Advertisement

ಟೀಮ್‌ ಇಂಡಿಯಾಕ್ಕೆ ಮನವಿ…ಬ್ಯಾಟಿಂಗ್‌ ನಡೆಸಿ, ಪಂದ್ಯ ಉಳಿಸಿ!

06:00 AM Aug 18, 2018 | Team Udayavani |

ನಾಟಿಂಗ್‌ಹ್ಯಾಮ್‌: ಬರ್ಮಿಂಗ್‌ಹ್ಯಾಮ್‌ ಮತ್ತು ಲಾರ್ಡ್ಸ್‌ ಟೆಸ್ಟ್‌ ಪಂದ್ಯಗಳಲ್ಲಿ ಇಂಗ್ಲೆಂಡಿಗೆ ಸ್ವಲ್ಪವೂ ಸವಾಲೊಡ್ಡದೆ ಹೀನಾಯವಾಗಿ ಸೋತಿರುವ ಪ್ರವಾಸಿ ಭಾರತ ತಂಡ ಶನಿವಾರದಿಂದ ಮತ್ತೂಂದು ಅಗ್ನಿಪರೀಕ್ಷೆ ಎದುರಿಸಬೇಕಿದೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಸರಣಿಯ 3ನೇ ಟೆಸ್ಟ್‌ ಆರಂಭವಾಗಲಿದ್ದು, ಕೊಹ್ಲಿ ಪಡೆ ಪಾಲಿಗೆ ಇದು ಮಾಡು-ಮಡಿ ಹೋರಾಟವಾಗಿದೆ. 

Advertisement

5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 0-2 ಹಿನ್ನಡೆ ಅನುಭವಿಸಿರುವ ಟೀಮ್‌ ಇಂಡಿಯಾ ಉಳಿದ ಮೂರೂ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವುದಂತೂ ಕನಸಿನ ಮಾತು. ಸ್ವತಃ ತಂಡದ ಸದಸ್ಯರಿಗೇ ಇಂಥದೊಂದು ನಂಬಿಕೆ ಇಲ್ಲ. ಕನಿಷ್ಠ ಸರಣಿ ಸಮಬಲಗೊಳಿಸೋಣ ಎಂದರೂ 2 ಟೆಸ್ಟ್‌ಗಳನ್ನು ಗೆಲ್ಲಲೇಬೇಕು, ಹಾಗೆಯೇ ಒಂದರಲ್ಲಿ ಸೋಲದೆ ಉಳಿಯಬೇಕು. ಭಾರತದ ಈಗಿನ ಸ್ಥಿತಿ ಕಂಡಾಗ ಈ ಲೆಕ್ಕಾಚಾರ ಕೂಡ ಕಠಿನವಾಗಿ ಗೋಚರಿಸುತ್ತಿದೆ.

ಐದೂವರೆ ದಿನಗಳಲ್ಲಿ ಮುಗಿದ 2 ಟೆಸ್ಟ್‌!
ಮೊದಲೆರಡು ಟೆಸ್ಟ್‌ ಪಂದ್ಯಗಳನ್ನು “ನಿರಾಯಾಸವಾಗಿ’ ಸೋತಿದ್ದರಿಂದ ಭಾರತ ತಂಡದ ಮೇಲೆ ಯಾರೂ ನಂಬಿಕೆ ಇಡುವ ಸ್ಥಿತಿಯಲ್ಲಿಲ್ಲ. ಎಜ್‌ಬಾಸ್ಟನ್‌ನಲ್ಲಿ 31 ರನ್ನುಗಳ ಸೋಲುಂಡ ಟೀಮ್‌ ಇಂಡಿಯಾ, ಬಳಿಕ ಲಾರ್ಡ್ಸ್‌ನಲ್ಲಿ ಇನ್ನಿಂಗ್ಸ್‌ ಹಾಗೂ 159 ರನ್ನುಗಳ ಹೀನಾಯ ಸೋಲಿಗೆ ತುತ್ತಾಯಿತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಎರಡೂ ಟೆಸ್ಟ್‌ಗಳನ್ನು ಭಾರತ ಕೇವಲ ಐದೂವರೆ ದಿನಗಳಲ್ಲಿ ಕಳೆದುಕೊಂಡಿತ್ತು. ಮಳೆ ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ!

