ಹೊಸದಿಲ್ಲಿ: ಉತ್ಪಾದಕರು ತಮ್ಮ ಆದ್ಯತೆಯಾಗಿ ಬಯಸುವ ದೇಶಗಳ ಪೈಕಿ ಭಾರತ ಅಮೆರಿಕವನ್ನೇ ಹಿಂದಿಕ್ಕಿದೆ. ಜಾಗತಿಕ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಕಶ್‌ಮನ್ ಆ್ಯಂಡ್ ವೇಕ್‌ಫೀಲ್ಡ್ ಈ ವರ್ಷದ ಜಾಗತಿಕ ಉತ್ಪಾದನ ಸವಾಲುಗಳ ಸೂಚ್ಯಂಕವನ್ನಾಧರಿಸಿ ಈ ಮಾಹಿತಿ ಯನ್ನು ನೀಡಿದೆ.
ಯುರೋಪ್, ಅಮೆರಿಕ, ಏಷ್ಯಾ ಪೆಸಿಫಿಕ್‌ನ 47 ರಾಷ್ಟ್ರಗಳ ಪರಿಸ್ಥಿತಿಯನ್ನು ಅವಲೋಕಿಸಿದೆ. ಉತ್ಪಾದಕರ ಪ್ರಕಾರ ಖರ್ಚು, ಸ್ಪರ್ಧಾತ್ಮಕತೆ, ಗುಣ ಮಟ್ಟಗಳನ್ನೆಲ್ಲವನ್ನೂ ಪರಿ ಶೀಲಿಸಿದರೆ, ಭಾರತ ಉತ್ಪಾದಕರಿಗೆ ಪ್ರಿಯ ವೆನಿಸಿಕೊಂಡಿದೆ. ಎಂದಿನಂತೆ ಚೀನ ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ.
ಕಳೆದ ವರ್ಷದ ಕಶ್‌ಮನ್ ಆ್ಯಂಡ್ ವೇಕ್‌ಫೀಲ್ಡ್ ಸೂಚ್ಯಂಕದಲ್ಲಿ ಅಮೆರಿಕ 2ನೇ ಸ್ಥಾನದಲ್ಲಿತ್ತು. ಭಾರತ 3ನೇ ಸ್ಥಾನದಲ್ಲಿತ್ತು. ಸದ್ಯ ಆಗಿರುವ ಈ ಬೆಳವಣಿಗೆ ನೋಡಿದರೆ, ಕೊರೊನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತ ಉದ್ಯಮಿಗಳ ಪ್ರೀತಿಯನ್ನು ಉಳಿಸಿಕೊಂಡಿದೆ ಮಾತ್ರವಲ್ಲ, ಹೆಚ್ಚಿಸಿಕೊಂಡಿದೆ ಎನ್ನಬಹುದು.
ಈ ವರ್ಷದ ಸೂಚ್ಯಂಕದಲ್ಲಿ ಚೀನ, ಭಾರತ, ಅಮೆರಿಕದ ಅನಂತರದ ಸ್ಥಾನಗಳನ್ನು ಕೆನಡಾ, ಚೆಕ್ ಗಣರಾಜ್ಯ, ಇಂಡೋನೇಷ್ಯಾ, ಲಿಥುವೇನಿಯ, ಥಾಯ್ಲೆಂಡ್, ಮಲೇಷ್ಯಾ, ಪೋಲೆಂಡ್‌ಗಳು ಪಡೆದುಕೊಂಡಿವೆ.
ಶ್ರೇಯಾಂಕದ ಮಾನದಂಡಗಳೇನು? :
ಉತ್ಪಾದನೆಯನ್ನು ಪುನಾರಂಭ ಮಾಡುವ ಸಾಮರ್ಥ್ಯ, ಔದ್ಯಮಿಕ ವಾತಾವರಣ (ಪ್ರತಿಭಾವಂತರು, ಕಾರ್ಮಿಕರು, ಮಾರುಕಟ್ಟೆಯ ಲಭ್ಯತೆ), ನಿರ್ವಹಣ ವೆಚ್ಚ, ಸವಾಲುಗಳನ್ನು (ರಾಜಕೀಯವಾಗಿ, ಆರ್ಥಿಕವಾಗಿ, ಪ್ರಾಕೃತಿಕವಾಗಿ) ಪರಿಗಣಿಸಿ ಉತ್ಪಾದನ ಪ್ರಿಯತೆಯ ಶ್ರೇಯಾಂಕ ನೀಡಲಾಗುತ್ತದೆ.