Advertisement

ಇಂದು ಭಾರತ, ಇಂಗ್ಲೆಂಡ್‌ 2ನೇ ಅಭ್ಯಾಸ ಪಂದ್ಯ

03:45 AM Jan 12, 2017 | Team Udayavani |

ಮುಂಬಯಿ: ಧೋನಿ ನಾಯಕತ್ವದಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಸೋತಿರುವ ಭಾರತ “ಎ’ ತಂಡ ಗುರುವಾರ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯಕ್ಕೆ ಸಜ್ಜಾಗಿದೆ. 

Advertisement

ಆಜಿಂಕ್ಯ ರಹಾನೆ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಅವರು ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಬಹು ಕಾಲದಿಂದ ಟೀಂ ಇಂಡಿಯಾ ದಿಂದ ಹೊರಗುಳಿದಿರುವ ಸುರೇಶ್‌ ರೈನಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಿಲ್ಲಿ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಸ್ಥಾನ ಪಡೆದಿರುವುದು ವಿಶೇಷ.

ಜ. 15 ರಿಂದ ಭಾರತ, ಇಂಗ್ಲೆಂಡ್‌ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಹೀಗಾಗಿ ಏಕದಿನ ಸರಣಿ ಮೊದಲು ನಡೆಯುವ ಎರಡನೇ ಮತ್ತು ಕೊನೆಯ ಅಭ್ಯಾಸ ಪಂದ್ಯ ಎರಡೂ ತಂಡಗಳಿಗೂ ಮಹತ್ವದಾಗಿದೆ.

ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಆಗಿರುವ ರಿಷಭ್‌ ಪಂತ್‌ 19 ವರ್ಷದೊಳಗಿನ ಭಾರತ ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಕಳೆದ ಕಿರಿಯರ ವಿಶ್ವಕಪ್‌ನಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ವಿಶ್ವಕಪ್‌ನಲ್ಲಿ ರಿಷಭ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಪ್ರಸಕ್ತ ರಣಜಿ ಋತುವಿನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ದಿಲ್ಲಿ ತಂಡದಲ್ಲಿ ಆಡಿರುವ ರಿಷಭ್‌ 12 ಇನ್ನಿಂಗ್ಸ್‌ನಿಂದ 972 ರನ್‌ ಬಾರಿಸಿದ್ದಾರೆ. ಇದರಲ್ಲಿ ಒಂದು ತ್ರಿಶತಕವೂ (308) ಸೇರಿದೆ. ಕೇವಲ 19 ವರ್ಷದ ರಿಷಭ್‌ ಅಮೋಘವಾಗಿ ಆಡುವ ಮೂಲಕ ಭರವಸೆ ಮೂಡಿಸಿದ್ದಾರೆ. ವಿಕೆಟ್‌ ಕೀಪರ್‌ ಕೂಡ ಆಗಿರುವುದರಿಂದ ಮುಂದಿನ 2019ರ ಏಕದಿನ ವಿಶ್ವಕಪ್‌ ಹಿನ್ನೆಲೆಯಲ್ಲಿ ರಿಷಭ್‌ಗೆ ಸೂಕ್ತ ಸ್ಥಾನ ನೀಡಲಾಗಿದೆ. ರಿಷಭ್‌ ಮಹಾರಾಷ್ಟ್ರ ತಂಡದೆದುರು 308 ರನ್‌ ಹೊಡೆದಿದ್ದರು. ಇದರಲ್ಲಿ 9 ಸಿಕ್ಸರ್‌, 42 ಬೌಂಡರಿ ಸೇರಿತ್ತು.

ರಿಷಭ್‌ ಅವರನ್ನು ಧೋನಿ ಅವರ ಉತ್ತರಾಧಿಕಾರಿಯೆಂದು ಬಿಂಬಿಸಲಾಗಿದೆ. ಆದರೆ ರಿಷಭ್‌ ಅವರು ವಿಕೆಟ್‌ಕೀಪರ್‌ ತಥಾ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಝಾರ್ಖಂಡ್‌ನ‌ ಇಶಾನ್‌ ಕಿಶನ್‌ ಜತೆ ಸ್ಪರ್ಧೆ ನಡೆಸಬೇಕಾಗಿದೆ. ಆಕ್ರಮಣಕಾರಿ ಆಟಗಾರರಾಗಿರುವ ಕಿಶನ್‌ ಅವರನ್ನು ಆಯ್ಕೆಗಾರರು ಅಭ್ಯಾಸ ಪಂದ್ಯಕ್ಕೆ ತಂಡದ ವಿಕೆಟ್‌ಕೀಪರ್‌ ಆಗಿ ಆಯ್ಕೆ ಮಾಡಿದ್ದಾರೆ.

Advertisement

ರೈನಾ ಅವರಲ್ಲದೇ ವಿಜಯ್‌ ಶಂಕರ್‌, ಪರ್ವೇಜ್‌ ರಸೂಲ್‌, ದೀಪಕ್‌ ಹೂಡ, ವಿನಯ್‌ ಕುಮಾರ್‌, ಅಶೋಕ್‌ ದಿಂಡ, ಶಾಬಾಜ್‌ ನದೀಮ್‌ ಮತ್ತು ಪ್ರದೀಪ್‌ ಸಂಗ್ವಾನ್‌ ಅಭ್ಯಾಸ ಪಂದ್ಯದಲ್ಲಿ ಆಡಲಿದ್ದಾರೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಆಡದಿದ್ದ ಆಲ್‌ರೌಂಡರ್‌ಗಳಾದ ಬೆನ್‌ ಸ್ಟೋಕ್ಸ್‌, ವಿಕೆಟ್‌ಕೀಪರ್‌ ಜಾನಿ ಬೇರ್‌ಸ್ಟೋ ಮತ್ತು ವೇಗಿ ಲಿಯಮ್‌ ಪ್ಲಂಕೆಟ್‌ ಅವರನ್ನು ಎರಡನೇ ಅಭ್ಯಾಸ ಪಂದ್ಯದಲ್ಲಿ ಆಡಿಸುವ ಸಾಧ್ಯತೆಯಿದೆ. ಇನ್ನೂ ತಂಡವನ್ನು ಸೇರಿಕೊಳ್ಳದ ಜೋ ರೂಟ್‌ ಆಡುವುದು ಅನುಮಾನ. ಅವರು ಗುರುವಾರವಷ್ಟೇ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. 

ಆರಂಭಿಕ ಪಂದ್ಯ ಅಹರ್ನಿಶಿಯಾಗಿ ನಡೆದಿದ್ದರೆ 2ನೇ ಅಭ್ಯಾಸ ಪಂದ್ಯ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next