ನಿಂತು ಆಡದಿರುವುದೇ ತಂಡದ ಈ ವಿಷಮ ಸ್ಥಿತಿಗೆ ಮುಖ್ಯ ಕಾರಣ ಎನ್ನಲಡ್ಡಿಯಿಲ್ಲ. ಟೆಸ್ಟ್‌ ಪಂದ್ಯಗಳಿಗೆ ಅಗತ್ಯವಾದ ಏಕಾಗ್ರತೆ, ತಾಳ್ಮೆ ಹಾಗೂ ಜವಾಬ್ದಾರಿಯ ಆಟ ಭಾರತೀಯರಿಗೆ ಮರೆತೇ ಹೋದಂತಿದೆ. ಇಂಗ್ಲೆಂಡ್‌ ನೆಲದಲ್ಲಿ ಯಶಸ್ಸು ಕಾಣಬೇಕಾದರೆ ಸ್ವಿಂಗ್‌ ಎಸೆತಗಳನ್ನು ನಿಭಾಯಿಸುವ ಕಲೆಗಾರಿಕೆ ಸಿದ್ಧಿಸಿರಬೇಕು, ಜತೆಗೆ ಸ್ವಿಂಗ್‌ ಬೌಲಿಂಗ್‌ ಬಲ್ಲ ಬೌಲರ್‌ಗಳಿರಬೇಕು. ಈ ಎರಡೂ ವಿಭಾಗಗಳಲ್ಲಿ ದೊಡ್ಡ ಶೂನ್ಯ ಆವರಿಸಿರುವುದು ಭಾರತ ತಂಡದ ದುರಂತ. ತೃತೀಯ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಆಡಿದರೆ ಭಾರತ ಒಂದಿಷ್ಟು ನಿರೀಕ್ಷೆಯಲ್ಲಿರಬಹುದು. 

ಮೊದಲ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಏಕಾಂಗಿ ಹೋರಾಟವನ್ನೇನೋ ತೋರ್ಪಡಿಸಿದರು. ಆದರೆ ದ್ವಿತೀಯ ಟೆಸ್ಟ್‌ಗೆ ಬರುವಾಗ ಕೊಹ್ಲಿ ಕೂಡ ವೈಫ‌ಲ್ಯ ಅನುಭವಿಸಿದರು. ಮೊದಲ ಸೋಲಿನ ಬಳಿಕ ಲಾರ್ಡ್ಸ್‌ ಪಂದ್ಯದ ಆಡುವ ಬಳಗದಲ್ಲಿ ಭಾರತ ನಿರೀಕ್ಷಿತ ಬದಲಾವಣೆಗಳನ್ನೇ ಮಾಡಿಕೊಂಡಿತ್ತು. ಧವನ್‌, ಯಾದವ್‌ ಅವರನ್ನು ಹೊರಗಿರಿಸಿ ಪೂಜಾರ ಮತ್ತು ಕುಲದೀಪ್‌ ಅವರನ್ನು ಆಡಿಸಿತು; ರಾಹುಲ್‌ಗೆ ಓಪನರ್‌ ಆಗಿ ಭಡ್ತಿ ನೀಡಲಾಯಿತು. ಆದರೆ ಫ‌ಲಿತಾಂಶ ಮಾತ್ರ ಭಿನ್ನವಾಗಲಿಲ್ಲ. 

Advertisement

ಮುಖ್ಯವಾಗಿ ಭಾರತಕ್ಕೆ ಆರಂಭಿಕರೇ ಕೈಕೊಡುತ್ತಿದ್ದಾರೆ. ಉದಾಹರಣೆಗೆ ಮುರಳಿ ವಿಜಯ್‌. ಇವರು ಭರವಸೆಯ ಓಪನರ್‌ ಏನೋ ಹೌದು, ಆದರೆ ವಿದೇಶಿ ದಾಖಲೆ ಅತ್ಯಂತ ಕಳಪೆ. 10 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ ವಿಜಯ್‌ ಗಳಿಕೆ ಕೇವಲ 128 ರನ್‌. ಕಳೆದ ಟೆಸ್ಟ್‌ನಲ್ಲಿ ಜೋಡಿ ಸೊನ್ನೆಯ ಕಳಂಕ ಮೆತ್ತಿಕೊಂಡಿದ್ದಾರೆ. ಶಿಖರ್‌ ಧವನ್‌ ಕೂಡ ಈ ವೈಫ‌ಲ್ಯಕ್ಕೆ ಹೊರತಲ್ಲ. ಆರಂಭಿಕರು ಕೈಕೊಟ್ಟಾಗ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿ ನಿಲ್ಲಬಲ್ಲ ದ್ರಾವಿಡ್‌-ಲಕ್ಷ್ಮಣ್‌ರಂಥ ಬ್ಯಾಟ್ಸ್‌ಮನ್‌ಗಳೀಗ ಕಾಣಿಸುತ್ತಿಲ್ಲ. 

