ಪಿನ್ನರ್, ಅಷ್ಟೇಕೆ… ಇಂಗ್ಲೆಂಡಿನ ಪಾರ್ಟ್‌ಟೈಮ್‌ ಸ್ಪಿನ್ನರ್‌ ಜೋ ರೂಟ್‌ ಕೂಡ ವಿಕೆಟ್‌ ಉಡಾಯಿಸಿ ಬ್ಯಾಟ್ಸ್‌ಮನ್‌ಗಳಿಗೆ ಖೆಡ್ಡಾ ತೋಡಿದರು. ಸರಣಿಯ ಸ್ಪಿನ್‌ ಪ್ರಾಬಲ್ಯವನ್ನು ಇನ್ನೊಂದು ರೀತಿಯಲ್ಲೂ ಉಲ್ಲೇಖೀಸಬಹುದು. 3 ಪಂದ್ಯಗಳಲ್ಲಿ ಉರುಳಿದ ಇಂಗ್ಲೆಂಡಿನ 60 ವಿಕೆಟ್‌ಗಳಲ್ಲಿ 49 ವಿಕೆಟ್‌ಗಳು ಭಾರತದ ಸಿನ್ನರ್‌ಗಳ ಪಾಲಾಗಿವೆ. ಹೀಗಿರುವಾಗ ಅಂತಿಮ ಟೆಸ್ಟ್‌ನಲ್ಲೂ “ಟರ್ನಿಂಗ್‌ ಟ್ರ್ಯಾಕ್‌ ಮ್ಯಾಜಿಕ್‌’ ನಡೆ ಯದಿರಲು ಸಾಧ್ಯವೇ ಎಂಬುದೊಂದು ಪ್ರಶ್ನೆ.

Advertisement

ಇದು “ಬ್ಯಾಟಿಂಗ್‌ ಬ್ಯೂಟಿ ಟ್ರ್ಯಾಕ್‌’ ಆಗಿರಲಿದೆ ಎಂದು ಕೆಲವು ದಿನಗಳ ಹಿಂದೆ ಬಿಸಿಸಿಐ ಅಧಿಕಾರಿ ಯೊಬ್ಬರು ಹೇಳಿದ್ದರು. ಆದರೆ ಇದು ಸ್ಪಿನ್ನಿಗೆ ತಿರುಗದು ಎಂದೂ ಅವರೆಲ್ಲೂ ಹೇಳಿರಲಿಲ್ಲ. ಮೊದಲೆರಡು ದಿನ ಬ್ಯಾಟಿಂಗಿಗೆ ನೆರವಾಗಿ, ಬಳಿಕ ಭಾರತೀಯ ಮೈದಾನಗಳ ಸಂಪ್ರದಾಯದಂತೆ ಪಿಚ್‌ ಸ್ಪಿನ್ನಿಗೆ ತಿರುಗೀತು, ಆಗಲೂ ಆತಿಥೇಯರೇ ಮೇಲುಗೈ ಸಾಧಿಸುತ್ತಾರೆ ಎಂಬುದಾಗಿ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ತಂಡಗಳ ಕಾಂಬಿನೇಶನ್‌
ಪಿಚ್‌ ಹೊರತುಪಡಿಸಿದರೆ ತಂಡದ ಕಾಂಬಿ ನೇಶನ್‌ ಬಗ್ಗೆ ಕುತೂಹಲವಿದೆ. ಬುಮ್ರಾ ಹೊರ ನಡೆದಿರುವುದರಿಂದ ಈ ಜಾಗಕ್ಕೆ ಉಮೇಶ್‌ ಯಾದವ್‌ ಅಥವಾ ಸಿರಾಜ್‌ ಬರಬಹುದು. ಹಾಗೆಯೇ ವಾಷಿಂಗ್ಟನ್‌ ಸುಂದರ್‌ ಮತ್ತು ಕುಲದೀಪ್‌ ಯಾದವ್‌ ನಡುವೆಯೂ ಸ್ಪರ್ಧೆ ಇದೆ. ಬುಧವಾರ ಅಗರ್ವಾಲ್‌ ಕೂಡ ಕಠಿನ ಅಭ್ಯಾಸ ನಡೆಸಿದ್ದಾರೆ. ಅವರು ಗಿಲ್‌ ಬದಲು ಅವಕಾಶ ಪಡೆದಾರೇ? ಕುತೂಹಲವಿದೆ.