ಬೆನ್‌ ಸ್ಟೋಕ್ಸ್‌ ಆಗಮನ
ಇಂಗ್ಲೆಂಡ್‌ ತಂಡ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಪುನ ರಾಗಮನದಿಂದ ಹೆಚ್ಚು ಬಲಿಷ್ಠಗೊಂಡಿದೆ. ಇವರಿಗಾಗಿ ಸ್ಯಾಮ್‌ ಕರನ್‌ ಹೊರಗುಳಿಯಲಿದ್ದಾರೆ. ಯಾವುದೇ ಒತ್ತಡವಿಲ್ಲದೆ ನಿಶ್ಚಿಂತೆಯಲ್ಲಿರುವ ರೂಟ್‌ ಪಡೆ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿ ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. 2014ರ ಸರಣಿಯ ವೇಳೆ ಇಲ್ಲಿನ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಿತ್ತು. ಭಾರತ 457 ಮತ್ತು 9ಕ್ಕೆ 391 ರನ್‌, ಇಂಗ್ಲೆಂಡ್‌ 496 ರನ್‌ ಪೇರಿಸಿ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತಿದ್ದವು.

38 ಟೆಸ್ಟ್‌, 38 ಕಾಂಬಿನೇಶನ್‌!
ಕೊಹ್ಲಿ ನಾಯಕರಾದ 38 ಟೆಸ್ಟ್‌ಗಳಲ್ಲಿ ಭಾರತ ಒಂದೇ ಕಾಂಬಿನೇಶನ್‌ ಹೊಂದಿದ 2 ಟೆಸ್ಟ್‌ಗಳನ್ನು ಆಡಿದ್ದಿಲ್ಲ! ಇದೀಗ ನಾಟಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯಕ್ಕೆ ಇನ್ನೂ ಕೆಲವು ಬದಲಾವಣೆ ಮಾಡಲು ಭಾರತ ಹೊರಡುವುದು ಖಂಡಿತ. ಇದರಲ್ಲಿ ಮುಖ್ಯವಾದುದು ಕೀಪರ್‌ ದಿನೇಶ್‌ ಕಾರ್ತಿಕ್‌ ಬದಲು ರಿಷಬ್‌ ಪಂತ್‌ ಅವರನ್ನು ಆಡಿಸುವುದು. ಇಂಥದೊಂದು ಸಾಧ್ಯತೆ ದಟ್ಟವಾಗಿದೆ. ಆಗ ಪಂತ್‌ಗೆ ಟೆಸ್ಟ್‌ ಬಾಗಿಲು ತೆರೆದಂತಾಗುತ್ತದೆ. ಈ ಸರಣಿಯಲ್ಲಿ ಕಾರ್ತಿಕ್‌ ಕೊಡುಗೆ ಎರಡು ಸೊನ್ನೆಗಳ ಜತೆಗೆ 20 ಹಾಗೂ ಒಂದು ರನ್‌. ಇನ್ನೊಂದೆಡೆ 20ರ ಹರೆಯದ ಪಂತ್‌ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ 2 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಅರ್ಧ ಶತಕ ಹೊಡೆದು ಬ್ಯಾಟಿಂಗ್‌ ಫಾರ್ಮ್ ತೋರ್ಪಡಿಸಿದ್ದಾರೆ. ಟೆಸ್ಟ್‌ನಲ್ಲಿ ನೆಲೆ ಕಾಣಬೇಕಾದರೆ ಆ್ಯಂಡರ್ಸನ್‌, ಬ್ರಾಡ್‌ ದಾಳಿಯನ್ನು ನಿಭಾಯಿಸಿ ನಿಲ್ಲಬೇಕಾದುದು ಅನಿವಾರ್ಯ.

ಸಂಭಾವ್ಯ ತಂಡಗಳು
ಭಾರತ: ಮುರಳಿ ವಿಜಯ್‌, ಕೆ.ಎಲ್‌. ರಾಹುಲ್‌/ಶಿಖರ್‌ ಧವನ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಬ್‌ ಪಂತ್‌/ದಿನೇಶ್‌ ಕಾರ್ತಿಕ್‌ (ವಿ.ಕೀ.), ಆರ್‌. ಅಶ್ವಿ‌ನ್‌, ಹಾರ್ದಿಕ್‌ ಪಾಂಡ್ಯ, ಇಶಾಂತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ.

ಇಂಗ್ಲೆಂಡ್‌: ಅಲಸ್ಟೇರ್‌ ಕುಕ್‌, ಕೀಟನ್‌ ಜೆನ್ನಿಂಗ್ಸ್‌, ಜೋ ರೂಟ್‌ (ನಾಯಕ), ಜಾನಿ ಬೇರ್‌ಸ್ಟೊ (ವಿ.ಕೀ.), ಕ್ರಿಸ್‌ ವೋಕ್ಸ್‌, ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಆದಿಲ್‌ ರಶೀದ್‌, ಓಲೀ ಪೋಪ್‌, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್‌ ಆ್ಯಂಡರ್ಸನ್‌.

Advertisement

Udayavani is now on Telegram. Click here to join our channel and stay updated with the latest news.

Next