ಇಂಗ್ಲೆಂಡ್‌ ಹೆಚ್ಚುವರಿ ಸ್ಪಿನ್ನರ್‌ ಡಾಮ್‌ ಬೆಸ್‌ ಅವರನ್ನು ಆಡಿಸುವುದು ಖಚಿತ. ಕಳೆದ ಪಂದ್ಯದಲ್ಲಿ ಒಬ್ಬನೇ ಸ್ಪೆಷಲಿಸ್ಟ್‌ ಸ್ಪಿನ್ನರ್‌ನನ್ನು ಆಡಿಸಿ ರೂಟ್‌ ಪಡೆ ಕೈ ಸುಟ್ಟುಕೊಂಡಿತ್ತು.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಗಿಲ್‌/ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌/ಕುಲದೀಪ್‌ ಯಾದವ್‌, ಇಶಾಂತ್‌ ಶರ್ಮ, ಉಮೇಶ್‌ ಯಾದವ್‌/ ಸಿರಾಜ್‌.

ಇಂಗ್ಲೆಂಡ್‌: ಡೊಮಿನಿಕ್‌ ಸಿಬ್ಲಿ, ಜಾಕ್‌ ಕ್ರಾಲಿ, ಜಾನಿ ಬೇರ್‌ಸ್ಟೊ, ಜೋ ರೂಟ್‌ (ನಾಯಕ), ಬೆನ್‌ ಸ್ಟೋಕ್ಸ್‌, ಓಲೀ ಪೋಪ್‌, ಬೆನ್‌ ಫೋಕ್ಸ್‌, ಜೋಫ‌ ಆರ್ಚರ್‌, ಜಾಕ್‌ ಲೀಚ್‌, ಡಾಮ್‌ ಬೆಸ್‌, ಜೇಮ್ಸ್‌ ಆ್ಯಂಡರ್ಸನ್‌.

ಸ್ಪಿನ್‌ ಪಿಚ್‌ ಗದ್ದಲ ವಿಪರೀತವಾಗಿದೆ: ಕೊಹ್ಲಿ
ಅಹ್ಮದಾಬಾದ್‌, ಮಾ. 3: ಅಹ್ಮದಾಬಾದ್‌ನ ತೃತೀಯ ಟೆಸ್ಟ್‌ ಪಂದ್ಯ ಕೇವಲ ಎರಡು ದಿನದಲ್ಲಿ ಮುಗಿದ ಅನಂತರ ಪಿಚ್‌ ಗುಣಮಟ್ಟದ ಬಗ್ಗೆ ಭಾರೀ ವಿವಾದಗಳೆದ್ದಿವೆ. ಈ ಬಗ್ಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

“ಸ್ಪಿನ್‌ ಪಿಚ್‌ಗಳ ಬಗ್ಗೆ ಗದ್ದಲ ವಿಪರೀತವಾಗಿದೆ. ನೀವು ಗೆಲ್ಲಲಿಕ್ಕಾಗಿ ಆಡುತ್ತೀರೋ ಅಥವಾ ಪಂದ್ಯ 5 ದಿನಗಳ ವರೆಗೆ ಎಳೆಯಬೇಕೆಂದು ಆಡುತ್ತೀರೋ? ನಾವು ಯಾವತ್ತೂ ವಿದೇಶಗಳಿಗೆ ತೆರಳಿದಾಗ ವೇಗದ ಬೌಲಿಂಗ್‌ ಪಿಚ್‌ಗಳ ಬಗ್ಗೆ ದೂರಿಲ್ಲ. ಬದಲಿಗೆ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಯತ್ನಿಸಿದ್ದೇವೆ. ಅದೇ ನಮ್ಮ ಯಶಸ್ಸಿಗೆ ಕಾರಣ’ ಎಂದು ಕೊಹ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next